ಭೀಮಾ ಕೋರೆಗಾಂವ್ ತನಿಖೆ ಎನ್‍ಐಎಗೆ: ಉದ್ಧವ್ ಠಾಕ್ರೆಯನ್ನು ಟೀಕಿಸಿದ ಶರದ್ ಪವಾರ್

Update: 2020-02-14 12:03 GMT

ಮುಂಬೈ : ಭೀಮಾ ಕೋರೆಗಾಂವ್ ಪ್ರಕರಣದ ತನಿಖೆಯನ್ನು ಎನ್‍ಐಎಗೆ ವಹಿಸಿದ ಕೇಂದ್ರ ಸರಕಾರದ ಕ್ರಮ ತಪ್ಪು ಎಂದು ಹೇಳಿರುವ ಎನ್‍ ಸಿಪಿ ಅಧ್ಯಕ್ಷ ಶರದ್ ಪವಾರ್, ಕೇಂದ್ರದ ನಿರ್ಧಾರವನ್ನು ಬೆಂಬಲಿಸಿರುವ ಮಹಾರಾಷ್ಟ್ರ ಸರಕಾರದ ನಿರ್ಧಾರವೂ ತಪ್ಪು ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಈ ಕುರಿತಂತೆ ಗುರುವಾರ ಪ್ರತಿಕ್ರಿಯಿಸಿದ್ದ ರಾಜ್ಯದ ಗೃಹ ಸಚಿವ, ಎನ್‍ ಸಿಪಿಯ ಅನಿಲ್ ದೇಶಮುಖ್,  ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಮ್ಮನ್ನು ವಿಶ್ವಾಸಕ್ಕೆ  ತೆಗೆದುಕೊಳ್ಳದೆ ಈ ನಿಟ್ಟಿನಲ್ಲಿ  ಕ್ರಮ ಕೈಗೊಂಡಿದ್ದರೆಂದು ಆರೋಪಿಸಿದ್ದಾರೆ.

"ಮುಖ್ಯಮಂತ್ರಿಗೆ ಅಧಿಕಾರವಿದೆ ನಿಜ., ಆದರೆ ಅವರು ನನ್ನ ಪ್ರಸ್ತಾವವನ್ನು ಪರಿಗಣಿಸದೆ ತನಿಖೆಯನ್ನು ಎನ್‍ ಐಎಗೆ ಹಸ್ತಾಂತರಿಸಲು ಒಪ್ಪಿದರು'' ಎಂದು ಹೇಳಿದ ದೇಶಮುಖ್ ಕೇಂದ್ರಕ್ಕೆ ತನ್ನ ತೀರ್ಮಾನವನ್ನು ಮರು ಪರಿಶೀಲಿಸುವಂತೆ ಕೋರಿ ಉದ್ಧವ್ ಠಾಕ್ರೆ ಪತ್ರ ಬರೆಯಬಹುದಾಗಿತ್ತು ಎಂದು ಹೇಳಿದರು.

ಪ್ರಕರಣದ ತನಿಖೆಯನ್ನು ಕಳೆದ ತಿಂಗಳು ಎನ್‍ ಐಎಗೆ ಕೇಂದ್ರ ಸರಕಾರ ಹಸ್ತಾಂತರಿಸಿದ್ದರೆ  ಈ ನಿರ್ಧಾರ ಕುರಿತಂತೆ ತನಗೇನೂ ಅಭ್ಯಂತರವಿಲ್ಲ ಎಂದು ಮಹಾರಾಷ್ಟ್ರ ಸರಕಾರ ಗುರುವಾರ ತಿಳಿಸಿತ್ತು.

ಈ ಹಿಂದೆ ಪುಣೆ ಪೊಲೀಸರು ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸುವ ನಿರ್ಧಾರವನ್ನು ಕಳೆದ ತಿಂಗಳು ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರಕಾರ ವಿರೋಧಿಸಿತ್ತು.

ಭೀಮಾ ಕೋರೆಗಾಂವ್‍ ನಲ್ಲಿ 2017ರ ಜನವರಿ 1ರಂದು ನಡೆದ ಹಿಂಸಾಚಾರ ಕುರಿತಂತೆ ಪುಣೆ ಪೊಲೀಸರು ಎಲ್ಗಾರ್ ಪರಿಷದ್ ಗೆ ಸೇರಿದ ಸುಧೀರ್ ಧವಳೆ, ರೋನಾ ವಿಲ್ಸನ್, ಸುರೇಂದ್ರ ಗದ್ಲಿಂಗ್, ಮಹೇಶ್ ರಾವತ್, ಶೋಮಾ ಸೇನ್, ಅರುಣ್ ಫೆರ್ರೇರಾ, ವೆರ್ನೊನ್ ಗೊನ್ಸಾಲ್ವಿಸ್, ಸುಧಾ ಭಾರಧ್ವಾಜ್ ಹಾಗೂ ವರವರ ರಾವ್ ಅವರನ್ನು ಮಾವೋವಾದಿಗಳ ಜತೆ ನಂಟು ಹೊಂದಿದ ಆರೋಪದ ಮೇಲೆ ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News