ಖರ್ಗೆಯವರಿಗೆ ಮೀಸಲಾತಿ ನೀಡುವ ಅಗತ್ಯವಿದೆಯೇ: ಸಚಿವ ಸಿ.ಟಿ. ರವಿ ಪ್ರಶ್ನೆ

Update: 2020-02-10 17:26 GMT

ಚಿಕ್ಕಮಗಳೂರು, ಫೆ.10: ಸಮಸಮಾಜ ನಿರ್ಮಾಣ ಆಗುವರೆಗೂ ಮೀಸಲಾತಿ ಬೇಕು. ಅದಕ್ಕೆ ನನ್ನ ಸಹಮತವಿದೆ. ಖರ್ಗೆಯವರಿಗೂ ಮೀಸಲಾತಿ ನೀಡುವುದು ಎಷ್ಟಮಟ್ಟಿಗೆ ಸರಿ ಎಂಬುದನ್ನು ಅವರು ವಿಮರ್ಶೆ ಮಾಡಿಕೊಳ್ಳಲಿ ಎಂದ ಅವರು, ಬಲಾಡ್ಯರಿಗೆ ದಲಿತನ ಪಟ್ಟ ಬೇಡ, ಬಡ ದಲಿತರಿಗೆ ಪಟ್ಟಬೇಕು. ಬಡ ದಲಿತರಿಗೆ ಮೀಸಲಾತಿ ಸಿಗಬೇಕು. ಬಲಾಢ್ಯರು ಬಡದಲಿತರ ಮೀಸಲಾತಿ ಕಿತ್ತುಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂದು ಸಿಟಿ ರವಿ ಪ್ರಶ್ನಿಸಿದರು.

ಸೋಮವಾರ ಜಿಲ್ಲೆಯ ಕಳಸ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲಾತಿ ವಿರುದ್ಧ ಇದೇ ಮೊದಲ ಬಾರಿ ತೀರ್ಪು ಬಂದಿಲ್ಲ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಬಂದಿದೆ. ನಾವು ಅದಕ್ಕೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾರಣ ಎಂದು ಯಾವತ್ತೂ ಹೇಳಿಲ್ಲ ಎಂದರು.

ಮಲ್ಲಿಕಾರ್ಜುನ ಖರ್ಗೆ ಹಿರಿಯ ರಾಜಕಾರಣಿ. ಅವರು ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರ ಬಿಜೆಪಿ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇದು ಕಾಂಗ್ರೆಸ್‍ನವರ ಕೀಳು ಅಭಿರುಚಿಯನ್ನು ವ್ಯಕ್ತ ಮಾಡುತ್ತದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು.

ಸಮಸಮಾಜ ಶೀಘ್ರವೇ ನಿರ್ಮಾಣವಾಗಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ರವರು ಮೀಸಲಾತಿ 10 ವರ್ಷಕ್ಕೆ ಸೀಮಿತಗೊಳಿಸಿದ್ದರು. ಆದರೆ, ಅದು ಆಗದಿದ್ದಕ್ಕೆ ಕಾಲ ಕಾಲಕ್ಕೆ ವಿಸ್ತರಿಸಲಾಗಿದೆ ಎಂದ ಅವರು, ಬಡ್ತಿ ಮೀಸಲಾತಿ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರ ಸರಕಾರ ಅಗತ್ಯ ಕಾನೂನು ಮಾರ್ಪಡು ಮಾಡಿ ಮುಂದುವರಿಸುವ ಕೆಲಸ ಮಾಡಿದೆ. ಇದು ಗೊತ್ತಿದ್ದರೂ ಖರ್ಗೆ ಅವರು ಬೆಜೆಪಿ ವಿರುದ್ಧ ಆರೋಪ ಮಾಡುತ್ತಿರುವುದು ಕೀಳು ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಟೀಕಿಸಿದರು.

ಮೀಸಲಾತಿ ಸಂಬಂಧ ಯಾವಾಗೆಲ್ಲ  ತೀರ್ಪು ಬಂದಿದೆ ಎಂಬುದನ್ನು ಖರ್ಗೆ ಅವರು ಮನದಟ್ಟು ಮಾಡಿಕೊಳ್ಳಲಿ. ಆಗ ಸತ್ಯ ಯಾವುದು ಸುಳ್ಳು ಯಾವುದು ಎಂದು ಅರ್ಥವಾಗುತ್ತೆ. ಸುಪ್ರೀಂ ಕೋರ್ಟ್ ಸಂವಿಧಾನದ ವಿಶ್ಲೇಷಣೆಯಡಿಯಲ್ಲಿ ತೀರ್ಪು ನೀಡಿದೆ. ಖರ್ಗೆಯವರು ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತಿರುವುದು ಸಣ್ಣತನದ ರಾಜಕಾರಣ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News