ಸಿದ್ದಾಪುರ: ಪ್ರವಾಹ ಸಂತ್ರಸ್ತರಿಗೆ ನಿವೇಶನ ಕಲ್ಪಿಸಲು ಆಗ್ರಹಿಸಿ ಅಹೋರಾತ್ರಿ ಧರಣಿ

Update: 2020-02-10 07:45 GMT

ಸಿದ್ದಾಪುರ (ಕೊಡಗು), ಫೆ.10: ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ಐದು ತಿಂಗಳು ಕಳೆದರೂ ಸಂತ್ರಸ್ತರಿಗೆ ಶಾಶ್ವತ ನಿವೇಶನ ಕಲ್ಪಿಸಲು ಜಿಲ್ಲಾಡಳಿತ ವಿಫಲವಾಗಿದ್ದು, ಶಾಶ್ವತ ನಿವೇಶನ ಒದಗಿಸಲು ಒತ್ತಾಯಿಸಿ ಸಿದ್ದಾಪುರ ಗ್ರಾ.ಪಂ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ಆರಂಭಿಸಲಾಗಿದೆ.

ಸಂತ್ರಸ್ತರಾದ ಬೆಳ್ಯಮ್ಮ ಹಾಗೂ ಸುಶೀಲಾ ಧರಣಿಯನ್ನು ಉದ್ಘಾಟಿಸಿದರು.

ಸಂತ್ರಸ್ತರ ನಿವೇಶನ ಹೋರಾಟ ಸಮಿತಿಯ ನಾಯಕಿ ಯಮುನಾ ಮಾತನಾಡಿ, ಕಳೆದ ವರ್ಷದ ಪ್ರವಾಹದಲ್ಲಿ ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಗುಹ್ಯ, ಕರಡಿಗೋಡು ಭಾಗದ ನೂರಾರು ಮನೆಗಳು ನೆಲಸಮವಾಗಿದ್ದು, ನೂರಾರು ಸಂತ್ರಸ್ತರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರು. ಸಂತ್ರಸ್ತರಿಗೆ ಶೀಘ್ರದಲ್ಲಿ ಶಾಶ್ವತ ಸೂರು ಒದಗಿಸುವ ಬಗ್ಗೆ ಮುಖ್ಯಮಂತ್ರಿ, ಜಿಲ್ಲಾಡಳಿತ ಭರವಸೆಯನ್ನು ನೀಡಿತ್ತು. 2019ರ ಸೆಪ್ಟಂಬರ್ 30ರಂದು ಸಿದ್ದಾಪುರದಲ್ಲಿ ನಡೆದ ಪ್ರತಿಭಟನೆಯ ಸಂದರ್ಭ ಮೂರು ತಿಂಗಳಲ್ಲಿ ಶಾಶ್ವತ ನಿವೇಶನ ಒದಗಿಸಿಕೊಡುವುದಾಗಿ ಜಿಲ್ಲಾಧಿಕಾರಿ ಭರವಸೆಯನ್ನು ನೀಡಿದ್ದು, ಇದೀಗ ಭರವಸೆ ಕೊಟ್ಟು ನಾಲ್ಕು ತಿಂಗಳು ಕಳೆದರೂ ಸಂತ್ರಸ್ತರಿಗೆ ಸೂರು ಒದಗಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತದ ಯಾವುದೇ ಭರವಸೆಯ ಮಾತುಗಳು ಬೇಕಾಗಿಲ್ಲ. ಸಂತ್ರಸ್ತರಿಗೆ ಸೂರು ಒದಗಿಸುವವರೆಗೂ ಧರಣಿ ಮುಂದುವರೆಯಲಿದೆ ಎಂದರು.

ಸಮಿತಿಯ ಪ್ರಮುಖರಾದ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಸೋಮವಾರಪೇಟೆ ತಾಲೂಕಿನಲ್ಲಿ ತ್ವರಿತಗತಿಯಲ್ಲಿ ನಿವೇಶನ ಪ್ರಕ್ರಿಯೆ ನಡೆಯುತ್ತಿದ್ದು, ವಿರಾಜಪೇಟೆ ತಾಲೂಕಿನಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಸಿದ್ದಾಪುರ ಭಾಗದಲ್ಲಿ ಸರಕಾರಿ ಭೂಮಿ ಇದ್ದರೂ, ಕಂದಾಯ ಇಲಾಖೆ ಭೂಮಿಯನ್ನು ಗುರುತಿಸಿ, ಒತ್ತುವರಿ ತೆರವುಗೊಳಿಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಬಾಡಿಗೆ ಹಣವಾಗಿ ರೂ.5 ಸಾವಿರ ನೀಡುವುದಾಗಿ ಸರಕಾರ ತಿಳಿಸಿದ್ದು, ಬಾಡಿಗೆ ಹಣವನ್ನು ನಂಬಿಕೊಂಡು ಬಾಡಿಗೆ ಮನೆಯಲ್ಲಿ ಕೆಲವು ಸಂತ್ರಸ್ತರು ವಾಸವಾಗಿದ್ದಾರೆ. ಆದರೆ ಸಂತ್ರಸ್ತರಿಗೆ ಬಾಡಿಗೆ ಹಣವೂ ಕೂಡ ಲಭ್ಯವಾಗಿಲ್ಲ ಎಂದು ಆರೋಪಿಸಿದರು.

ಸರಕಾರ, ಜಿಲ್ಲಾಡಳಿತ, ತಾಲ್ಲೂಕಾಡಳಿತ ಹಾಗೂ ಗ್ರಾಮ ಪಂಚಾಯತ್ ಆಡಳಿತದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಧರಣಿಗೆ ನೂರಾರು ಮಹಿಳೆಯರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಸಾಥ್ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News