"ನಾನು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಬೇರೆ ರೀತಿಯಲ್ಲಿ ಚರ್ಚೆ ಮಾಡಿದ್ದೆವು. ಆದರೆ…"

Update: 2020-02-10 13:50 GMT

ಬೆಂಗಳೂರು, ಫೆ.10: ಖಾತೆ ಹಂಚಿಕೆ ವಿಚಾರದಲ್ಲಿ ನಾನು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಬೇರೆ ರೀತಿಯಲ್ಲಿ ಚರ್ಚೆ ಮಾಡಿದ್ದೆವು. ಆದರೆ, ನನಗೆ ವೈದ್ಯಕೀಯ ಶಿಕ್ಷಣ ಇಲಾಖೆ ಹಂಚಿಕೆ ಮಾಡಲಾಗಿದೆ ಎಂದು ಮಾಧ್ಯಮಗಳ ಮೂಲಕ ತಿಳಿಯಿತು ಎಂದು ನೂತನ ಸಚಿವ ಡಾ.ಕೆ.ಸುಧಾಕರ್ ಬೇಸರ ವ್ಯಕ್ತಪಡಿಸಿದರು.

ಸೋಮವಾರ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಖಾತೆ ಹಂಚಿಕೆ ಮಾಡಿರುವುದರಿಂದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ನಾನು ಬೇರೆ ಖಾತೆಗಾಗಿ ಅವರ ಚರ್ಚೆ ನಡೆಸಿದ್ದೆ. ಈ ವಿಚಾರದಲ್ಲಿ ಬಹಿರಂಗವಾಗಿ ಏನನ್ನೂ ಹೇಳುವುದಿಲ್ಲ. ನೇರವಾಗಿ ಮುಖ್ಯಮಂತ್ರಿಯ ಬಳಿಯೇ ಚರ್ಚಿಸುತ್ತೇನೆ ಎಂದರು.

ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಯಾವ ರೀತಿ ಅಭಿವೃದ್ಧಿಪರ ಕೆಲಸ ಮಾಡುತ್ತೇನೆ ಎಂಬುದನ್ನು ಕಾದು ನೋಡಿ. ಕೆಲವು ತಿಂಗಳು ಸಮಯಾವಕಾಶ ಕೊಟ್ಟರೆ, ಕೆಲಸ ಮಾಡಿ ತೋರಿಸುತ್ತೇನೆ ಎಂದು ಸುಧಾಕರ್ ಹೇಳಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಸರಕಾರ ಹೋದರೆ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಕನಸು ಕಾಣುತ್ತಿದ್ದಾರೆ. ಆದರೆ, ಅವರ ಕನಸು ಎಂದಿಗೂ ಈಡೇರುವುದಿಲ್ಲ. ಇನ್ನೂ ಮೂರು ವರ್ಷಗಳ ಕಾಲ ಅವರು ಮನೆಯಲ್ಲಿ ವಿಶ್ರಾಂತಿ ಪಡೆದುಕೊಂಡು ಇರಲಿ ಎಂದು ವ್ಯಂಗ್ಯವಾಡಿದ ಅವರು, ಇದು ಸತ್ತ ಸರಕಾರವಲ್ಲ, ಸಕ್ರಿಯವಾಗಿರುವ ಸರಕಾರ ಎಂದರು.

'ಎಂಟಿಬಿಗೂ ಒಳ್ಳೆಯದಾಗುತ್ತದೆ'

ಮಾಜಿ ಸಚಿವ ಎಂಟಿಬಿ ನಾಗರಾಜ್ ಹಾಗೂ ನನ್ನ ನಡುವಿನ ಸಂಬಂಧ ಅಭಿನಾಭಾವವಾದದ್ದು. ಅದು ಎಂದಿಗೂ ಬದಲಾಗುವುದಿಲ್ಲ. ಎಂಟಿಬಿ ನಾಗರಾಜ್‌ಗೆ ಸಚಿವ ಸ್ಥಾನ ಸಿಗುವವರೆಗೆ ನಾನು ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದೆ. ಆದರೆ, ಅವರಿಗೂ ಒಳ್ಳೆಯದಾಗುತ್ತದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ನಾನು ಪ್ರಮಾಣ ವಚನ ಸ್ವೀಕರಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News