ಅನಿಲ ಸಬ್ಸಿಡಿ ತ್ಯಜಿಸಿದ ಜನರ ಬೆನ್ನಿಗೆ ಚೂರಿ

Update: 2020-02-14 05:01 GMT

ಬದುಕು ಆರಂಭವಾಗುವುದೇ ಒಲೆಗೆ ಹಚ್ಚುವ ಬೆಂಕಿಯ ಜೊತೆಗೆ. ಅಡುಗೆ ಮನೆಯಲ್ಲಿ ಒಲೆ ಹೊತ್ತಿಕೊಂಡ ಬಳಿಕವೇ ಎಲ್ಲವೂ. ಆ ಒಲೆಯ ಬೆಂಕಿಯನ್ನೇ ನಂದಿಸಿದರೆ? ದಿಲ್ಲಿಯ ಚುನಾವಣಾ ಫಲಿತಾಂಶಕ್ಕೆ ಸೇಡು ತೀರಿಸಿಕೊಳ್ಳುವಂತೆ ಸರಕಾರ ಒಂದೇ ದಿನದಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲದ ದರವನ್ನು 145 ರೂಪಾಯಿಗೆ ಏರಿಸಿದೆ. ಜನವರಿ 2014ರಿಂದೀಚೆಗೆ ಅಡುಗೆ ಅನಿಲ ದರದಲ್ಲಿ ಆದ ಅತ್ಯಧಿಕ ಏರಿಕೆ ಇದಾಗಿದೆ. ಮಧ್ಯಮ ವರ್ಗದ ಜನರ ಪಾಲಿಗೆ ಇದೊಂದು ಸಿಲಿಂಡರ್ ಸ್ಫೋಟವೇ ಸರಿ. ಒಂದೆಡೆ ಹಣದುಬ್ಬರ, ನಿರುದ್ಯೋಗ, ಬೆಲೆಯೇರಿಕೆ ಇವೆಲ್ಲದರ ನಡುವೆ ಸಿಲಿಂಡರ್ ದರವನ್ನು ಏರಿಸಿರುವುದು ಸರಕಾರ ಜನರಿಗೆ ಎಸಗಿದ ದ್ರೋಹ ಎಂದೇ ಹೇಳಬೇಕು. ಈ ಹಿಂದೆಲ್ಲ ಸಿಲಿಂಡರ್ ದರವನ್ನು ಹತ್ತಿಪ್ಪತ್ತು ರೂಪಾಯಿ ಏರಿಸಿದರೂ ಜನರು ಬೀದಿಗಿಳಿಯುವ ಸನ್ನಿವೇಶವಿತ್ತು. ವಿಪರ್ಯಾಸವೆಂದರೆ, ಇಂದು ಜನರು ಪ್ರತಿಭಟನಾ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ.

ದಾಖಲೆಯ ದರ ಏರಿಕೆಯಾದರೂ ಜನರಿಗೆ ಬೀದಿಗಿಳಿಯುವ ಧೈರ್ಯ ಬರುತ್ತಿಲ್ಲ. ಪ್ರತಿಭಟನೆ, ಚಳವಳಿಗಳನ್ನು ದೇಶದ್ರೋಹದ ಕೆಲಸವೆಂದು ಸರಕಾರ ಬಿಂಬಿಸುತ್ತಿರುವ ಪರಿಣಾಮವಾಗಿಯೋ ಏನೋ, ಮನೆಯೊಳಗೆ ಕೂತೇ ಜನರು ಸರಕಾರಕ್ಕೆ ಹಿಡಿ ಶಾಪ ಹಾಕುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಹೀಗೆ ಆದರೆ ಮತ್ತೆ ಕಟ್ಟಿಗೆ ಉರುವಲಿಗೆ ಮೊರೆ ಹೋಗಬೇಕಾದ ಸ್ಥಿತಿ ಬರಬಹುದು. ಆದರೆ ಕಟ್ಟಿಗೆಯ ಕಾಲವಂತೂ ಮುಗಿದೇ ಹೋಗಿದೆ. ಆಧುನಿಕ ವ್ಯವಸ್ಥೆಯಲ್ಲಿ ಕಟ್ಟಿಗೆಯಲ್ಲಿ ಉರಿಸುವ ಅಡುಗೆ ಮನೆಯ ವ್ಯವಸ್ಥೆಯೂ ಇಲ್ಲ. ಮೋದಿ ಅಧಿಕಾರಕ್ಕೆ ಬಂದಾಗ ಅವರ ಮಾತುಗಳು, ಭಾಷಣಗಳಿಂದ ಹಲವರು ಪ್ರಭಾವಿತರಾಗಿದ್ದರು. ಇವರಿಂದ ಈ ದೇಶಕ್ಕೆ ಒಳಿತಾದೀತು ಎನ್ನುವ ನಂಬಿಕೆ ಯುವತಲೆಮಾರಿನ ಜನರಲ್ಲಿ ಆಳವಾಗಿ ಬೇರೂರಿತ್ತು. ಇಂತಹ ಹೊತ್ತಿನಲ್ಲೇ ನರೇಂದ್ರ ಮೋದಿಯವರು ದೇಶದ ಜನರಿಗೆ ‘ಬಡವರಿಗಾಗಿ ಸಬ್ಸಿಡಿಗಳನ್ನು ತ್ಯಾಗ ಮಾಡಿ’ ಎಂಬ ಕರೆಯನ್ನು ನೀಡಿದ್ದರು. ನೀವು ಸಬ್ಸಿಡಿಯನ್ನು ತ್ಯಾಗ ಮಾಡಿ, ಇನ್ನೊಬ್ಬರ ಮನೆಯಲ್ಲಿ ಒಲೆ ಉರಿಸಲು ನಿಮಿತ್ತರಾಗಿ ಎನ್ನುವ ಉದಾತ್ತವಾದ ಕರೆಯನ್ನು ಮೋದಿಯವರು ನೀಡಿದ್ದರು.

ಮೋದಿಯ ಮಾತಿನ ಮೇಲೆ ಅಗಾಧ ಭರವಸೆಯಿಟ್ಟ ಲಕ್ಷಾಂತರ ಜನರು ತಮ್ಮ ಸಬ್ಸಿಡಿಗಳನ್ನು ತ್ಯಜಿಸಿದರು. ಹೀಗೆ ತ್ಯಜಿಸಿದವರೆಲ್ಲರೂ ಶ್ರೀಮಂತರೇ ಆಗಿರಲಿಲ್ಲ. ಈ ದೇಶದ ಮೇಲೆ ಪ್ರೀತಿಯಿಟ್ಟ ಮಧ್ಯಮವರ್ಗದ ಜನರೂ ಇದರಲ್ಲಿ ಸೇರಿದ್ದರು. ಅಷ್ಟೇ ಅಲ್ಲ, ಮೋದಿ ಈ ದೇಶದ ಜನತೆಗೆ ಒಳಿತನ್ನು ಮಾಡುತ್ತಾರೆ ಎಂದು ಬಲವಾಗಿ ನಂಬಿದವರಾಗಿದ್ದರು. ಆದರೆ ಇಂದು ನೋಡಿದರೆ, ಹಾಗೆ ನಂಬಿದವರ ಬೆನ್ನಿಗೇ ಮೋದಿ ಸರಕಾರ ಚೂರಿ ಹಾಕಿದೆ. ಸಬ್ಸಿಡಿ ತ್ಯಾಗ ಮಾಡಿದ ಮೋದಿ ಅಭಿಮಾನಿಗಳಿಗೆ ಎರಡೆರಡು ರೀತಿಯಲ್ಲಿ ವಂಚನೆಯಾಗಿದೆ. ಒಂದು, ತ್ಯಜಿಸಿದ ಸಬ್ಸಿಡಿಯನ್ನು ಬಡವರಿಗೆ ತಲುಪಿಸುತ್ತೇನೆ ಎಂದು ಮೋದಿ ಭರವಸೆ ನೀಡಿದ್ದರು. ಈ ಭರವಸೆಯನ್ನು ಈಡೇರಿಸುವಲ್ಲಿ ಮೋದಿ ವಿಫಲವಾಗಿದ್ದಾರೆ ಎನ್ನುವುದಕ್ಕೆ, ಅವ್ಯವಸ್ಥೆಯ ಆಗರವಾಗಿರುವ ಉಜ್ವಲಾ ಯೋಜನೆಯೇ ಸಾಕ್ಷಿಯಾಗಿದೆ. ಉಜ್ವಲಾ ಯೋಜನೆಯ ಮೂಲಕ ಈ ದೇಶದ ತಳಸ್ತರದ ಬಡವರಿಗೆ ಉಚಿತವಾಗಿ ಗ್ಯಾಸ್ ಸ್ಟೌಗಳನ್ನು ವಿತರಿಸುವ ಭರವಸೆಯನ್ನು ಮೋದಿಯವರು ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಬಡಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಸಂಪರ್ಕವನ್ನು ಒದಗಿಸುವ ಉಜ್ವಲಾ ಯೋಜನೆಯನ್ನು ಜಾರಿಗೊಳಿಸಿದಾಗ ಬಹಳಷ್ಟು ಕುಟುಂಬಗಳು ಸಂತಸಗೊಂಡಿದ್ದವು. ಆದರೆ ಈ ಉಜ್ವಲಾ ಯೋಜನೆ ಇಂದು ಭ್ರಷ್ಟಾಚಾರ ಮತ್ತು ದುರುಪಯೋಗಗಳ ಆರೋಪಗಳ ಸುಳಿಯಲ್ಲಿ ಸಿಲುಕಿ ಹೊಳಪು ಕಳೆದುಕೊಂಡಿದೆ. ಮೇ 2016 ರಲ್ಲಿ ಆರಂಭಗೊಂಡ ಉಜ್ವಲಾ ಯೋಜನೆಯು 2022ರ ವೇಳೆಗೆ ಎಂಟು ಕೋಟಿ ಗ್ರಾಮೀಣ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕವನ್ನೊದಗಿಸುವ ಗುರಿಯನ್ನು ಹೊಂದಿತ್ತು.

ಉಜ್ವಲಾ ಯೋಜನೆಯು ಎರಡು ವರ್ಷಗಳಲ್ಲಿ ಬಡತನ ರೇಖೆಗಿಂತ ಕೆಳಗಿನ 3.70 ಕೋ.ಮಹಿಳೆಯರು ತಮ್ಮ ಮನೆಗಳಲ್ಲಿ ಸ್ವಚ್ಛ ಇಂಧನವನ್ನು ಬಳಸಲು ನೆರವಾಗಿದೆ ಎಂದು ಡಬ್ಲೂಎಚ್ಒ ಕಳೆದ ವರ್ಷ ಪ್ರಶಂಸಿತ್ತು. ಆದರೆ ವಾಸ್ತವ ಇದಕ್ಕಿಂತ ಭಿನ್ನವಾಗಿತ್ತು. ಉಜ್ವಲಾ ಯೋಜನೆ ಘೋಷಣೆಯಾದಾಗ ಸಂತಸಪಟ್ಟವರಲ್ಲಿ ಭಾರತದ ಅತ್ಯಂತ ಬಡರಾಜ್ಯ ಬಿಹಾರದ ನಿಸಾರ್‌ಪುರ ಗ್ರಾಮದ ನಿವಾಸಿ ರೀನಾ ದೇವಿ ಕೂಡ ಒಬ್ಬಳು.ಆದರೆ ಉಚಿತ ಉಜ್ವಲಾ ಕಿಟ್ ಪಡೆಯಲು ಆಕೆ 3,000 ರೂ. ಕಟ್ಟಬೇಕಾಗಿತ್ತು. ನಿಸಾರ್‌ಪುರ ಗ್ರಾಮದಲ್ಲಿ 3000 ರೂ.ಗಳೆಂದರೆ ಹೆಚ್ಚಿನವರ ತಿಂಗಳ ಕೂಲಿಯಾಗಿದೆ.ಜೊತೆಗೆ ಅನಿಲ ಸಿಲಿಂಡರ್‌ನ ಮರುಪೂರೈಕೆಯ ವೆಚ್ಚವನ್ನು ಭರಿಸಲು ಹೆಚ್ಚಿನ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ . 2016ರಲ್ಲಿ ಜಾರಿಗೆ ಬಂದ ಈ ಯೋಜನೆಯ ಪ್ರಪ್ರಥಮ ಫಲಾನುಭವಿಯಾಗಿದ್ದರು ಗುಡ್ಡಿದೇವಿ. ಸ್ವತಃ ಪ್ರಧಾನಿ ಮೋದಿಯವರೇ ಗುಡ್ಡಿದೇವಿಯವರಿಗೆ ಸೌಲಭ್ಯವನ್ನು ಹಸ್ತಾಂತರಿಸಿದ್ದರು. ಆದರೆ ಇಂದು ಗುಡ್ಡಿದೇವಿಯವರು ಮನೆಯ ಒಲೆ ಉರಿಸುವುದಕ್ಕಾಗಿ ಬೆರಣಿಯನ್ನೇ ಅವಲಂಬಿಸಿದ್ದಾರೆ.

ಸಿಲಿಂಡರ್ ಕೊಳ್ಳಲು ಹಣಕ್ಕಾಗಿ ನಾನು ಎಲ್ಲಿಗೆ ಹೋಗಲಿ? ಮೊದಲು ಗ್ಯಾಸ್ ಸಂಪರ್ಕವಿದ್ದಾಗ ಒಂದು ಸಿಲಿಂಡರ್ ಗೆ 520 ರೂ. ಇತ್ತು. ಈಗ 770 ರೂ.ಆಗಿದೆ ಎನ್ನುತ್ತಾರೆ ಗುಡ್ಡಿ ದೇವಿ. ಉಜ್ವಲಾ ಯೋಜನೆಯ ಶೇ. 30ರಷ್ಟು ಫಲಾನುಭವಿಗಳು ಮಾತ್ರ ರೀಫಿಲ್ ಗಾಗಿ ಆಗಮಿಸುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಉಜ್ವಲಾ ಯೋಜನೆಯ ಜಾಹೀರಾತಿಗಾಗಿ ಸರಕಾರ ಕೋಟಿಗಟ್ಟಲೆ ಹಣವನ್ನು ವ್ಯಯ ಮಾಡಿದೆ. ಆದರೆ ಈ ಯೋಜನೆಯ ಫಲಾನುಭವಿಗಳು ಸಿಲಿಂಡರ್‌ಗಳನ್ನು ಕೊಳ್ಳಲು ಸಾಧ್ಯವಾಗದೆ ಮತ್ತೆ ಹಿಂದಿನ ಉರುವಲುಗಳಿಗೆ ಮೊರೆ ಹೋಗಿದ್ದಾರೆ. ಮೋದಿಯ ಕರೆಯನ್ನು ನಂಬಿ ಅನಿಲ ಸಿಲಿಂಡರ್ ಸಬ್ಸಿಡಿಯನ್ನು ತ್ಯಾಗ ಮಾಡುವಾಗ, ಮೋದಿ ಸರಕಾರ ಸಿಲಿಂಡರ್‌ಗಳಿಗೆ ಈ ಪರಿ ದರವನ್ನು ಹೆಚ್ಚು ಮಾಡುತ್ತದೆ ಎನ್ನುವ ಕಲ್ಪನೆಯೇ ಜನರಲ್ಲಿ ಇದ್ದಿರಲಿಲ್ಲ. ಈ ಹಿಂದಿನ ಸರಕಾರ ಮಾಡಿರುವ ತಪ್ಪುಗಳನ್ನೆಲ್ಲ ತಿದ್ದಿ, ಕೈಗೆಟಕುವಂತೆ ಎಲ್ಲರಿಗೂ ಸಮಾನದರದಲ್ಲಿ ಮೋದಿ ಸರಕಾರ ಸಿಲಿಂಡರನ್ನು ಒದಗಿಸಲಿದೆ ಎಂದು ಕನಸು ಕಂಡಿದ್ದರು. ಇಂದು ನೋಡಿದರೆ, ಉಜ್ವಲಾ ಯೋಜನೆ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲಿಲ್ಲ. ಮೋದಿಯ ಮಾತನ್ನು ನಂಬಿದ ಒಂದೇ ತಪ್ಪಿಗಾಗಿ 145 ರೂಪಾಯಿ ಹೆಚ್ಚು ಕೊಟ್ಟು ಸಿಲಿಂಡರ್ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ಮೋದಿ ಸರಕಾರದ ಕುರಿತಂತೆ ಅಪನಂಬಿಕೆಯನ್ನು ಹೊಂದಿದ್ದ ಜನರು ಮಾತ್ರ ಒಂದಿಷ್ಟು ನಿರಾಳರಾಗಿದ್ದಾರೆ. ಆದರೂ ಈಗಿನ ದರವನ್ನು ಕೊಟ್ಟು ಅಡುಗೆ ಅನಿಲದಿಂದ ಒಲೆ ಉರಿಸುವುದು ಸುಲಭದ ಮಾತೇನೂ ಅಲ್ಲ.

ಮೋದಿಯವರ ಭಾಷಣದಲ್ಲಿ ಪಾಸಿಟಿವ್ ಎನರ್ಜಿಯಿದೆ ಎಂದು ಅವರ ಅಭಿಮಾನಿಗಳು ನಂಬಿದ್ದರು. ಸಿಲಿಂಡರ್‌ನ ಬದಲು ಮೋದಿ ಭಾಷಣದ ಪಾಸಿಟಿವ್ ಎನರ್ಜಿ ಬಳಸಿ ಒಲೆಉರಿಸಲು ಸಾಧ್ಯವಾಗಲಾರದು ಎನ್ನುವುದು ಅವರಿಗೆ ಅರಿವಾಗುವ ಹೊತ್ತಿಗೆ ಕಾಲ ಮೀರಿ ಹೋಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News