ಕೋರ್ಟ್ ಕಲಾಪ ನೇರ ಪ್ರಸಾರ : ಕೊಲ್ಕತ್ತಾ ಹೈಕೋರ್ಟ್ ಅನುಮತಿ

Update: 2020-02-13 03:43 GMT

ಕೊಲ್ಕತ್ತಾ: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ನ್ಯಾಯಾಲಯ ಕಲಾಪದ ನೇರ ಪ್ರಸಾರಕ್ಕೆ ಕೊಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದೆ.

ಪಾರ್ಸಿ ಜನಾಂಗ ಅಲ್ಲದ ಅವರನ್ನು ವಿವಾಹವಾದ ಪಾರ್ಸಿ ಮಹಿಳೆಯರ ಮಕ್ಕಳಿಗೆ ಕೊಲ್ಕತ್ತಾದ ಮೆಟ್‌ಕಾಫ್ ಬೀದಿಯಲ್ಲಿರುವ ಅತಾಶ ಆದರನ್ (ಬೆಂಕಿ ದೇಗುಲ)ಗೆ ಪ್ರವೇಶ ನೀಡಬಹುದೇ ಎಂಬ ವಿಷಯಕ್ಕೆ ಸಂಬಂಧಿಸಿದ ವಿಚಾರಣೆಯ ನೇರ ಪ್ರಸಾರಕ್ಕೆ ಅವಕಾಶ ನೀಡಲಾಗಿದೆ.

ಎರಡು ವಿಶೇಷ ಕ್ಯಾಮೆರಾ ಮತ್ತು ಇತರ ಸಾಧನಗಳನ್ನು ನ್ಯಾಯಾಲಯದಲ್ಲಿ ಅಳವಡಿಸಿ, ಯುಟ್ಯೂಬ್‌ನಲ್ಲಿ ದೃಶ್ಯಾವಳಿಯ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ತಗುಲುವ ವೆಚ್ಚವನ್ನು ಅರ್ಜಿದಾರರಾದ ಪಾರ್ಸಿ ಝೋರಾಸ್ಟ್ರಿಯನ್ ಅಸೋಶಸಿಯೇಶನ್ ಕೊಲ್ಕತ್ತಾ (ಪಿಝೆಡ್‌ಎಸಿ) ಭರಿಸಲಿದೆ.

ಕೋರ್ಟ್ ಕಲಾಪದ ನೇರ ಪ್ರಸಾರದಿಂದ ಹೆಚ್ಚಿನ ಪಾರದರ್ಶಕತೆಗೆ ಅನುಕೂಲವಾಗುತ್ತದೆ ಹಾಗೂ ಇದು ಹೆಚ್ಚಿನ ಹೊಣೆಗಾರಿಕೆಗೆ ಕೂಡಾ ಸಾಧನವಾಗಲಿದೆ ಎಂದು ಅನುಮತಿ ನೀಡಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅಭಿಪ್ರಾಯಪಟ್ಟಿದ್ದರು.

ಬುಧವಾರ ನಡೆದ ಕಲಾಪದಲ್ಲಿ ಪಿಝೆಡ್‌ಎಸಿ ವಕೀಲ ಫಿರೋಝ್ ಎಡುಲ್ಜಿ ವಾದ ಮಂಡಿಸಿ, ಇಂಥ ಪ್ರಕರಣಗಳಿಗೆ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಪ್ರತಿಪಾದಿಸಿದರು. ನೇರ ಪ್ರಸಾರವು ನಾಗರಿಕರ, ಅದರಲ್ಲೂ ಮುಖ್ಯವಾಗಿ ನ್ಯಾಯಾಲಯ ಸೌಲಭ್ಯ ಬಳಸಿಕೊಳ್ಳುವ ಪಾರ್ಸಿಗಳ ಹಕ್ಕುಗಳನ್ನು ಎತ್ತಿಹಿಡಿಯಲಿದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಬ್ಯಾನರ್ಜಿ ಮತ್ತು ಕೌಶಕ್ ಚಂದ ಅವರಿದ್ದ ಪೀಠದ ಮುಂದೆ ವಾದ ಮಂಡಿಸಿದರು. ವಿಚಾರಣೆಯ ಕೊನೆಯ ದಿನ ಕಲಾಪ ನೇರ ಪ್ರಸಾರಕ್ಕೆ ಪೀಠ ಒಪ್ಪಿಗೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News