ಕೋಲಾರ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಳಾಂತರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪ

Update: 2020-02-08 16:50 GMT

ಬೆಂಗಳೂರು, ಫೆ. 8: ನಾನು ರೈಲ್ವೆ ಮಂತ್ರಿ ಆಗಿದ್ದ ವೇಳೆ ಕೋಲಾರಕ್ಕೆ ನೀಡಿದ್ದ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಳಾಂತರಕ್ಕೆ ಕೇಂದ್ರ ಸರಕಾರದ ಮುಂದಾಗಿರುವುದು ಸರಿಯಲ್ಲ ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ಷೇಪಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನ್ನ ಮತ ಕ್ಷೇತ್ರದಲ್ಲಿದ್ದ ಕಾರ್ಯಕ್ರಮಕ್ಕೆ ಗೈರು ಹಾಜರಾಗಿ ನಾನು ಕೋಲಾರಕ್ಕೆ ಕೋಚ್ ಫ್ಯಾಕ್ಟರ್ ತರುವ ದೃಷ್ಟಿಯಿಂದ ಕೇಂದ್ರ ಸಂಪುಟ ಸಭೆಯಲ್ಲಿ ಪಾಲ್ಗೊಂಡಿದ್ದೆ. ಇದೀಗ ಆ ಫ್ಯಾಕ್ಟರಿಯನ್ನು ಬೇರೆಡೆಗೆ ಸ್ಥಳಾಂತರಕ್ಕೆ ನನ್ನ ವಿರೋಧವಿದೆ ಎಂದು ಹೇಳಿದರು.

ರೈಲ್ವೆ ಮಂತ್ರಿ ಆಗಿದ್ದ ವೇಳೆ ಕೋಲಾರ-ಚಿಕ್ಕಬಳ್ಳಾಪುರ, ಹರಿಹರ-ಕೊಟ್ಟೂರು, ಗದ್ವಾಲ್-ರಾಯಚೂರು, ಹುಬ್ಬಳ್ಳಿ-ಹೈದ್ರಾಬಾದ್, ಹುಬ್ಬಳ್ಳಿ-ಬೆಂಗಳೂರು ಹೊಸ ಮಾರ್ಗ ಮತ್ತು ಹೊಸ ರೈಲು ನೀಡಲಾಗಿತ್ತು. ಅಲ್ಲದೆ, ಮೈಸೂರು-ವಾರಣಾಸಿ ರೈಲ್ವೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ನಾನು ಎಂದೂ ಪ್ರಚಾರ ಬಯಸಲಿಲ್ಲ ಎಂದರು.

ಸಬ್ ಅರ್ಬನ್ ರೈಲ್ವೆಗೆ ಟೋಕನ್: ಸಬ್ ಅರ್ಬನ್ ರೈಲ್ವೆ ಯೋಜನೆಗೆ ಕೇಂದ್ರ ಸರಕಾರ ಕೇವಲ 1 ಕೋಟಿ ರೂ. ಟೋಕನ್ ನೀಡಿದೆ. ಈ ಹಣದಲ್ಲಿ ರೈಲ್ವೆ ಮಾರ್ಗದ ಸರ್ವೆಯನ್ನು ಮಾಡಲು ಆಗುವುದಿಲ್ಲ. ಹೊಸ ಯೋಜನೆ ಮಾಡುವ ಸಾಮರ್ಥ್ಯ ಇಲ್ಲ. ಹಳೆಯ ಯೋಜನೆ ಮುಂದುವರಿಸಲು ಆಸಕ್ತಿಯೂ ಇವರಿಗೆ ಇಲ್ಲ ಎಂದು ಟೀಕಿಸಿದರು.

ಅದೆಷ್ಟು ಕಲ್ಯಾಣವೋ..: ಕಲ್ಯಾಣ ಕರ್ನಾಟಕ ಎಂದು ಘೋಷಿಸಿದ್ದಾರೆ. ಹೆಸರಿನಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂದ ಅವರು, ಅಭಿವೃದ್ಧಿಗೆ ಅನುದಾನವನ್ನೇ ನೀಡುತ್ತಿಲ್ಲ. ಎಲ್ಲದಕ್ಕೂ ಸಿಎಂ ಮಂಜೂರಾತಿ ನೀಡಬೇಕು ಎಂದರೆ ಬಜೆಟ್ ಮಾಡುವ ಅಗತ್ಯವೇನಿದೆ ಎಂದು ಟೀಕಿಸಿದರು.

ಕಲಬುರ್ಗಿಗೆ ವಿಮಾನ ನಿಲ್ದಾಣ ತಂದದ್ದು ನಾನು. ಆದರೆ, ಸೌಜನ್ಯಕ್ಕೂ ವಿಮಾನ ನಿಲ್ದಾಣ ಉದ್ಘಾಟನೆಗೆ ನನ್ನನ್ನು ಆಹ್ವಾನ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸರಕಾರದಲ್ಲಿ ನಿತಿನ್ ಗಡ್ಕರಿ ಒಬ್ಬರು ಎಲ್ಲರನ್ನು ಪರಿಗಣಿಸುತ್ತಾರೆ. ಆದರೆ, ಅವರಿಗೆ ಸ್ವಾತಂತ್ರ್ಯ ಇಲ್ಲ ಎಂದರು.

ಹಾಲಿನಲ್ಲಿ ಸ್ವಲ್ಪನೀರು ಹಾಕಿದರೆ ಪರವಾಗಿಲ್ಲ. ಆದರೆ, ಬಿಜೆಪಿ ಸರಕಾರ ನೀರಿಗೇ ಹಾಲು ಹಾಕಿದರೆ ಇನ್ನೇನು ಮಾಡಲಿಕ್ಕೆ ಆಗುತ್ತದೆ. ಕೇಂದ್ರ ಬಜೆಟ್ ಆಗಿದೆ, ಇದೀಗ ರಾಜ್ಯ ಬಜೆಟ್ ಬರಲಿದ್ದು, ಬೆಂಗಳೂರು ಸುತ್ತಮುತ್ತಲಷ್ಟೇ ಯೋಜನೆ ಘೋಷಣೆ ನಡೆಯಲಿದೆ ಎಂದು ಟೀಕಿಸಿದರು.

ಮೋದಿ ಝೀರೋ ಲೈಟ್..

‘ಪ್ರಧಾನಿ ಮೋದಿ ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆಂದು ವಾಗ್ದಾನ ನೀಡಿದ್ದರು. ಆದರೆ, ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು ರಾಹುಲ್ ಗಾಂಧಿ ಬಗ್ಗೆ ವೈಯಕ್ತಿಕ ಹೇಳಿಕೆ ನೀಡುತ್ತಿದ್ದಾರೆ. ಟ್ಯೂಬ್‌ಲೈಟ್ ಬೆಳಕು ನೀಡುತ್ತದೆ. ಮೋದಿ ಒಂದು ರೀತಿ ಝೀರೋ ಲೈಟ್ ಇದ್ದಂತೆ. ಲೈಟ್ ಇರುತ್ತೆ, ಆದರೆ, ಬೆಳಕು ಬರುವುದಿಲ್ಲ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News