ಮೀಸಲಾತಿ ಮೂಲಭೂತ ಹಕ್ಕಲ್ಲ : ಸುಪ್ರೀಂ ಕೋರ್ಟ್

Update: 2020-02-08 14:15 GMT

ಹೊಸದಿಲ್ಲಿ,ಫೆ.8: ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯು ಮೂಲಭೂತ ಹಕ್ಕು ಅಲ್ಲ,ಪರಿಶಿಷ್ಟ ಜಾತಿಗಳು ಮತ್ತು ವರ್ಗಗಳಿಗೆ ಮೀಸಲಾತಿಯನ್ನು ಒದಗಿಸುವಂತೆ ನ್ಯಾಯಾಲಯಗಳು ಸರಕಾರಕ್ಕೆ ಆದೇಶಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪೊಂದರಲ್ಲಿ ಹೇಳಿದೆ.

ನೇಮಕಾತಿ ಮತ್ತು ಭಡ್ತಿಗಳಲ್ಲಿ ಮೀಸಲಾತಿ ಒದಗಿಸಬೇಕೇ ಎಂದು ನಿರ್ಧರಿಸುವುದು ರಾಜ್ಯ ಸರಕಾರದ ವಿವೇಚನಾಧಿಕಾರವಾಗಿದೆ ಮತ್ತು ಕಡ್ಡಾಯವಾಗಿ ಮೀಸಲಾತಿಯನ್ನು ಒದಗಿಸಲು ಸರಕಾರಗಳು ಬದ್ಧವಾಗಿಲ್ಲ ಎಂದು ಅದು ತಿಳಿಸಿದೆ.

ರಾಜ್ಯ ಸರಕಾರವು ಮೀಸಲಾತಿಯನ್ನು ಒದಗಿಸಲು ಬಯಸಿದಾಗ ಉದ್ಯೋಗಗಳಲ್ಲಿ ಎಸ್‌ಸಿಗಳು ಮತ್ತು ಎಸ್‌ಟಿಗಳ ಪ್ರಾತಿನಿಧ್ಯದ ಕೊರತೆಗೆ ಸಂಬಂಧಿಸಿದಂತೆ ದತ್ತಾಂಶಗಳನ್ನು ಸಂಗ್ರಹಿಸಲು ಬದ್ಧವಾಗಿದೆ,ಇಲ್ಲದಿದ್ದರೆ ದತ್ತಾಂಶಗಳನ್ನು ಸಂಗ್ರಹಿಸಬೇಕಿಲ್ಲ ಎಂದು ನ್ಯಾಯಮೂರ್ತಿ ಗಳಾದ ಎಲ್.ನಾಗೇಶ್ವರ ರಾವ್ ಮತ್ತು ಹೇಮಂತ ಗುಪ್ತಾ ಅವರ ಪೀಠವು ಸ್ಪಷ್ಟಪಡಿಸಿದೆ. ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿಂದಿನ ತೀರ್ಪುಗಳನ್ನು ತಾನು ನೆಚ್ಚಿಕೊಂಡಿರುವುದಾಗಿ ಪೀಠವು ತಿಳಿಸಿದೆ.

 ಸಂವಿಧಾನದ ವಿಧಿ 16ರಡಿ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿ ಒದಗಿಸಬೇಕೇ ಎಂದು ನಿರ್ಧರಿಸುವುದು ರಾಜ್ಯ ಸರಕಾರದ ವಿವೇಚನಾಧಿಕಾ ರವಾಗಿದೆ ಎಂದಿರುವ ಸರ್ವೋಚ್ಚ ನ್ಯಾಯಾಲಯವು, ಸರಕಾರಿ ಉದ್ಯೋಗಗಳಲ್ಲಿ ನೇಮಕಾತಿಗೆ ಮೀಸಲಾತಿ ಒದಗಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡುವಂತಿಲ್ಲ. ಭಡ್ತಿಯ ವಿಷಯಗಳಲ್ಲಿ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿಯನ್ನು ಒದಗಿಸುವ ಬಾಧ್ಯತೆ ರಾಜ್ಯ ಸರಕಾರಕ್ಕೆ ಇಲ್ಲ ಎಂದು ತಿಳಿಸಿದೆ.

ಆದರೆ ರಾಜ್ಯ ಸರಕಾರಗಳು ತಮ್ಮ ವಿವೇಚನಾಧಿಕಾರವನ್ನು ಬಳಸಿ ಮೀಸಲಾತಿಯನ್ನು ಒದಗಿಸಲು ಬಯಸಿದ್ದರೆ ಆ ವರ್ಗದ ಹುದ್ದೆಗಳಲ್ಲಿ ಎಸ್‌ಸಿ/ಎಸ್‌ಟಿಗಳ ಪ್ರಾತಿನಿಧ್ಯದ ಕೊರತೆಯನ್ನು ತೋರಿಸುವ ದತ್ತಾಂಶಗಳನ್ನು ಸಂಗ್ರಹಿಸಬೇಕು,ಏಕೆಂದರೆ ಮೀಸಲಾತಿ ನೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಅಲ್ಲಿ ಮಂಡಿಸಲು ಈ ಅಂಕಿಅಂಶಗಳು ಅಗತ್ಯವಾಗಿವೆ ಎಂದೂ ಸರ್ವೋಚ್ಚ ನ್ಯಾಯಾಲಯವು ಹೇಳಿತು.

ಉತ್ತರಾಖಂಡ ಸರಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಭಡ್ತಿಗಳಲ್ಲಿ ಎಸ್‌ಸಿ/ಎಸ್‌ಟಿಗಳಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.

ಮೀಸಲಾತಿಯನ್ನು ಒದಗಿಸದಿರಲು ಉತ್ತರಾಖಂಡ ಸರಕಾರವು ನಿರ್ಧರಿಸಿತ್ತು. ಎಸ್‌ಸಿ/ಎಸ್‌ಟಿಗಳ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ಮೊದಲು ಸಂಗ್ರಹಿಸಿ ಬಳಿಕ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಉತ್ತರಾಖಂಡ ಉಚ್ಚ ನ್ಯಾಯಾಲಯವು ಸರಕಾರಕ್ಕೆ ನಿರ್ದೇಶ ನೀಡಿತ್ತು. ಅಲ್ಲದೆ ಭವಿಷ್ಯದಲ್ಲಿ ಭಡ್ತಿಗಳ ಮೂಲಕ ಭರ್ತಿ ಮಾಡಲಾಗುವ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳನ್ನೇ ನೇಮಕ ಮಾಡಬೇಕು ಎಂದೂ ಅದು ಆದೇಶಿಸಿತ್ತು.

ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಯದ ಈ ನಿರ್ದೇಶಗಳು ಅಸಮರ್ಥನೀಯವಾಗಿದೆ ಎಂದು ಹೇಳಿದ ಪೀಠವು,ಅವುಗಳನ್ನು ತಳ್ಳಿಹಾಕಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News