'ಬಾಬರಿ ಧ್ವಂಸ' ನಾಟಕ ದೇಶದ್ರೋಹವಲ್ಲದಿದ್ದರೆ, ಸಿಎಎ ವಿರೋಧಿ ನಾಟಕ ಹೇಗೆ ದೇಶದ್ರೋಹವಾಗುತ್ತದೆ: ಸಿದ್ದರಾಮಯ್ಯ ಪ್ರಶ್ನೆ

Update: 2020-02-14 12:23 GMT

ಬೀದರ್, ಫೆ.14: ಶಾಹೀನ್ ಶಾಲೆಯ ವಿರುದ್ಧ ಪೊಲೀಸರು ಬಿಜೆಪಿ ಸರಕಾರದ ಅಣತಿಯಂತೆ ದೇಶದ್ರೋಹದ ಪ್ರಕರಣ ದಾಖಲಿಸಿರುವುದು ಖಂಡನೀಯ. ಈ ಬಗ್ಗೆ ಸದನದಲ್ಲಿ ಹೋರಾಟ ಮಾಡುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಶಾಹೀನ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಬಳಿಕ ಬೀದರ್ ಜಿಲ್ಲಾ ಕಾರಾಗೃಹದಲ್ಲಿ ಶಾಹೀನ್ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ವಿದ್ಯಾರ್ಥಿನಿಯ ತಾಯಿಯನ್ನು ಭೇಟಿಯಾಗಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಿದ್ಯಾರ್ಥಿನಿಯರು ಶಾಲೆಯಲ್ಲಿ ಸಿಎಎ ಕುರಿತು ಪ್ರದರ್ಶಿಸಿದ ನಾಟಕದಲ್ಲಿ ಪ್ರಧಾನಿ ನರೇಂದ್ರಮೋದಿ ಅಥವಾ ಯಾರ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ. ಮಕ್ಕಳು ಬಳಸುವ ಪದಗಳು ಮಾನಹಾನಿಕರ ಕೂಡ ಆಗುವುದಿಲ್ಲ. ಅಂತಹದರಲ್ಲಿ, ನಾಟಕದಲ್ಲಿ ಬಳಸುವ ವಿಡಂಬನಾತ್ಮಕ ಮಾತುಗಳು ದೇಶದ್ರೋಹವಾಗಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.

ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡುವ ನಾಟಕವನ್ನು ಮಕ್ಕಳಿಂದ ಮಾಡಿಸಲಾಗಿತ್ತು. ಅದು ದೇಶದ್ರೋಹವಲ್ಲದಿದ್ದರೆ, ಶಾಹೀನ್ ಶಾಲೆಯಲ್ಲಿ ಸಿಎಎ ಕುರಿತು ಮಾಡಿದ ನಾಟಕ ಹೇಗೆ ದೇಶದ್ರೋಹವಾಗುತ್ತದೆ. ಇದು ಸಂವಿಧಾನ ವಿರೋಧಿ ಕೆಲಸ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಮಕ್ಕಳ ನಾಟಕದ ಕಾರಣದಿಂದಾಗಿ ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿರುವ ವಿದ್ಯಾರ್ಥಿನಿಯ ತಾಯಿ ನಜುಮುನ್ನಿಸಾ ಮತ್ತು ಶಿಕ್ಷಕಿ ಫರೀದಾ ಬೇಗಂ ಅವರನ್ನು ಜೈಲಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದೆ. ಪುಟ್ಟ ಮಕ್ಕಳ ನಾಟಕದ ಮಾತುಗಳನ್ನು ಕೂಡಾ ಸಹಿಸಿಕೊಳ್ಳದೆ ಸೇಡಿಗೆ ಇಳಿದಿರುವ ಬಿಜೆಪಿ, ಸೈದ್ಧಾಂತಿಕವಾಗಿ ದಿವಾಳಿಯಾಗಿರುವುದಕ್ಕೆ ಸಾಕ್ಷಿ ಎಂದು ಅವರು ಟೀಕಿಸಿದರು.

ಬೇಟಿ ಬಚಾವೋ ಎಂದು ಕೂಗುತ್ತಾ ತಮ್ಮ ಬೆನ್ನನ್ನು ತಾವೆ ಚಪ್ಪರಿಸಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ, ಬೀದರ್‌ನ ಶಾಹೀನ್ ಶಾಲೆಯ ವಿದ್ಯಾರ್ಥಿನಿ ತನ್ನದಲ್ಲದ ತಪ್ಪಿಗೆ ತಾಯಿಯಿಂದ ದೂರವಾಗಿ ಮಾನಸಿಕ ಕ್ಷೋಭೆಗೊಳಗಾಗಿರುವುದು ಕಾಣುತ್ತಿಲ್ಲವೇ ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಾಸಕರಾದ ರಾಜಶೇಖರ ಪಾಟೀಲ್, ರಹೀಮ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News