ಋತುಸ್ರಾವವಾಗಿಲ್ಲ ಎಂದು ಖಚಿತಪಡಿಸಲು ವಿದ್ಯಾರ್ಥಿನಿಯರ ಒಳಉಡುಪು ತೆಗೆಸಿದ ಕಾಲೇಜು !

Update: 2020-02-14 13:34 GMT
Photo: www.ssgi.co.in

ಹೊಸದಿಲ್ಲಿ: ಋತುಸ್ರಾವವಾಗಿಲ್ಲ ಎಂದು ಖಚಿತಪಡಿಸಲು ಸುಮಾರು 60 ವಿದ್ಯಾರ್ಥಿನಿಯರ ಒಳಉಡುಪುಗಳನ್ನು ಶಿಕ್ಷಕರು ಬಲವಂತವಾಗಿ ತೆಗೆಸಿದ ಆಘಾತಕಾರಿ ಘಟನೆ ಗುಜರಾತ್‍ ನ ಭುಜ್ ಎಂಬಲ್ಲಿನ ಶ್ರೀ ಸಹಜಾನಂದ ಮಹಿಳಾ ಕಾಲೇಜಿನಲ್ಲಿ ನಡೆದಿದೆ.

ಕೆಲ ವಿದ್ಯಾರ್ಥಿನಿಯರು ತಮ್ಮ ಮಾಸಿಕ ದಿನಗಳಂದು ಧಾರ್ಮಿಕ ಕಟ್ಟಳೆಗಳನ್ನು ಉಲ್ಲಂಘಿಸುತ್ತಿದ್ದಾರೆಂದು ಹಾಸ್ಟೆಲ್ ಮುಖ್ಯಸ್ಥರು ಪ್ರಾಂಶುಪಾಲರಿಗೆ ದೂರಿದ ನಂತರ ಇಂತಹ ಒಂದು ವಿಪರೀತದ ಕ್ರಮ ಕೈಗೊಳ್ಳಲಾಗಿದೆ.

ತರಗತಿಯಿಂದ ಹೊರಬಂದು ಕಾಲೇಜಿನ ಹೊರಗೆ ಸರತಿ ನಿಲ್ಲುವಂತೆ ಸೂಚಿಸಲಾಗಿತ್ತು ಎಂದು ಸಂಸ್ಥೆಯ ವಿದ್ಯಾರ್ಥಿಗಳು ಹೇಳಿದ್ದಾರೆ. "ಪ್ರಾಂಶುಪಾಲರು ನಮ್ಮನ್ನು ನಿಂದಿಸಿದ್ದೇ ಅಲ್ಲದೆ ನಮ್ಮಲ್ಲಿ ಯಾರಿಗೆ ಪೀರಿಯಡ್ಸ್ ಆಗಿದೆ ಎಂದು ಕೇಳಿದಾಗ ನಮ್ಮಲ್ಲಿ ಇಬ್ಬರು ಬದಿಗೆ ಸರಿದು ನಿಂತರು, ಇದರ ಹೊರತಾಗಿಯೂ ಎಲ್ಲಾ ವಿದ್ಯಾರ್ಥಿನಿಯರನ್ನೂ ಶೌಚಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಶಿಕ್ಷಕಿಯರು ಪರಿಶೀಲಿಸುವ ಸಲುವಾಗಿ ಒಬ್ಬೊಬ್ಬರಾಗಿ ನಮ್ಮ ಒಳಉಡುಪುಗಳನ್ನು  ತೆಗೆಯುವಂತೆ ಹೇಳಿದರು'' ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.

ಆದರೆ ವಿದ್ಯಾರ್ಥಿನಿಯರನ್ನು ಬಲವಂತಪಡಿಸಲಾಗಿಲ್ಲ ಎಂದು ಸಂಸ್ಥೆಯ ಡೀನ್ ಹೇಳಿದ್ದಾರೆ. "ಇದು ಹಾಸ್ಟೆಲ್‍ ಗೆ ಸಂಬಂಧಪಟ್ಟ ವಿಚಾರ, ಯಾರನ್ನೂ  ಬಲವಂತಪಡಿಸಲಾಗಿಲ್ಲ, ವಿದ್ಯಾರ್ಥಿನಿಯರ ಅನುಮತಿಯಿಂದಲೇ ನಡೆಯಿತು, ಆದರೂ ತನಿಖೆ ನಡೆಸಲು ತಂಡ ರಚಿಸಲಾಗಿದೆ'' ಎಂದು ಅವರು ಹೇಳಿದರು.

ಸ್ವಾಮಿನಾರಾಯಣ್ ಮಂದಿರ್ ಅನುಯಾಯಿಗಳ ಕ್ರಾಂತಿಗುರು ಶ್ಯಾಮ್ ಜಿ ಕೃಷ್ಣ ವರ್ಮ ಕಛ್ ವಿಶ್ವವಿದ್ಯಾಲಯ ಈ ಕಾಲೇಜು ನಡೆಸುತ್ತಿದೆ. ಈ ಪಂಥದ ನಿಯಮಗಳಂತೆ ದೇವಸ್ಥಾನ ಮತ್ತು ಅಡುಗೆ ಮನೆಗೆ ಮುಟ್ಟಾದ ಮಹಿಳೆಯರು ಪ್ರವೇಶಿಸುವಂತಿಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಪರಸ್ಪರ ಜತೆಗಿರಲು ಕೂಡ ಈ ಸಂದರ್ಭ ಅವಕಾಶವಿಲ್ಲ. ಕಾಲೇಜು ಕ್ಯಾಂಪಸ್ಸಿನಲ್ಲಿ ದೇವಸ್ಥಾನವೂ ಇರುವುದರಿಂದ ವಿದ್ಯಾರ್ಥಿನಿಯರು ನಿಯಮಗಳನ್ನು ಪಾಲಿಸಲೇಬೇಕು, ಆದರೆ ನಡೆದಿದ್ದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಂಸ್ಥೆಯ ಟ್ರಸ್ಟಿಯೊಬ್ಬರು ಹೇಳಿದ್ದಾರೆ.

ಆದರೆ ಇಂತಹ ಯಾವುದೇ ಘಟನೆ ನಡೆದಿಲ್ಲವೆಂದು ವಿದ್ಯಾರ್ಥಿನಿಯರಿಂದ ಬಲವಂತವಾಗಿ ಪತ್ರವೊಂದಕ್ಕೆ ಸಹಿ ಹಾಕಿಸಲಾಗಿದೆ ಎಂದು  ಕೆಲ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News