'ನಾಲ್ಕು ತಿಂಗಳ ಕೂಸು ಪ್ರತಿಭಟನೆಗೆ ಹೋಗಲು ಸಾಧ್ಯವೇ?': ಶಾಹಿನ್ ಬಾಗ್ ಬಗ್ಗೆ ಸುಪ್ರೀಂ ಪ್ರಶ್ನೆ

Update: 2020-02-10 14:02 GMT

ಹೊಸದಿಲ್ಲಿ: ರಾಜಧಾನಿ ದಿಲ್ಲಿಯ ಶಾಹೀನ್ ಬಾಗ್‍ ನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆಯುತ್ತಿರುವ ನಿರಂತರ ಪ್ರತಿಭಟನೆ ವೇಳೆ ನಾಲ್ಕು ತಿಂಗಳ ಹಸುಳೆಯ ಮರಣದ ಕುರಿತಂತೆ ಸುಪ್ರೀಂ ಕೋರ್ಟ್ ಕೇಂದ್ರ  ಹಾಗೂ ದಿಲ್ಲಿ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

"ನಾಲ್ಕು ತಿಂಗಳ ಮಗು ಪ್ರತಿಭಟನೆಗೆ ಹೋಗಲು ಸಾಧ್ಯವೇ?'' ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ ಹಾಗೂ  ಶಾಹೀನ್ ಬಾಗ್‍ ನಲ್ಲಿ ಪ್ರತಿಭಟಿಸುತ್ತಿರುವ ಮಕ್ಕಳ ತಾಯಂದಿರ ಪರವಾಗಿ ಹಾಜರಾದ ವಕೀಲರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಹನ್ನೆರಡು ವರ್ಷದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತೆ ಝೆನ್ ಗುನರತನ್ ಸದವರ್ತೆ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆಗೆ ಪತ್ರ ಬರೆದು ಮಗುವಿನ ಸಾವಿನ ಕುರಿತು ತನಿಖೆ ನಡೆಸುವಂತೆ ಕೋರಿದ್ದನ್ನು ಗಣನೆಗೆ ತೆಗೆದುಕೊಂಡಿರುವ ನ್ಯಾಯಾಲಯ ಮೇಲಿನಂತೆ ಹೇಳಿದೆ.

ನಾಲ್ಕು ತಿಂಗಳ ಮಗು ಮುಹಮ್ಮದ್ ಜಹಾನ್‍ ನನ್ನು ಆತನ ಹೆತ್ತವರು ಪ್ರತಿ ದಿನ ಪ್ರತಿಭಟನಾ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದರು.  ತೀವ್ರ ಚಳಿಯ ವಾತಾವರಣದಿಂದ ಶೀತ ಹಾಗೂ ಉಸಿರುಗಟ್ಟುವಿಕೆಯಿಂದ ಮುಹಮ್ಮದ್ ಜನವರಿ 30ರಂದು ಮೃತಪಟ್ಟಿದ್ದ.

ಪರಿಸರ ಹೋರಾಟಗಾರ್ತಿ ಗ್ರೆಟಾ ತನ್ಬರ್ಗ್ ತನ್ನ ಪ್ರತಿಭಟನೆ ಮೊದಲು ಆರಂಭಿಸಿದಾಗ ಆಕೆಯೂ  ಸಣ್ಣವಳಿದ್ದಳು ಎಂದು ಪ್ರತಿಭಟನಕಾರರ ಪರ ವಕೀಲರು ನ್ಯಾಯಾಲಯಕ್ಕೆ ಮನಗಾಣಿಸುವ ಯತ್ನ ನಡೆಸಿದರಲ್ಲದೆ, ಶಾಹೀನ್ ಬಾಗ್ ಮಕ್ಕಳನ್ನು ಶಾಲೆಗಳಲ್ಲಿ `ಪಾಕಿಸ್ತಾನಿ' ಎನ್ನಲಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.

ಅಪ್ರಸ್ತುತ ವಾದಗಳನ್ನು ಮಂಡಿಸದಂತೆ ಈ ಸಂದರ್ಭ ಸಿಜೆಐ ವಕೀಲರಿಗೆ ಹೇಳಿದರಲ್ಲದೆ ಮಾತೃತ್ವದ ಮೇಲೆ ನಮಗೆ ಅತ್ಯುನ್ನತ ಗೌರವವಿದೆ ಎಂದರು.

ಮಗುವಿನ ಸಾವಿನ ಕುರಿತು ಸಿಜೆಐಗೆ ಪತ್ರ ಬರೆದಿದ್ದ ಸದವರ್ತೆ ಮುಂಬೈಯಲ್ಲಿ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಗಸ್ಟ್ 2018ರಲ್ಲಿ ಮುಂಬೈಯ ಅಪಾರ್ಟ್‍ ಮೆಂಟ್ ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದಾಗ ಹಲವರು ಪ್ರಾಣ ರಕ್ಷಿಸಿದ್ದರು.'

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News