ರೈತರ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ: ಬಿಜೆಪಿ ಆಡಳಿತದ ಹಲವು ರಾಜ್ಯಗಳ ಶಿಫಾರಸು ತಿರಸ್ಕರಿಸಿದ್ದ ಮೋದಿ ಸರಕಾರ

Update: 2020-02-08 16:09 GMT

ಹೊಸದಿಲ್ಲಿ,ಫೆ.8: ಬಿಜೆಪಿ ಆಡಳಿತದ ರಾಜ್ಯಗಳು ಸೇರಿದಂತೆ ಹಲವಾರು ರಾಜ್ಯಸರಕಾರಗಳು ತಮ್ಮ ರಾಜ್ಯದ ಬೆಳೆಗಳಿಗೆ ಕೇಂದ್ರ ಸರಕಾರ ನಿಗದಿಪಡಿಸಿದ ಬೆಂಬಲ ಬೆಲೆಗೆ ಒಪ್ಪಿಕೊಂಡಿರಲಿಲ್ಲ ಹಾಗೂ ಬೆಂಬಲ ಬೆಲೆಯಲ್ಲಿ ಬದಲಾವಣೆಯನ್ನು ಆಗ್ರಹಿಸಿದ್ದವು ಎಂದು ಸುದ್ದಿ ಜಾಲತಾಣ ‘Thewire.in’ ಶನಿವಾರ ಬಹಿರಂಗಪಡಿಸಿದೆ.

ಆರ್‌ಟಿಐ ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಯ ಮೂಲಕ ‘Thewire.in’ಗೆ ಲಭ್ಯವಾದ ಅಧಿಕೃತ ದಾಖಲೆಗಳಿಂದ ಈ ವಿಷಯ ಬೆಳಕಿಗೆ ಬಂದಿದೆ. ಕಳೆದ ವರ್ಷದ ಜುಲೈ 2ರಂದು ಕೇಂದ್ರ ಸಂಪುಟವು 2019-20ನೇ ಸಾಲಿನಲ್ಲಿ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಅನುಮೋದನೆ ನೀಡಿತ್ತು. 2018-19ನೇ ಸಾಲಿಗೆ ಹೋಲಿಸಿದರೆ, 2019-20ನೇ ಸಾಲಿನಲ್ಲಿ ಭತ್ತಕ್ಕೆ ಶೇ.3.7, ಜೋಳಕ್ಕೆ ಶೇ.4.9, ರಾಗಿಗೆ ಶೇ.2.6, ಮೆಕ್ಕೆ ಜೋಳಕ್ಕೆ 3.5 ಶೇ., ಕಡಲೆಗೆ 1.1 ಶೇ., ಉದ್ದಿಗೆ 1.8 ಶೇ. ಹಾಗೂ ಹತ್ತಿಗೆ 2.0 ಶೇಕಡದಷ್ಟು ಅಧಿಕ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿತ್ತು.

ಕೇಂದ್ರ ಕೃಷಿ ಸಚಿವಾಲಯದ ಅಧೀನದಲ್ಲಿರುವ ಕೃಷಿವೆಚ್ಚಗಳು ಹಾಗೂ ದರಗಳಿಗಾಗಿನ ಆಯೋಗದ ಶಿಫಾರಸುಗಳನ್ನು ಆಧರಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು ಬೆಲೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿತ್ತು.

  ಆದಾಗ್ಯೂ ಕರ್ನಾಟಕ, ಚತ್ತೀಸ್‌ಗಢ, ಹರ್ಯಾಣ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರಪ್ರದೇಶ, ಪುದುಚೇರಿ, ತಮಿಳುನಾಡು, ಒಡಿಶಾ ರಾಜ್ಯ ಸರಕಾರಗಳು ಅದನ್ನು ವಿರೋಧಿಸಿದ್ದವು, ಕನಿಷ್ಠ ಬೆಂಬಲ ಬೆಲೆಯಲ್ಲಿ ಗಣನೀಯ ಏರಿಕೆ ಮಾಡಬೇಕೆಂದು ಆಗ್ರಹಿಸಿರುವುದಾಗಿ ‘Thewire.in’ಗೆ ಲಭ್ಯವಾದ ದಾಖಲೆಗಳು ಬಹಿರಂಗಪಡಿಸಿವೆ.

ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳ ಅಭಿಪ್ರಾಯಗಳು ಸಂಪುಟ ಸಭೆಗೆ ಮುನ್ನವೇ ಕೇಂದ್ರ ಸರಕಾರಕ್ಕೆ ದೊರೆತಿದ್ದರೂ, ಸಂಪುಟ ಸಭೆಯ ಟಿಪ್ಪಣಿಯಲ್ಲಿ ಸೇರ್ಪಡೆಗೊಳಿಸಿರಲಿಲ್ಲ. ಯಾವುದೇ ವಿಷಯದ ಬಗೆಗಾದರೂ ಸಂಪುಟ ನಿರ್ಧರಿಸಬೇಕಾದರೆ, ಸಂಪುಟ ಟಿಪ್ಪಣಿಯು ಅತಿ ಮುಖ್ಯದಾಖಲೆಯಾಗಿರುತ್ತದೆ.

   ಕೇಂದ್ರ ಸರಕಾರವು ಪ್ರತಿ ಕ್ವಿಂಟಾಲ್ ಭತ್ತಕ್ಕೆ 1,815 ರೂ. ಕನಿಷ್ಠ ಬೆಂಬಲ ಬೆಲೆ ಘೋಷಿಸಿದ್ದರೆ, ಟಿಎಂಸಿ ಆಡಳಿತದ ಪ.ಬಂಗಾಳವು ಪ್ರತಿ ಕ್ವಿಂಟಾಲ್ ಭತ್ತಕ್ಕೆ 2,100 ಬೆಂಬಲ ಬೆಲೆ ದೊರೆಯಬೇಕೆಂದು ಪ್ರಸ್ತಾವಿಸಿತ್ತು. ಅದೇ ರೀತಿ ಚತ್ತೀಸ್‌ಗಢ ಕೂಡಾ ಖಾರಿಫ್ ಭತ್ತದ ಬೆಂಬಲ ಬೆಲೆಯಲ್ಲಿ ಹೆಚ್ಚಳವಾಗಬೇಕೆಂದು ಕೇಂದ್ರ ಸರಕಾರಕ್ಕೆ ಬೇಡಿಕೆ ಸಲ್ಲಿಸಿತ್ತು. ಮಹಾರಾಷ್ಟ್ರದ ಹಿಂದಿನ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ-ಶಿವಸೇನಾ ಸರಕಾರ ಕೂಡಾ ಕೇಂದ್ರ ಸರಕಾರ ನಿಗದಿಪಡಿಸಿದ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆಗೆ ವಿರೋಧ ವ್ಯಕ್ತಪಡಿಸಿತ್ತು.

    ಬಿಜೆಪಿ ಆಳ್ವಿಕೆಯ ಇನ್ನೊಂದು ರಾಜ್ಯವಾದ ಹರ್ಯಾಣ ಕೂಡಾ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲದರಲ್ಲಿ ಏರಿಕೆಯನ್ನು ಆಗ್ರಹಿಸಿದೆ. ಕೇಂದ್ರ ಸರಕಾರವು ಶಿಫಾ ರಸು ಮಾಡಿದ ಕನಿಷ್ಠ ಬೆಂಬಲ ದರವು ಬೆಳೆಗಳ ಕೃಷಿಗೆ ತಗಲಿದೆ ವೆಚ್ಚ್ಟಕ್ಕೆ ಕೂಡಾ ಸರಿಸಮಾನವಾಗಿಲ್ಲವೆಂದು ಹರ್ಯಾಣ ಆಕ್ಷೇಪ ವ್ಯಕ್ತಪಡಿಸಿತ್ತು. ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಬಿಜೆಪಿ ಸರಕಾರವು ಕೂಡಾ ಕೇಂದ್ರದ ಕನಿಷ್ಠ ಬೆಂಬಲ ಬೆಲೆಗೆ ಅಸಮ್ಮತಿಯನ್ನು ಸೂಚಿಸಿತ್ತು. ಎಂಎಸ್‌ಪಿಯನ್ನು ರಾಜ್ಯದ ಕೃಷಿ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ನಿಗದಿಪಡಿಸಬೇಕೆಂದು ಅದು ಒತ್ತಾಯಿಸಿತ್ತು.

ಸ್ವಾಮಿನಾಥನ್ ವರದಿಯ ಆಧಾರದಲ್ಲಿ ಬೆಂಬಲ ಬೆಲೆ ನಿಗದಿಗೆ ಶಿಫಾರಸು ಮಾಡಿದ್ದ ಕರ್ನಾಟಕ

  ಕರ್ನಾಟಕದ ಹಿಂದಿನ ಕುಮಾರಸ್ವಾಮಿ ನೇತೃತ್ವದ ಸರಕಾರವು 2019ರ ಜೂನ್ 29 ರಂದು ಕೇಂದ್ರ ಸರಕಾರಕ್ಕೆ ಬರೆದ ಪತ್ರದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಸ್ವಾಮಿನಾಥನ್ ಆಯೋಗದ ವರದಿಯ ಆಧಾರದಲ್ಲಿ ನಿಗದಿಪಡಿಸಬೇಕೆಂದು ಆಗ್ರಹಿಸಿತ್ತು ಹಾಗೂ ಕೇಂದ್ರದ ಕನಿಷ್ಠ ಬೆಂಬಲ ಬೆಲೆಯನ್ನು ವಿರೋಧಿಸಿತ್ತು. 2019-20ರ ಸಾಲಿಗಾಗಿ ಕೇಂದ್ರ ಸರಕಾರವು ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯು ರಾಜ್ಯದ ಕೃಷಿ ವೆಚ್ಚಕ್ಕೆ ಹೋಲಿಸಿದರೆ ಅತ್ಯಂತ ಅಸಮರ್ಪಕವಾದುದಾಗಿದೆ. ಯಾಕೆಂದರೆ ರೈತರ ಲಾಭದ ಮಿತಿಯು ಅತ್ಯಂತ ಕಡಿಮೆಯಿರುತ್ತದೆ ಅಥವಾ ಋಣಾತ್ಮಕವಾಗಿರುತ್ತದೆ ಎಂದು ರಾಜ್ಯ ಸರಕಾರವು ತಿಳಿಸಿತ್ತು.

    ರೈತರಿಗೆ ಪ್ರಸ್ತಾವಿತ ಕನಿಷ್ಠಬೆಂಬಲ ಬೆಲೆಯ ಜೊತೆಗೆ ಪರಿಹಾರಾತ್ಮಕವಾಗಿ ಬೋನಸ್ ಕೂಡಾ ನೀಡಲು ತಾನು ಪರಿಶೀಲಿಸುತ್ತಿರುವುದಾಗಿ ಕರ್ನಾಟಕ ಸರಕಾರ ತಿಳಿಸಿತ್ತು. ಇದರ ಜೊತೆಗೆ ರಾಜ್ಯದಲ್ಲಿ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕೂಡಾ ರಾಜ್ಯ ಸರಕಾರವು ತನ್ನ ಹತ್ತುಪುಟಗಳ ಪತ್ರದಲ್ಲಿ ನೀಡಿತು. ಆದರೆ ಕೇಂದ್ರ ಸರಕಾರವು ರಾಜ್ಯ ಸರಕಾರದ ಶಿಫಾರಸುಗಳನ್ನು ಸ್ವೀಕರಿಸಲಿಲ್ಲ. ಇದಾದ ಆನಂತರ ರಾಜ್ಯ ಸರಕಾರವು ತಾನಾಗಿಯೇ ಕಳೆದ ವರ್ಷದ ಡಿಸೆಂಬರ್‌ನಲ್ಲಿ ತೊಗರಿಯ ಕನಿಷ್ಠ ಬೆಂಬಲ ದರದಲ್ಲಿ ಪ್ರತಿ ಕ್ವಿಂಟಾಲ್‌ಗೆ 300 ರೂ. ಏರಿಕೆ ಮಾಡಿತ್ತು.

 ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಿದ ದತ್ತಾಂಶಗಳ ಪ್ರಕಾರ ಆಹಾರ ಮತ್ತು ಸಾರ್ವಜನಿಕ ವಿತರಣೆ, ಭಾರತೀಯ ಆಹಾರ ನಿಗಮ 2020 ಜನವರಿ 30ರವರೆಗೆ ಒಟ್ಟು 333.42 ಲಕ್ಷ ಮೆಟ್ರಿಕ್ ಟನ್ ಭತ್ತ ಹಾಗೂ 341.32 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ದೇಶಾದ್ಯಂತ ಖರೀದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News