ಮೀಸಲಾತಿ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ ಎಂಬ ಸುಪ್ರೀಂ ತೀರ್ಪಿಗೆ ಹಿರಿಯ ವಕೀಲರ ಆಕ್ಷೇಪ

Update: 2020-02-09 14:39 GMT

ಬೆಂಗಳೂರು, ಫೆ. 9: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ರಾಜ್ಯ ಸರಕಾರ ಭಡ್ತಿಯಲ್ಲಿ ಮೀಸಲಾತಿ ನೀಡಲೇಬೇಕು ಎಂದಿಲ್ಲ. ಮೀಸಲಾತಿ ಮೂಲಭೂತ ಹಕ್ಕು ಎಂದು ಯಾವುದೇ ವ್ಯಕ್ತಿ ಪ್ರತಿಪಾದಿಸುವಂತಿಲ್ಲ’ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಹಿರಿಯ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಮೀಸಲಾತಿ ಮೂಲಭೂತ ಹಕ್ಕು ಅಲ್ಲ ಎಂದು ಹೇಳುವುದಾದರೆ ಸಂವಿಧಾನದ ಮೂಲ ಆಶಯವಾದ ಸಾಮಾಜಿಕ ನ್ಯಾಯದ ತತ್ವಕ್ಕೆ ಅರ್ಥವೇ ಇರುವುದಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಈ ತೀರ್ಪು ಲೋಪದಿಂದ ಕೂಡಿದೆ’ ಎಂದು ಸಂವಿಧಾನ ತಜ್ಞ, ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ರವಿವಾರ ‘ವಾರ್ತಾಭಾರತಿ’ ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ನೌಕರರ ಭಡ್ತಿ ಮೀಸಲಾತಿ ಸಂಬಂಧದ ಸುಪ್ರೀಂ ಕೋರ್ಟಿನ ಈ ತೀರ್ಮಾನ ಕಲಂ 335ರ ಸರಿಯಾದ ವ್ಯಾಖ್ಯಾನ ಅಲ್ಲ ಎಂದು ಇದೇ ವೇಳೆ ತಿಳಿಸಿದರು.

‘ಭಡ್ತಿಯಲ್ಲಿ ಮೀಸಲಾತಿ ನೀಡುವ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಂವಿಧಾನದ 16 (4) ಮತ್ತು 16 (4‘ಎ’) ವಿಧಿಗಳು ರಾಜ್ಯ ಸರಕಾರಕ್ಕೆ ನೀಡುತ್ತವೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ. ಆದರೆ, ಅದಕ್ಕೂ ಮೊದಲೇ ಎಸ್ಸಿ-ಎಸ್ಟಿ ವರ್ಗವನ್ನು ಪ್ರತ್ಯೇಕ ಎಂದು ಘೋಷಿಸಲಾಗಿದೆ. ಸಾಮಾಜಿಕ ಸಮಾನತೆ ಕಲ್ಪಿಸುವ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಸಂವಿಧಾನದ ಮೂಲ ಆಶಯದಲ್ಲಿನ ಅಂಶವನ್ನು ಪರಿಗಣಿಸಬೇಕಿತ್ತು. ಆದರೆ, ಈ ವಿಚಾರದಲ್ಲಿ ಕೋರ್ಟ್ ಪರಿಗಣಿಸಿಲ್ಲ. ಆದುದರಿಂದ ಈ ತೀರ್ಪು ಲೋಪದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟರು.

ಸಂವಿಧಾನ ವಿರೋಧಿ: ‘ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾಗಿರುವ ವ್ಯಕ್ತಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದಲೇ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಎಸ್ಸಿ-ಎಸ್ಟಿ ನೌಕರರ ಭಡ್ತಿ ಮೀಸಲಾತಿಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಸಂವಿಧಾನ ವಿರೋಧಿ’ ಎಂದು ಹೈಕೋರ್ಟಿನ ಹಿರಿಯ ನ್ಯಾಯವಾದಿ ಬಿ.ಟಿ.ವೆಂಕಟೇಶ್ ತಿಳಿಸಿದರು.

‘ಮೀಸಲಾತಿ ಮೂಲಭೂತ ಹಕ್ಕು ಎಂಬುದು ಸಂವಿಧಾನದ ಆಶಯ. ಆದರೆ, ಮೂಲಭೂತ ಹಕ್ಕು ಅಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ತಪ್ಪು ನಿರ್ಧಾರ. ಹೀಗಾದರೆ ಸಮಾಜದಲ್ಲಿ ತಾರತಮ್ಯಕ್ಕೆ ಒಳಗಾದವರಿಗೆ ಹೇಗೆ ಸಮಾನತೆ ಕಲ್ಪಿಸಲು ಸಾಧ್ಯ?’ ಎಂದು ಬಿ.ಟಿ.ವೆಂಕಟೇಶ್ ಪ್ರಶ್ನಿಸಿದರು.

'ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ':

‘ಮೀಸಲಾತಿ ಮೂಲಭೂತ ಹಕ್ಕು ಅಲ್ಲ ಎನ್ನುವ ಮೂಲಕ ಸುಪ್ರೀಂ ಕೋರ್ಟ್, ಸಾಮಾಜಿಕ ನ್ಯಾಯ ಮೂಲಭೂತ ಹಕ್ಕು ಅಲ್ಲ ಎಂದು ಪ್ರತಿಪಾದಿಸಿದೆ. ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ. ಹೀಗಾದರೆ ವಂಚಿತರಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಮಾನತೆ ಕಲ್ಪಿಸುವುದು ಹೇಗೇ?. ಉದ್ಯೋಗ ಸಿಕ್ಕರೂ ತಾರತಮ್ಯ ಮುಂದುವರಿಯುತ್ತಿದೆ ಎಂಬ ಕಾರಣಕ್ಕೆ ಭಡ್ತಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂಬ ಒತ್ತಾಯ ಇರುವುದು. ಹೀಗಾಗಿ ಕೋರ್ಟಿನ ಈ ತೀರ್ಪು ಸಾಮಾಜಿಕ ನ್ಯಾಯಕ್ಕೆ ವಿರುದ್ಧ’
-ಬಿ.ಎನ್.ಜಗದೀಶ್, ಹೈಕೋರ್ಟಿನ ವಕೀಲರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News