ನಿರಾಶ್ರಿತರಿಗೆ ತಕ್ಷಣ ಅಗತ್ಯ ಸೌಲಭ್ಯ, ಪುನರ್ವಸತಿ ಕಲ್ಪಿಸಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2020-02-10 14:27 GMT

ಬೆಂಗಳೂರು, ಫೆ.10: ಬಾಂಗ್ಲಾದೇಶದ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಆರೋಪದಡಿ ಬೆಂಗಳೂರಿನ ದೇವರಬಿಸನಹಳ್ಳಿಯ ಕರಿಯಮ್ಮನ ಪ್ರದೇಶದಲ್ಲಿದ್ದ ಜೋಪಡಿಗಳನ್ನು ಬಲವಂತವಾಗಿ ತೆರವುಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರಾಶ್ರಿತರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಹಾಗು ಪುನರ್ ವಸತಿ ಕಲ್ಪಿಸುವ ಕುರಿತ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸಲು ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ಈ ಕುರಿತು ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಕರ್ನಾಟಕ(ಪಿಯುಸಿಎಸ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಪರಿಹಾರವಾಗಿ ಆ ಜೋಪಡಿ ಕಳೆದುಕೊಂಡ ನಿರಾಶ್ರಿತರಿಗೆ ಎರಡು ವಾರದಲ್ಲಿ ಆರ್ಥಿಕ ನೆರವು ಹಾಗೂ ಇತರೆ ಸೌಲಭ್ಯ ನೀಡುವ ಕುರಿತು ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಫೆ.26ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ವಕೀಲೆ ಮೈತ್ರಿಯಾ ಕಷ್ಣನ್ ಅವರು, ಬಿಬಿಎಂಪಿ ವಾರ್ಡ್ 151ರಲ್ಲಿ ಇರುವ ಮಂತ್ರಿ ಇಸ್ಪಾನ್ ಅಪಾರ್ಟ್‌ಮೆಂಟ್ ಮಾಲಕರು ದೇವರಬೀಸನಹಳ್ಳಿ ವ್ಯಾಪ್ತಿಯಲ್ಲಿ ಬಾಂಗ್ಲಾ ದೇಶದವರು ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಆ ಬಳಿಕ ತೆರವಿಗೆ ನೋಟಿಸ್ ಜಾರಿ ಮಾಡಿದ್ದಾರೆ ವಿನಹ ಯಾವುದೆ ತನಿಖೆಯಾಗಲಿ, ಸ್ಥಳ ಪರಿಶೀಲನೆಯಾಗಲಿ ನಡೆಸದೆ ಏಕಾಏಕಿ ಜೋಪಡಿಗಳನ್ನು ತೆರವುಗೊಳಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಸರಕಾರದ ಪರ ವಾದಿಸಿದ ವಕೀಲ ಶ್ರೀನಿಧಿ ಅವರು, ದೇವರಬೀಸನಹಳ್ಳಿ ವ್ಯಾಪ್ತಿಯ ಜೋಪಡಿಗಳಲ್ಲಿ ವಾಸುತ್ತಿದ್ದ ಜನರು ಆಂಧ್ರಪ್ರದೇಶ, ತೆಲಂಗಾಣ, ತ್ರಿಪುರಾ ಹಾಗೂ ರಾಜ್ಯದ ಇತರೆ ಜಿಲ್ಲೆಯವರಾಗಿದ್ದು, ಪರಿಹಾರ ಒದಗಿಸಲು ಅವರ ಬಗ್ಗೆ ಸ್ವವಿವರಗಳು ಸಿಗುತ್ತಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ನಿರಾಶ್ರಿತರಿಗೆ ಎರಡು ವಾರದಲ್ಲಿ ಆರ್ಥಿಕ ನೆರವು ಸೇರಿ ಇನ್ನಿತರ ಸೌಲಭ್ಯ ನೀಡುವ ಕುರಿತು ಪ್ರಮಾಣ ಪತ್ರ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

ಕರಿಯಮ್ಮನ ಅಗ್ರಹಾರ ವ್ಯಾಪ್ತಿಯ ಪ್ರದೇಶಗಳ ಜೋಪಡಿಗಳಲ್ಲಿ ವಾಸುತ್ತಿದ್ದವರು ರಾಯಚೂರು, ಹುಬ್ಬಳ್ಳಿ, ಧಾರವಾಡ ಸೇರಿ ಉತ್ತರ ಕರ್ನಾಟಕದ ಜಿಲ್ಲೆಯವರು ಹಾಗೂ ಅಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಬಿಹಾರದವರು. ಆದರೆ, ತರಾತುರಿಯಲ್ಲಿ ನೋಟಿಸ್ ನೀಡಿ ಬಲವಂತದಿಂದ ಜೋಪಡಿಗಳನ್ನು ತೆರವುಗೊಳಿಸಿದ್ದಾರೆ. ಮಾರತ್ತಹಳ್ಳಿ ಠಾಣಾ ಇನ್ಸ್‌ಪೆಕ್ಟರ್ ಹಾಗೂ ಬಿಬಿಎಂಪಿ ಸಹಾಯಕ ಎಕ್ಸಿಕ್ಯೂಟಿನ್ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News