'ಮಹಾದಾಯಿ' ವಿಚಾರದಲ್ಲಿ ಮಂತ್ರಿಗಳು ಕಾನೂನು ಹೋರಾಟ ಮಾಡಲ್ಲ: ರಮೇಶ್ ಜಾರಕಿಹೊಳಿ

Update: 2020-02-13 15:20 GMT

ಬೆಂಗಳೂರು, ಫೆ.13: ಮಹಾದಾಯಿ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುವುದು ವಕೀಲರೇ ಹೊರತು, ಸಚಿವರಲ್ಲ. ಕಾನೂನು ಹೋರಾಟಕ್ಕೆ ಅಗತ್ಯವಿರುವ ಸಹಕಾರವನ್ನು ನಾವು ಕೊಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ನ್ಯಾಯಾಲಯದಲ್ಲಿ ಮಹಾದಾಯಿ ವಿಚಾರದಲ್ಲಿ ರಾಜ್ಯಕ್ಕೆ ಹಿನ್ನಡೆಯಾಗುತ್ತಿರುವ ಕುರಿತು ಗುರುವಾರ ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ರಮೇಶ್ ಜಾರಕಿಹೊಳಿಯನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ಈ ಮೇಲಿನಂತೆ ಅವರು ಪ್ರತಿಕ್ರಿಯಿಸಿದರು.

ರಾಜ್ಯದ ಅಭಿವೃದ್ಧಿ ಕುರಿತು ಪ್ರಶ್ನೆಗಳನ್ನು ಕೇಳಿ. ಒಂದೇ ವಿಚಾರಕ್ಕೆ ಸೀಮಿತವಾಗಬೇಡಿ. ನಾನು ಇನ್ನೂ ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಅಧಿಕಾರಿಗಳ ಜೊತೆ ಇಲಾಖೆ ಕುರಿತು ಚರ್ಚಿಸಿ, ಅಧ್ಯಯನ ನಡೆಸಿದ ಬಳಿಕವಷ್ಟೇ ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಮಧ್ಯಾಹ್ನ 3 ಗಂಟೆಗೆ ಜಲಸಂಪನ್ಮೂಲ ಇಲಾಖೆ ಕುರಿತು ಬಜೆಟ್ ಪೂರ್ವಭಾವಿ ಸಭೆಯನ್ನು ಕರೆದಿದ್ದಾರೆ. ಅಲ್ಲಿ, ನನ್ನ ವಿಚಾರಗಳನ್ನು ಅವರ ಮುಂದಿಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

ಬೆಳಗಾವಿ ಜಿಲ್ಲಾ ಉಸ್ತುವಾರಿಗಾಗಿ ನಾನು ಬೇಡಿಕೆ ಇಟ್ಟಿಲ್ಲ. ಮುಖ್ಯಮಂತ್ರಿ ವಿಶ್ವಾಸವಿಟ್ಟು ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ಕೆಲವೊಂದು ವಿಷಯಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಒಂದು ಮಹತ್ವದ ಖಾತೆಯನ್ನು ನನಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಶಾಸಕ ಮಹೇಶ್ ಕುಮಟಳ್ಳಿಗೆ ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಸ್ಥಾನವನ್ನು ಮುಖ್ಯಮಂತ್ರಿ ನೀಡಿದ್ದರು. ಆದರೆ, ಕಾರಣಾಂತರಗಳಿಂದ ಅವರು ನಿಗಮದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದಾರೆ. ಅದಕ್ಕಿಂತ ಉತ್ತಮವಾದ ಹುದ್ದೆಯನ್ನು ಕೊಡಲು ಮುಖ್ಯಮಂತ್ರಿ ಯೋಚಿಸಿರಬಹುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News