ಐದು ಟ್ರಿಲಿಯನ್ ಡಾಲರ್ ಆರ್ಥಿಕ ವ್ಯವಸ್ಥೆಗೆ ಕರ್ನಾಟಕದ ಪಾಲುದಾರಿಕೆ ಪ್ರಮುಖವಾದದ್ದು: ಯಡಿಯೂರಪ್ಪ

Update: 2020-02-14 12:12 GMT

ಹುಬ್ಬಳ್ಳಿ, ಫೆ. 14: ಐದು ಟ್ರಿಲಿಯನ್ ಡಾಲರ್ ಆರ್ಥಿಕ ವ್ಯವಸ್ಥೆ ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳಲು ಕರ್ನಾಟಕದಂತಹ ರಾಜ್ಯಗಳ ಪಾಲುದಾರಿಕೆ ಅತ್ಯಂತ ಪ್ರಮುಖವಾಗಿದ್ದು, ದೇಶದ ಅರ್ಥ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುವಂತಹ ಸಾಮರ್ಥ್ಯ ರಾಜ್ಯಕ್ಕೆ ಇದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ.

ಶುಕ್ರವಾರ ಹುಬ್ಬಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಇನ್ವೆಸ್ಟ್ ಕರ್ನಾಟಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಈಸ್ ಆಪ್ ಡೂಯಿಂಗ್ ಬಿಸಿನೆಸ್-ಸುಗಮ ವ್ಯವಹಾರ ನಡೆಸಲು ಅನುವಾಗುವಂತೆ ಸಕಲ ವ್ಯವಸ್ಥೆ ಕಲ್ಪಿಸಲು ಬದ್ಧ. ಉದ್ಯಮ ಆರಂಭಿಸಲು ಉಂಟಾಗುವ ಅನಗತ್ಯ ವಿಳಂಬ ತಪ್ಪಿಸಲು ಹಾಗೂ ಶೀಘ್ರವೇ ಅನುಮೋದನೆ ಸಿಗುವಂತಹ ವ್ಯವಸ್ಥೆ ರೂಪಿಸುವುದು ಸರಕಾರದ ಆದ್ಯತೆ ಎಂದ ಅವರು, ಕರ್ನಾಟಕ ದೇಶದ ಪ್ರಮುಖ ಐಟಿ ಕೇಂದ್ರವೆಂದು ಪ್ರಸಿದ್ಧವಾಗಿದ್ದು, ಏರೋಸ್ಪೇಸ್, ಆಟೋಮೊಬೈಲ್ಸ್, ಮೆಷಿನ್ ಟೂಲ್ಸ್, ಎಲೆಕ್ಟ್ರಿಕ್ ವೆಹಿಕಲ್ಸ್ ಮತ್ತು ಆಧುನಿಕ ಬಯೋಟೆಕ್ ತಂತ್ರಜ್ಞಾನಗಳ ರಾಜಧಾನಿ ಎಂದು ಗುರುತಿಸಿಕೊಂಡಿದೆ. ಹೂಡಿಕೆಗೆ ಅತ್ಯಂತ ವಿಫುಲ ಮತ್ತು ಪ್ರಶಸ್ತವಾದ ವಾತಾವರಣ ಹೊಂದಿದೆ ಎಂದು ಹೇಳಿದರು.

ಕೈಗಾರಿಕೆಗಳ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತವಾಗಿ ನಿಭಾಯಿಸಲು ಹಾಗೂ ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು, ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 109ಕ್ಕೆ ತಿದ್ದುಪಡಿ ತರಲಾಗುತ್ತಿದೆ. ಉದ್ಯಮ ಆರಂಭಿಸುವವರಿಗೆ ಅನುಮತಿ ನೀಡಲು ಭೂ ಸ್ವಾಧೀನ ಮತ್ತು ಭೂ ಪರಿವರ್ತನೆಗೆ ಅವಧಿಯನ್ನು 30 ದಿನಗಳಿಗೆ ಇಳಿಸುತ್ತಿದ್ದು, ಒಂದು ವೇಳೆ 30 ದಿನಗಳಲ್ಲಿ ಅನುಮತಿ ನೀಡದಿದ್ದರೆ, ಡೀಮ್ಡ್ ಎಂದು ಪರಿಗಣಿತ ಅನುಮೋದನೆ ಮತ್ತು ಪರಿವರ್ತನೆ ಮಾಡಲಾಗಿದೆ ಎಂದರು.

ಎರಡು ಮತ್ತು ಮೂರನೆ ಹಂತದ ನಗರಗಳಲ್ಲಿ ಕೈಗಾರಿಕೋದ್ಯಮ ಅಭ್ಯುದಯದ ಉದ್ದೇಶದಿಂದ ಉತ್ತರ ಕರ್ನಾಟಕದಲ್ಲಿ ಕ್ಲಸ್ಟರ್‌ಗಳನ್ನು ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕೊಪ್ಪಳದಲ್ಲಿ ಟೋಯ್ಸ್ ಕ್ಲಸ್ಟರ್, ಬಳ್ಳಾರಿಯಲ್ಲಿ ಟೆಕ್ಸೆಟೈಲ್ ಕ್ಲಸ್ಟರ್, ಹುಬ್ಬಳ್ಳಿಯಲ್ಲಿ ಎಫ್‌ಎಂಸಿಜಿ ಕ್ಲಸ್ಟರ್, ಕಲಬುರಗಿಯಲ್ಲಿ ಸೌರ ವಿದ್ಯುತ್ ಸರಕುಗಳ ಕ್ಲಸ್ಟರ್ ಮತ್ತು ಬೀದರ್‌ನಲ್ಲಿ ಕೃಷಿ ಉಪಕರಣಗಳ ಕ್ಲಸ್ಟರ್ ತೆರೆಯಲಾಗುತ್ತಿದೆ ಎಂದರು.

ಹುಬ್ಬಳ್ಳಿ-ಧಾರವಾಡ ಭೂ ಪ್ರದೇಶ ದೇಶಿಯ ಮತ್ತು ಜಾಗತಿಕ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳವಾಗಿದ್ದು, ಇಲ್ಲಿ ಸಕಲ ಮೂಲಸೌಕರ್ಯ, ನುರಿತ ಮಾನವ ಸಂಪನ್ಮೂಲದ ಲಭ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ಇದ್ದು, ಇದರ ಲಾಭವನ್ನು ಪಡೆಯಲು ಹೂಡಿಕೆದಾರರು ಮುಂದಾಗಬೇಕು ಎಂದರು.

ಇನ್ವೆಸ್ಟ್ ಹುಬ್ಬಳ್ಳಿ ಸಮಾವೇಶದಲ್ಲಿ ಪಾಲ್ಗೊಂಡಿರುವ ಉದ್ಯಮಿಗಳ ಉಪಸ್ಥಿತಿಯು ರಾಜ್ಯದ ಮೇಲಿನ ಬದ್ಧತೆ ಮತ್ತು ನಂಬಿಕೆಯನ್ನು ನಿರೂಪಿಸುತ್ತದೆ. ರಾಜ್ಯ ಸರಕಾರ ನಿಮ್ಮೆಲ್ಲರನ್ನು ಬೆಂಬಲಿಸುತ್ತದೆ. ಇತ್ತೀಚೆಗೆ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗಸಭೆ ಅತ್ಯಂತ ಫಲಪ್ರದವಾಗಿದ್ದು, ಆ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಕಂಪೆನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡುವ ಸಂಬಂಧ ತಮ್ಮೆಂದಿಗೆ ಚರ್ಚಿಸಿ ಆಸಕ್ತಿ ತೋರಿದ್ದವು ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಈ ಸಮಾವೇಶಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಉದ್ಯಮಿಗಳ ಆಗಮನವನ್ನು ನೋಡಿದರೆ ಕೈಗಾರಿಕೋದ್ಯಮದಲ್ಲಿ ಕರ್ನಾಟಕಕ್ಕಿರುವ ಅವಕಾಶ ಮತ್ತು ಬದ್ಧತೆಯನ್ನು ತೋರುತ್ತದೆ ಎಂದರು.

ದೇಶದಲ್ಲಿ ಕರ್ನಾಟಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ಬಹುತೇಕ ಅಂತರ್‌ರಾಷ್ಟ್ರೀಯ ಕಂಪೆನಿಗಳು ಕರ್ನಾಟಕವನ್ನು ತಮ್ಮ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿದ್ದು, ಕರ್ನಾಟಕವು ಅತ್ಯಂತ ಆಕರ್ಷಕ ಹೂಡಿಕೆ ತಾಣವಾಗಿ ದೇಶದ ಅಗ್ರಸ್ಥಾನ ಗಳಿಸಿದೆ ಎಂದರು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಗುಂಜನ್ ಕೃಷ್ಣ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News