ಮೀಸಲಾತಿ ಬಗ್ಗೆ ಸುಪ್ರೀಂ ತೀರ್ಪು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ: ಸಿದ್ದರಾಮಯ್ಯ

Update: 2020-02-10 16:11 GMT

ಬೆಂಗಳೂರು, ಫೆ.10: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆ-2018ರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಆಘಾತ ತಂದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಡ್ತಿ ವಿಚಾರದಲ್ಲಿ ಎಸ್ಸಿ-ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ತೀರ್ಮಾನಿಸಿದ್ದೆ. ಆದರೆ, ಈಗ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದಿರುವುದು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದರು.

ಸಮಾಜದಲ್ಲಿ ಬೇರು ಬಿಟ್ಟಿರುವ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ತಾರತಮ್ಯವನ್ನು ಸರಿಪಡಿಸುವುದಾದರೂ ಹೇಗೆ? ಸಂವಿಧಾನದ ಪರಿಚ್ಛೇದ 16, 16ಎ ನಲ್ಲಿ ಮೀಸಲಾತಿ ಕಡ್ಡಾಯವೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈಗ ನ್ಯಾಯಾಲಯ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದರೆ, ನ್ಯಾಯ ಕೇಳಿ ಹೋಗುವುದಾದರೂ ಎಲ್ಲಿಗೆ ಎಂದು ಅವರು ಹೇಳಿದರು.

ಮೀಸಲಾತಿ ರದ್ದುಪಡಿಸಬೇಕೆಂದು ಬಿಜೆಪಿ ನಿರಂತರವಾಗಿ ಪ್ರಯತ್ನ ನಡೆಸುತ್ತಲೇ ಬಂದಿದೆ. ಸಾಮಾಜಿಕ ನ್ಯಾಯದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಕರ್ನಾಟಕ ಸೇರಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈ ತೀರ್ಪಿನ ಎಳೆ ಹಿಡಿದುಕೊಂಡು ಮೀಸಲಾತಿಯನ್ನು ರದ್ದು ಮಾಡಿದರೂ ಆಶ್ಚರ್ಯವಿಲ್ಲ. ಇದರ ಭಾಗವೇ ಈ ತೀರ್ಪು ಇರಬಹುದು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶಿಸಿ, ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಅಲ್ಲದೇ, ಸರ್ವಪಕ್ಷಗಳ ಸಭೆ ಕರೆದು ಚರ್ಚೆ ನಡೆಸಲಿ. ಒಂದು ವೇಳೆ ಕೇಂದ್ರ ಸರಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ, ಕಾಂಗ್ರೆಸ್ ಪಕ್ಷದ ಬೀದಿಗಿಳಿದು ಜನಪರವಾಗಿ ಹೋರಾಟ ನಡೆಸಲು ತೀರ್ಮಾನಿಸಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಉತ್ತರಾಖಂಡ ರಾಜ್ಯದ ವಕೀಲರು ಈ ಪ್ರಕರಣದಲ್ಲಿ ಸೂಕ್ತವಾಗಿ ವಾದ ಮಂಡಿಸದಿರುವುದು ನೋಡಿದರೆ, ಇದು ಬಿಜೆಪಿಯ ಹುನ್ನಾರ ಇರಬಹುದು ಎಂಬ ಆತಂಕ ಕಾಡುತ್ತಿದೆ. ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಖಾಸಗೀಕರಣಗೊಂಡಲ್ಲಿ ಮೀಸಲಾತಿ ಜಾರಿಯಲ್ಲಿ ಇರುವುದಿಲ್ಲ. ಇದೀಗ, ಬಿಜೆಪಿ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ರಾಜ್ಯದಲ್ಲಿ ಹಣಕಾಸು ಪರಿಸ್ಥಿತಿ ಸರಿ ಇಲ್ಲದ ದಾರಿದ್ರ್ಯ ಸರಕಾರ ಆಡಳಿತದಲ್ಲಿದೆ. ನಾನು ಆಡಿರುವ ಈ ಪದದ ಬಗ್ಗೆ ಮುಖ್ಯಮಂತ್ರಿಗೆ ತಕರಾರು ಇದ್ದರೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಿ. ಈ ಸರಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ. ಶಿಕ್ಷಕರಿಗೆ ವೇತನ ಕೊಡಲು ಹಣಕಾಸಿನ ನೆರವಿಲ್ಲ. ಶಾಸಕರ ಪ್ರದೇಶಾಭಿವೃದ್ಧಿ ನಿಧಿಗೂ ಪೂರಕವಾಗಿ ಅನುದಾನ ನೀಡಿಲ್ಲ ಎಂದು ಅವರು ಹೇಳಿದರು.

ಯಡಿಯೂರಪ್ಪ ಸುಮ್ಮನೆ ಬುರುಡೆ ಬಿಟ್ಟುಕೊಂಡು ಓಡಾಡುತ್ತಿದ್ದಾರೆ. ಬಿಜೆಟ್ ಅಧಿವೇಶನದಲ್ಲಿ ನಾನು ಎಲ್ಲವನ್ನು ಬಿಚ್ಚಿಡುತ್ತೇನೆ. ಯಡಿಯೂರಪ್ಪ ಆಗಲಿ, ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ್ ಶೆಟ್ಟರ್ ಎಂದಾದರೂ ನಮ್ಮ ಸರಕಾರವನ್ನು ದರಿದ್ರ ಸರಕಾರ ಎಂದು ಕರೆದಿದ್ದಾರೆಯೇ? ಯಡಿಯೂರಪ್ಪ ಆತ್ಮಸಾಕ್ಷಿಗನುಗುಣವಾಗಿ ಹೇಳಲಿ ಉಪ ಚುನಾವಣೆಯಲ್ಲಿ ಖರ್ಚು ಮಾಡಿದ ಹಣ ಎಲ್ಲಿಂದ ಬಂತು ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ನಮ್ಮ ಸರಕಾರದಲ್ಲಿ ಎಲ್ಲವೂ ಪಾರದರ್ಶಕವಾಗಿತ್ತು. ನೆರೆಪೀಡಿತ ಜನರಿಗೆ ಒಂದು ರೂ.ಗಳಾದರೂ ಪರಿಹಾರ ನೀಡಿದ್ದಾರೆಯೇ? ರಾಜ್ಯದ ಜನ 25 ಮಂದಿ ಬಿಜೆಪಿ ಸಂಸದರನ್ನು ಗೆಲ್ಲಿಸಿ ಕಳುಹಿಸಿದ್ದಾರೆ. ಪ್ರಧಾನಿ ಅಥವಾ ಅಮಿತ್ ಶಾರನ್ನು ಒಮ್ಮೆಯಾದರೂ ಭೇಟಿಯಾಗಿ ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದಾರೆಯೇ ಎಂದು ಅವರು ಕೇಳಿದರು.

ನಮ್ಮನ್ನು ಬಿಟ್ಟು ಹೋದವರೆಲ್ಲ ಸಚಿವ ಸ್ಥಾನವನ್ನು ಪಡೆಯಲಿ. ಆದರೂ, ನಾವು ಸಚಿವರಾಗಲು ಹೋಗುತ್ತಿಲ್ಲ ಎಂದು ಹೇಳಿದ್ದರು. ಅವರನ್ನೆಲ್ಲ ಕಟ್ಟಿಕೊಂಡು ಯಡಿಯೂರಪ್ಪ ಯಾವ ರೀತಿ ಭ್ರಷ್ಟಾಚಾರ ರಹಿತ ಸರಕಾರ ಕೊಡುತ್ತಾರೋ ನೋಡೋಣ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News