ರಸ್ತೆ ಅಪಘಾತದಲ್ಲಿ ಯುವಕರಿಬ್ಬರು ಮೃತಪಟ್ಟ ಪ್ರಕರಣ: ಸಚಿವರ ಮಗನಿಗೆ ಪೊಲೀಸ್‌ ರಕ್ಷಣೆ ?

Update: 2020-02-13 13:13 GMT

ಬಳ್ಳಾರಿ, ಫೆ.13: ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಸಮೀಪ ಸಂಭವಿಸಿದ ಅಪಘಾತದಲ್ಲಿ ಯುವಕರಿಬ್ಬರು ಮೃತಪಟ್ಟ ಪ್ರಕರಣದಲ್ಲಿ ಪ್ರಭಾವಿ ಮಂತ್ರಿಯ ಮಗನ ಹೆಸರನ್ನು ಪೊಲೀಸರು ಎಫ್‌ಐಆರ್‌ನಲ್ಲಿ ಕೈಬಿಟ್ಟಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಘಟನೆ ನಡೆದ ಸ್ಥಳದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪುತ್ರ ಶರತ್ ಇದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದರೆ, ಮರಣೋತ್ತರ ವರದಿಯಲ್ಲೂ ಮೃತ ರವಿನಾಯ್ಕ ವಯಸ್ಸನ್ನು ಪೊಲೀಸರು ತಿರುಚಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರತ್ಯಕ್ಷದರ್ಶಿ ಹೇಳುವುದೇನು?: ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಸರು ಹೇಳಲು ಇಚ್ಛಿಸದ ಪ್ರತ್ಯಕ್ಷದರ್ಶಿ, ಸಚಿವ ಆರ್.ಅಶೋಕ್ ಪುತ್ರ ಶರತ್ ಘಟನೆಯ ಸ್ಥಳದಲ್ಲಿದ್ದರು. ಅಂದು ಅಪಘಾತಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಗಲಾಟೆ ನಡೆಸಿದ್ದ ಕಾರಣ, ಶರತ್ ಕಣ್ಮರೆಯಾದರು ಎಂದು ತಿಳಿಸಿದರು.

ಎಸ್ಪಿ ಸಮಜಾಯಿಷಿ: ಅಪಘಾತ ನಡೆದ ದಿನ ರಾಹುಲ್ ಎಂಬಾತ ಕಾರು ಚಾಲನೆ ಮಾಡುತ್ತಿದ್ದ. ಕಾರಿನಲ್ಲಿದ್ದ ಐವರ ಪೈಕಿ ಸಚಿನ್ ಸಾವನ್ನಪ್ಪಿದರೆ, ಸ್ಥಳೀಯ ಗ್ರಾಮದ ರವಿ ನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಎಫ್‌ಐಆರ್ ದಾಖಲಿಸುವ ವೇಳೆ ಹೆಸರನ್ನು ತಪ್ಪಾಗಿ ದಾಖಲಿಸಲಾಗಿದೆ. ಕಾರು ಯಾರಿಗೆ ಸೇರಿದ್ದು ಎಂಬುವುದು ತನಿಖೆ ನಡೆಸಲಾಗುತ್ತೆ ಎಂದು ಬಳ್ಳಾರಿ ಎಸ್ಪಿ ಸಿ.ಕೆ.ಬಾಬಾ ಹೇಳಿದ್ದಾರೆ.

ಫೆ.10ರಂದು ಮರಿಯಮ್ಮನಹಳ್ಳಿ ಗ್ರಾಮದ ಬಳಿ ಮರ್ಸಿಡಿಸ್ ಬೆಂಜ್ ಕಾರಿನಿಂದ ಅಪಘಾತ ಜರುಗಿದೆ. ಆದರೆ, ಸಚಿವರ ಪುತ್ರ ವಾಹನದಲ್ಲಿ ಇರಲಿಲ್ಲ. ಯಾವುದೇ ಕಾರಣಕ್ಕೂ ನಾವು ಈ ಪ್ರಕರಣದಲ್ಲಿ ಕರ್ತವ್ಯಲೋಪ ಮಾಡಿಲ್ಲ. ಘಟನೆ ನಡೆಯುತ್ತಿದ್ದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಎಫ್‌ಐಆರ್‌ನಲ್ಲಿ ಅಪ್ರಾಪ್ತ ವಯಸ್ಸು ದಾಖಲು

ರವಿನಾಯ್ಕ ಅಪ್ರಾಪ್ತ ಬಾಲಕ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ, ಉದ್ದೇಶಪೂರ್ವಕವಾಗಿ ಆತನಿಗೆ 19 ವರ್ಷ ಎಂದು ಬಿಂಬಿಸಿ ಪೊಲೀಸ್ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಏನಿದು ಪ್ರಕರಣ ?

ಫೆ.10ರಂದು ಬಳ್ಳಾರಿಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಗ್ರಾಮದ ದುರ್ಗಾ ಪೆಟ್ರೋಲ್ ಬಂಕ್ ಬಳಿ ರಾಷ್ಟ್ರೀಯ ಹೆದ್ದಾರಿ 50ರ ಸೇತುವೆ ಮೇಲಿನಿಂದ ವೇಗದಲ್ಲಿ ಬಂದ ಕೆಎ-05,ಎಂಡಬ್ಲ್ಯು-0357 ಸಂಖ್ಯೆಯ ಬೆಂಜ್ ಕಾರು ರಸ್ತೆ ಬದಿಯ ಚಹಾದ ಅಂಗಡಿ ಬಳಿ ನಿಂತಿದ್ದ ರವಿ ನಾಯ್ಕ(19) ಅವರಿಗೆ ಗುದ್ದಿದೆ. ನಂತರ ಕಾರು ಸುಮಾರು 100 ಮೀಟರ್ ದೂರದವರೆಗೆ ರವಿ ಅವರನ್ನು ಬೆಂಜ್ ಕಾರು ತಳ್ಳಿಕೊಂಡು ಹೋಗಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮತ್ತೀಕೆರೆ ನಿವಾಸಿ ಸಚಿನ್ ಮೃತರಾಗಿದ್ದಾರೆ ಎನ್ನಲಾಗಿದೆ.

ಸಚಿವ ಅಶೋಕ್ ಸಂಬಂಧಿಯ ಕಾರು ಅಪಘಾತದಲ್ಲಿ ಮೃತಪಟ್ಟ ಬೆಂಗಳೂರು ಮೂಲದ ಸಚಿನ್ ಅವರು ಸಚಿವ ಆರ್. ಅಶೋಕ್ ಸಂಬಂಧಿ ಎಂದು ಪೊಲೀಸರಿಗೆ ಮಾಹಿತಿ ಬಂದಿತ್ತು. ಆ ಕಾರಣಕ್ಕೆ ತಡರಾತ್ರಿ ಮರಣೋತ್ತರ ಪರೀಕ್ಷೆ ಮಾಡಿ ಮೃತದೇಹ ಹಸ್ತಾಂತರಿಸಲಾಯಿತು. ಐದು ಜನ ಚಿಕಿತ್ಸೆಗಾಗಿ ಬಂದಿದ್ದು, ಶಿವಕುಮಾರ್, ರಾಹುಲ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ರಾಕೇಶ್‌ಗೆ ಬೆನ್ನು ಮೂಳೆ ಮುರಿದಿತ್ತು. ವರುಣ್ ಚಿಕಿತ್ಸೆ ಪಡೆಯದೆ ಹಾಗೆ ಹೋಗಿದ್ದಾರೆ.

-ಡಾ.ಮಹಂತೇಶ್, ವೈದ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News