ವಕೀಲರಿಗೆ ಸೇವೆ ಮುಖ್ಯವಾಗಬೇಕು, ಹಣ ಮುಖ್ಯವಾಗಬಾರದು: ನ್ಯಾ.ರವಿ ಮಾಲಿಮಠ ಸಲಹೆ

Update: 2020-02-09 18:52 GMT

ಮಂಡ್ಯ, ಫೆ.9: ವಕೀಲರು ತಮ್ಮ ಬಳಿ ಬರುವ ಕಕ್ಷಿದಾರರು ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು. ಹಣವೇ ಮುಖ್ಯವಾಗಬಾರದು. ಹಣಕ್ಕಿಂತ ಸೇವೆ ಮುಖ್ಯವಾಗಲಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾಯಾಧೀಶ ರವಿ ಮಾಲಿಮಠ ಸಲಹೆ ನೀಡಿದ್ದಾರೆ.

ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘದ ವತಿಯಿಂದ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಎಡಿಆರ್ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಜನರಿಗೆ ನಾವು ಉತ್ತಮ ಸೇವೆ ಒದಗಿಸಿದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತದೆ. ಇದರಿಂದ ಸಮಾಜದಲ್ಲಿ ಗೌರವ ಸಿಗಲಿದೆ ಎಂದರು.

ಜನರಿಗೆ ಕಾನೂನಿನಡಿಯಲ್ಲಿ ಕೆಲಸ ನಿರ್ವಹಿಸುವ ಎಲ್ಲ ಅಧಿಕಾರಿಗಳಿಗೂ ಸಮಯ ಮುಖ್ಯವಾಗಿದೆ. ಪ್ರತಿಯೊಬ್ಬ ಅಧಿಕಾರಿಗೂ ತಮ್ಮದೇ ಆದ ವೈಯಕ್ತಿಕ ಜೀವನವಿರುತ್ತದೆ. ಕುಟುಂಬದವರೊಂದಿಗೆ ಹಾಗೂ ಆತ್ಮೀಯರೊಂದಿಗೆ ಕಾಲ ಕಳೆಯುವುದು ಮುಖ್ಯ. ಇದರಿಂದ ಮನಸ್ಸು ಉಲ್ಲಾಸವಾಗಿರಲು ಸಾಧ್ಯವಾಗುತ್ತದೆ. ಒತ್ತಡದಿಂದ ಮುಕ್ತವಾಗಲು ಇದು ಸಹಕಾರಿ ಎಂದು ಅವರು ಹೇಳಿದರು.

ಕಟ್ಟಡ ನಿರ್ಮಾಣ ಉತ್ತಮವಾಗಿದ್ದು, ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಕಾನೂನು ಸೇವೆಯಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು.  ನ್ಯಾಯಾಧೀಶರು ಹಾಗೂ ವಕೀಲರು ಸೇವಾ ಮನೋಭಾವ ಬೆಳೆಸಿಕೊಂಡು ಸಾರ್ವಜನಿಕರಿಗೆ ಸೇವೆ ನೀಡಬೇಕು ಎಂದು ಅವರು ಕಿವಿಮಾತು ಹೇಳಿದರು.

ನ್ಯಾಯಾಧೀಶ ಇಂದಿರೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಸತ್ರ ಹಾಗೂ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್.ಜೆ.ವಿಜಯಕುಮಾರಿ, ನ್ಯಾಯಾಧೀಶ ಬಸವರಾಜು, ಬಾರ್ ಕೌನ್ಸಿಲ್ ಅಧ್ಯಕ್ಷ ವಿಶಾಲ್‍ರಘು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ವರದರಾಜು, ನ್ಯಾಯಾಧೀಶೆ ಎನ್.ಡಿ.ಮಾಲಾ, ಅಪರ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News