ಮಡಿಕೇರಿ: ಮಹಿಳಾ ಕಾಲೇಜು ನಿರ್ಮಾಣಕ್ಕೆ ಗೌಡ ಸಮಾಜ ತೀವ್ರ ವಿರೋಧ

Update: 2020-02-10 19:05 GMT

ಮಡಿಕೇರಿ,ಫೆ.10 : ಜಿಲ್ಲಾ ಕೇಂದ್ರ ಮಡಿಕೇರಿಯ ಗೌಡ ಸಮಾಜದ ಪಕ್ಕದಲ್ಲೆ ಪ್ರಥಮ ದರ್ಜೆ ಮಹಿಳಾ ಕಾಲೇಜು ಸ್ಥಾಪನೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಸ್ಥಳ ಪರಿಶೀಲನೆಗೆ ಆಗಮಿಸಿದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಇದರ ಬಿಸಿ ತಟ್ಟಿತು.

ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ವಲಯದ ಜಂಟಿ ನಿರ್ದೇಶಕರಾದ ಡಾ.ಅಪ್ಪಾಜಿ ಗೌಡ ಅವರು ಸೋಮವಾರ ಮಧ್ಯಾಹ್ನ ಮಹಿಳಾ ಕಾಲೇಜು ನಿರ್ಮಾಣಕ್ಕೆ ಗುರುತಿಸಿದ ಜಾಗಕ್ಕೆ ಭೇಟಿ ನೀಡಿದ ಸಂದರ್ಭ, ಅಲ್ಲಿ ಅದಾಗಲೆ ನೆರೆದಿದ್ದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಸೇರಿದಂತೆ ಪದಾಧಿಕಾರಿಗಳು ಸೂಚಿತ ಸ್ಥಳದಲ್ಲಿ ಕಾಲೇಜು ನಿರ್ಮಾಣವಾದರೆ ಆಗಬಹುದಾದ ಸಮಸ್ಯೆಗಳ ಬಗ್ಗೆ ಅಧಿಕಾರಿಗೆ ಮನವರಿಕೆ ಮಾಡಿಕೊಟ್ಟರು.

ತೀವ್ರ ವಿರೋಧ
ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಮತ್ತು ಪದಾಧಿಕಾರಿಗಳು ಜಂಟಿ ನಿರ್ದೇಶಕರೊಂದಿಗೆ ಮಾತನಾಡಿ, ಮಹಿಳಾ ಕಾಲೇಜಿಗೆ ಗುರುತಿಸಿರುವ ಜಾಗದ ಪಕ್ಕದಲ್ಲೇ ಗೌಡ ಸಮಾಜವಿದ್ದು, ವರ್ಷಪೂರ್ತಿ ವಿವಾಹ ಸೇರಿದಂತೆ ವಿವಿಧ ಸಮಾರಂಭಗಳು ನಡೆಯುತ್ತದೆ. ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗಲಿದೆ, ಮಹಿಳಾ ಕಾಲೇಜಿಗೆ ನಮ್ಮ ವಿರೋಧವಿಲ್ಲ. ಆದರೆ ಅದನ್ನು ನಿರ್ಮಿಸಲು ಆಯ್ಕೆ ಮಾಡಿಕೊಂಡಿರುವ ಜಾಗದ ಬಗ್ಗೆ ನಮ್ಮ ಆಕ್ಷೇಪವೆಂದು ಸ್ಪಷ್ಟಪಡಿಸಿದರು.

ಒಂದೊಮ್ಮೆ ಕಾಲೇಜು ನಿರ್ಮಾಣವಾದರೆ ಮುಂಬರುವ ದಿನಗಳಲ್ಲಿ ಕಾಲೇಜು ಸಮೀಪ ಸಮಾರಂಭಗಳು ನಡೆಯಬಾರದೆಂದು ನಿರ್ದೇಶನಗಳು ಬಂದಲ್ಲಿ ಗೌಡ ಸಮಾಜಗಳಲ್ಲಿ ನಡೆಯುವ ಗೌಡ ಸಮುದಾಯದ ವಿವಾಹ ಸಮಾರಂಭ, ಸಂಸ್ಕೃ ತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸುವುದು ಅಸಾಧ್ಯವಾಗಬಹುದು. ಆದ್ದರಿಂದ ಕಾಲೇಜು ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಸೂರ್ತಲೆ ಸೋಮಣ್ಣ ತಿಳಿಸಿದರು.

ನಗರದ ಐಟಿಐ ಕಾಲೇಜು ಸಾಕಷ್ಟು ಜಾಗವನ್ನು ಹೊಂದಿದ್ದು, ಅಲ್ಲಿಯೂ ಮಹಿಳಾ ಕಾಲೇಜು ನಿರ್ಮಾಣ ಮಾಡಬಹುದಾಗಿದೆ, ಇಲ್ಲವೆ ಪ್ರಸ್ತುತ ಜಿ.ಪಂ,  ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣ ಮಾಡಿರುವ ಪ್ರದೇಶದಲ್ಲು ಮಹಿಳಾ ಕಾಲೇಜು ನಿರ್ಮಾಣಕ್ಕೆ ಅವಕಾಶವಿದ್ದು, ಈ ಬಗ್ಗೆ ಗಮನ ಹರಿಸುವಂತೆ ಸಲಹೆ ನೀಡಿದರು. 

ಒಕ್ಕೂಟದ ಆಕ್ಷೇಪಗಳನ್ನು ಆಲಿಸಿದ ಜಂಟಿ ನಿರ್ದೇಶಕರು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು. ಈ ಸಂದರ್ಭ ಅವರೊಂದಿಗೆ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಶ್ರೀನಿವಾಸಯ್ಯ, ಹಿರಿಯ ವ್ಯವಸ್ಥಾಪಕ ಸುಮುಖ್ ಆರ್ಯ, ಮಹಿಳಾ ಕಾಲೇಜು ಪ್ರಾಂಶುಪಾಲ ಜವರಪ್ಪ ಅವರು ಹಾಜರಿದ್ದರು.

ಮಡಿಕೇರಿಯ ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ ಮಾತನಾಡಿ, ಯಾವುದೇ ಶಿಕ್ಷಣ ಸಂಸ್ಥೆಯ ಸ್ಥಾಪನೆಗೆ ನಿರ್ದಿಷ್ಟ ಜಾಗ ಇರಬೇಕೆನ್ನುವ ನಿಯಮಗಳಿವೆ. ಆದರೆ, ಇಲ್ಲಿ ಅಂತಹ ವಿಚಾರಗಳನ್ನು ಗಮನಿಸದೆ ಕಾಲೇಜು ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ, ಈ ಜಾಗ ಕಾಲೇಜು ನಿರ್ಮಾಣಕ್ಕೆ ಸೂಕ್ತವಲ್ಲವೆಂದರು. 

ಕೊಡಗು ಗೌಡ ಮಹಿಳಾ ಒಕ್ಕೂಟದ ಸದಸ್ಯರು ಹಾಗೂ ನಗರಸಭಾ ಮಾಜಿ ಅಧ್ಯಕ್ಷರಾದ ಕೂಡಕಂಡಿ ಕಾವೇರಮ್ಮ ಸೋಮಣ್ಣ ಮಾತನಾಡಿ, ಕಾಲೇಜು ನಿರ್ಮಾಣದಿಂದ ಸಮೀಪದಲ್ಲೆ ಇರುವ, ಶತಮಾನದ ಇತಿಹಾಸ ಹೊಂದಿರುವ ಕೊಡಗು ಗೌಡ ವಿದ್ಯಾ ಸಂಘದ  ಕಾರ್ಯಚಟುವಟಿಕೆಗಳಿಗೆ ತೊಂದರೆಯಾಗಲಿದೆ. ಆದ್ದರಿಂದ ಮಹಿಳಾ ಕಾಲೇಜನ್ನು ಇಲ್ಲಿಂದ ಸ್ಥಳಾಂತರಿಸಿ ಸೂಕ್ತ ಜಾಗದಲ್ಲಿ ನಿರ್ಮಿಸಬೇಕೆಂದು ತಿಳಿಸಿದರು. 

ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಕೋರನ ಸಿ. ವಿಶ್ವನಾಥ್, ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಕೋಡಿ ಚಂದ್ರಶೇಖರ್ ಹಾಗೂ ಪ್ರಮುಖರಾದ ಕೆ.ಡಿ. ದಯಾನಂದ, ಪೊನ್ನಚ್ಚನ ಮಧು, ದಂಬೆಕೋಡಿ ಹರೀಶ್, ಬೈತಡ್ಕ ಜಾನಕಿ, ಕೊಡಗು ಗೌಡ ಯುವ ವೇದಿಕೆ ಪದಾಧಿಕಾರಿಗಳು ಸೇರಿದಂತೆ ಗೌಡ ಸಮಾಜದ ಪ್ರಮುಖರು ಈ ಸಂದರ್ಭ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News