ಎನ್,ಆರ್.ಪುರ: ಮೂವರಲ್ಲಿ ಮಂಗನ ಕಾಯಿಲೆ; ಡಿಎಚ್‍ಒ ಡಾ.ಪ್ರಭು

Update: 2020-02-10 18:50 GMT

ಚಿಕ್ಕಮಗಳೂರು, ಫೆ.10: ನೆರೆಯ ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡ ಬೆನ್ನಲ್ಲೇ ಕಾಫಿನಾಡಿನ ಎನ್‍ಆರ್‍ಪುರ ತಾಲೂಕಿನ ಮೂರು ಜನ ತೋಟದ ಕಾರ್ಮಿಕರಲ್ಲಿ ಮಂಗನ ಕಾಯಿಲೆ ವೈರಾಣು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಸೋಮವಾರ ದೃಢಪಡಿಸಿದೆ.

ಎನ್‍ಆರ್‍ಪುರ ತಾಲೂಕಿನ ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮಡಬೂರು ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಒಬ್ಬರು ಮತ್ತು ಮಧ್ಯಪ್ರದೇಶ ಮೂಲದ ಇಬ್ಬರಲ್ಲಿ ಮಂಗನ ಕಾಯಿಲೆ ಲಕ್ಷಣ ಕಂಡು ಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಗುಣಮುಖರಾಗುತ್ತಿದ್ದಾರೆ. ರೋಗಿಗಳನ್ನು ಪರಿವಿಕ್ಷಣೆಯಲ್ಲಿ ಇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಭು ತಿಳಿಸಿದ್ದಾರೆ.

ಕಳೆದವಾರ ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮಡಬೂರು ಗ್ರಾಮದಲ್ಲಿರುವ ಎಸ್ಟೇಟ್‍ನ ಕೂಲಿ ಕಾರ್ಮಿಕರ ಲೈನ್‍ನಲ್ಲಿ ಕೆಲಸ ಮಾಡುವವರಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿದೆ. ಅವರ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಮವಾರ ಪ್ರಯೋಗಾಲಯದ ವರದಿ ಬಂದಿದ್ದು, ಮೂರು ಜನರಲ್ಲಿ ವೈರಸ್ ಕಂಡು ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ.ಸುಭಾಷ್ ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಮಡಬೂರು ಎಸ್ಟೇಟ್ ಕೂಲಿಲೈನ್‍ನಲ್ಲಿ ವಾಸವಾಗಿರುವ ಕಾರ್ಮಿಕರಿಗೆ ಹಾಗೂ ತೋಟದ ಮಾಲಕರು ಸೇರಿದಂತೆ 39 ಜನರಿಗೆ ಲಸಿಕೆ ಹಾಕಲಾಗಿದೆ ಎಂದರು.

ಮಂಗನಕಾಯಿಲೆ ಕಂಡು ಬಂದ ಸ್ಥಳವನ್ನು ಹಾಟ್‍ಸ್ಪಾಟ್ ಎಂದು ಪರಿಗಣಿಸಿದ್ದು, ಸುತ್ತಮುತ್ತಲ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ 6 ರಿಂದ 65 ವರ್ಷದ ವಯೋಮಾನದವರಿಗೆ ಲಸಿಕೆ ಹಾಕಲಾಗುತ್ತಿದೆ. ಕೆಲಸಕ್ಕೆ ತರಳುವ ಕಾರ್ಮಿಕರಿಗೆ ಡಿಎಂಪಿ ಆಯಿಲ್ ವಿತರಣೆ ಮಾಡಲಾಗಿದೆ. ಉಣ್ಣೆಗಳನ್ನು ಸಾಯಿಸಲು ಮೆಲಕ್ಸಿಯನ್ ಪೌಂಡರ್ ಸಿಂಪಡಣೆ ಮಾಡಲಾಗುತ್ತಿದೆ ಎಂದರು. 

ಈ ಭಾಗದ ಸುತ್ತಮುತ್ತಲ 37 ಬೇರೆ ಬೇರೆ ಪ್ರದೇಶದ ಉಣ್ಣೆಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ. ಕೊಪ್ಪ ತಾಲೂಕಿನ ಶಾಂತಿಗ್ರಾಮದ ಸುತ್ತಮುತ್ತ ಸಂಗ್ರಹಿಸಿದ ಒಂದು ಉಣ್ಣೆಯಲ್ಲಿ ಕೆಎಫ್‍ಡಿ ವೈರಸ್ ಕಂಡು ಬಂದಿದೆ. ರೋಗ ಹಡದಂತೆ ಮುಂಜಾಗ್ರತ ಕ್ರಮಕೈಗೊಳ್ಳಲಾಗಿದೆ ಮತ್ತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ, ಜನರು ಆತಂಕ ಪಡುವ ಆವಶ್ಯಕತೆ ಇಲ್ಲ ಎಂದು ತಿಳಿಸಿದರು.:

ಮಂಗನ ಕಾಯಿಲೆ ಕಾಣಿಸಿಕೊಂಡ ಪ್ರದೇಶದಲ್ಲಿ ಇದುವರೆಗೂ ಯಾವುದೇ ಮಂಗ ಮೃತಪಟ್ಟಿರುವುದು ಕಂಡು ಬಂದಿಲ್ಲ. ಗ್ರಾಮದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜನರು ಆತಂಕ ಪಡುವ ಆವಶ್ಯಕತೆಯಿಲ್ಲ. 
-ಡಾ. ಪ್ರಭು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News