ಬಿಜೆಪಿ ಆಡಳಿತದಿಂದ ದೇಶದ ಆರ್ಥಿಕತೆ ಪಾತಾಳಕ್ಕೆ: ಮಾಜಿ ಸಚಿವ ಎಂ.ಬಿ.ಪಾಟೀಲ್ ಟೀಕೆ

Update: 2020-02-08 17:01 GMT

ವಿಜಯಪುರ, ಫೆ. 8: ಬಿಜೆಪಿ ಆಡಳಿತಾವಧಿಯಲ್ಲಿ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದ್ದು, ವಾರ್ಷಿಕ 2 ಕೋಟಿಯಷ್ಟು ಉದ್ಯೋಗ ನಷ್ಟವಾಗುತ್ತಿದ್ದು, ಯುವಜನತೆ ಕಂಗಾಲಾಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಆರ್ಥಿಕ ಹಿಂಜರಿತವಿದ್ದರೂ, ದೇಶದ ಆರ್ಥಿಕತೆಯನ್ನು ಗಟ್ಟಿಗೊಳಿಸಿದ್ದರು. ಆದರೆ, ಬಿಜೆಪಿ ಸರಕಾರ ಆರ್ಥಿಕ ಸುಧಾರಣೆ ಮಾಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಚುನಾವಣೆಗೆ ಮೊದಲು ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುವ ವಾಗ್ದಾನ ನೀಡಿದ್ದ ಪ್ರಧಾನಿ ಮೋದಿ, ಉದ್ಯೋಗ ಸೃಷ್ಟಿಸುವುದಿರಲಿ, ಇರುವ ಉದ್ಯೋಗ ನಷ್ಟವನ್ನು ತಡೆಯುವಲ್ಲಿ ಸೋತಿದ್ದಾರೆ. ಇದರ ಪರಿಣಾಮ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಉದ್ಯೋಗವಿಲ್ಲದೆ ಯುವಕರು ಸಂಕಷ್ಟದ ಸ್ಥಿತಿ ತಲುಪಿದ್ದಾರೆಂದು ಪಾಟೀಲ್ ಟೀಕಿಸಿದರು.

ರಾಜ್ಯದಲ್ಲಿ ಭೀಕರ ಸ್ವರೂಪದ ಪ್ರವಾಹ ಹಾಗೂ ಬರ ಪರಿಸ್ಥಿತಿ ಇದ್ದರೂ, ಕೇಂದ್ರ ಸರಕಾರ ಕೇವಲ 1,200 ಕೋಟಿ ರೂ.ಪರಿಹಾರ ನೀಡಿದೆ. ಜಿಎಸ್ಟಿ ಪಾಲನ್ನು ಕಡಿತ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಯಾವ ದಿಕ್ಕಿನಲ್ಲಿ ಸಾಗುತ್ತಿವೆ ಎಂದು ಪಾಟೀಲ್ ಲೇವಡಿ ಮಾಡಿದರು.

ದಿಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬವಾಗಿದ್ದು, ಶೀಘ್ರದಲ್ಲೆ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾಡುವ ಸಾಧ್ಯತೆಗಳಿವೆ. ನೇಮಕ ವಿಳಂಬದಿಂದ ಪಕ್ಷದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News