ಕೊಡಗು ಜಿಲ್ಲೆಯಲ್ಲಿ ಭೂ ಪರಿವರ್ತನೆಗೆ ಅವಕಾಶ: ಆರ್.ಅಶೋಕ್

Update: 2020-02-10 17:59 GMT

ಬೆಂಗಳೂರು, ಫೆ.10: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಸ್ಥಗಿತಗೊಳಿಸಲಾಗಿದ್ದ ಭೂ ಪರಿವರ್ತನೆಯನ್ನು ಪುನಃ ಶರತ್ತುಬದ್ಧವಾಗಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಪರಿವರ್ತನೆ ಸ್ಥಗಿತಗೊಳಿಸಿದ ಬಳಿಕ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಮಂದಿ ಅರ್ಜಿ ಸಲ್ಲಿಸಿ, ಭೂ ಪರಿವರ್ತನೆಯನ್ನು ಪುನಃ ಆರಂಭಿಸುವಂತೆ ಮನವಿ ಮಾಡಿದ್ದಾರೆ ಎಂದರು.

ನೀರು ಗಾಲುವೆಗಳ ಬಳಿ ಬಫರ್ ರೆನ್ ನಿಗದಿ ಮಾಡಲು ನಿರ್ಧರಿಸಲಾಗಿದ್ದು, ಬೆಟ್ಟಗಳ ಮೇಲಿನಿಂದ ನೈಸರ್ಗಿಕವಾಗಿ ಹರಿದು ಬರುವ ನೀರನ್ನು ಮನೆ ಅಥವಾ ರೆಸಾರ್ಟ್‌ಗಳ ನಿರ್ಮಾಣದ ಸಂದರ್ಭದಲ್ಲಿ ಬೇರೆ ಕಡೆ ತಿರುಗಿಸಲಾಗುತ್ತಿತ್ತು. ಆದರೆ, ಈಗ ಅದಕ್ಕೆ ಅವಕಾಶವಿಲ್ಲ ಎಂದು ಅವರು ಹೇಳಿದರು.

ವಾಣಿಜ್ಯ ಚಟುವಟಿಕೆಗಳು ರೆಸಾರ್ಟ್, ಪೆಟ್ರೋಲ್ ಬಂಕ್, ಶಾಲೆಗಳು, ಕೈಗಾರಿಕೆಗಳು ಮಾಡಬೇಕಾದರೆ, ಕಟ್ಟಡಗಳನ್ನು ನಿರ್ಮಿಸಲು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯಿಂದ ನಿರಾಪೇಕ್ಷಣ ಪ್ರಮಾಣಪತ್ರ(ಎನ್‌ಓಸಿ) ಪಡೆಯಬೇಕೆಂದು ನಿಬಂಧನೆಗಳನ್ನು ಹೇರಲಾಗಿದೆ ಎಂದು ಅಶೋಕ್ ತಿಳಿಸಿದರು.

ಅಲ್ಲದೇ, ಕಳೆದ ಎರಡು ಬಾರಿ ಪ್ರವಾಹದ ಸಂದರ್ಭದಲ್ಲಿ ಭೂ ಕುಸಿತವಾಗಿರುವ ಪ್ರದೇಶಗಳಲ್ಲಿ ಭೂ ಪರಿವರ್ತನೆಗೆ ಅವಕಾಶವಿಲ್ಲ. ಸರ್ವೆ ಆಫ್ ಇಂಡಿಯಾ ದವರಿಂದ ಭೂ ಕುಸಿತವಾಗುವ ಹಾಗೂ ರೆಡ್ ಅಲರ್ಟ್ ಆಗಿರುವ ಏರಿಯಾಗಳನ್ನು ಗುರುತಿಸಿ ವರದಿ ನೀಡುವಂತೆ ಕೋರಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ವರದಿ ಕೈ ಸೇರಲಿದೆ. ಆನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಡಿಕೆಶಿ ವಿರುದ್ಧ ವಾಗ್ದಾಳಿ: ಆರೆಸೆಸ್ಸ್‌ನವರಿಗೆ ಊಟ ಹಾಕಿಸುತ್ತೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ದುರಹಂಕಾರದ ಪರಮಾವಧಿ. ಆರೆಸೆಸ್ಸ್ ಒಂದು ರಾಷ್ಟ್ರಮಟ್ಟದ ಸಂಘಟನೆ. ಅವರಿಗೆ ಊಟ ಹಾಕಿಸಲು ಶಿವಕುಮಾರ್ ಏನು ಟಾಟಾನ ಅಥವಾ ಬಿರ್ಲಾನ ಎಂದು ಅಶೋಕ್ ವಾಗ್ದಾಳಿ ನಡೆಸಿದರು.

ಹಲವಾರು ಮಂದಿ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಮನೆ, ಮಠ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗಿ, ಬೀದಿಯಲ್ಲಿದ್ದಾರೆ. ಅಂತಹವರಿಗೆ ಶಿವಕುಮಾರ್ ಊಟ ಹಾಕಲಿ. ಆರೆಸೆಸ್ಸ್‌ಗೆ ಬೇರೆಯವರಿಗೆ ಸಹಾಯ ಮಾಡಿ ಅಭ್ಯಾಸವಿದೆಯೇ ಹೊರತು, ಭಿಕ್ಷೆ ಬೇಡಿ ಅಭ್ಯಾಸವಿಲ್ಲ ಎಂದು ಅವರು ಹೇಳಿದರು.

ರಾಮನಗರ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಚಟುವಟಿಕೆಗಳು ಹೆಚ್ಚುತ್ತಿರುವುದರಿಂದ, ಶಿವಕುಮಾರ್ ಹತಾಶರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಕಳೆದುಕೊಂಡು, ಕೇವಲ ಒಂದೇ ಸ್ಥಾನ ಉಳಿಸಿಕೊಂಡಿರುವ ಕಾಂಗ್ರೆಸ್‌ಗೆ, ಈಗ ಆ ಸ್ಥಾನವು ಕೈ ತಪ್ಪುವ ಭೀತಿ ಎದುರಾಗಿದೆ ಎಂದು ಅಶೋಕ್ ವ್ಯಂಗ್ಯವಾಡಿದರು.

ಕಪಾಲ ಬೆಟ್ಟದಲ್ಲಿ ಮತಾಂತರದ ಚಟುವಟಿಕೆಗಳು ಹೆಚ್ಚುತ್ತಿವೆ. ಒಂದೇ ಸಮುದಾಯಕ್ಕೆ ಭೂಮಿ ಹಂಚಿಕೆ ಮಾಡಲಾಗುತ್ತಿದೆ. ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಪರಿಸರ ಹಾಳು ಮಾಡಲು ಅವಕಾಶ ಕೊಡುವುದಿಲ್ಲ ಎಂದು ಅವರು ಹೇಳಿದರು.

ಈಗಾಗಲೇ ಅದು ಮುನೇಶ್ವರ ಬೆಟ್ಟ ಎಂದು ಖ್ಯಾತಿಯನ್ನು ಪಡೆದಿದೆ. ಸಾವಿರಾರು ವರ್ಷಗಳಿಂದ ಅಲ್ಲಿ ಮುನೇಶ್ವರನ ಪೂಜೆ ನಡೆಯುತ್ತಿದೆ. ಶಿವಕುಮಾರ್ ಕೂಡ ಮುನೇಶ್ವರನ ಭಕ್ತರು. ನಾವು ಕೂಡ ಮುನೇಶ್ವರನನ್ನು ಪೂಜಿಸುತ್ತೇವೆ. ಅವರು ನಮ್ಮ ಮನೆ ದೇವರಿಗೆ ಮೊದಲ ಆದ್ಯತೆಯನ್ನು ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News