ಪೊಲೀಸರಿಂದ ಶಾಹೀನ್ ಶಾಲೆಯ ಅಪ್ರಾಪ್ತ ಮಕ್ಕಳ ವಿಚಾರಣೆ: ವಿವರಣೆ ನೀಡಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2020-02-14 16:26 GMT
File Photo: Twitter

ಬೆಂಗಳೂರು, ಫೆ.14: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾಟಕ ಪ್ರದರ್ಶಿಸಿದ ಆರೋಪದಲ್ಲಿ ಶಾಹೀನ್ ಶಿಕ್ಷಣ ಸಂಸ್ಥೆಯ ಅಪ್ರಾಪ್ತ ಮಕ್ಕಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಿದೆ.

ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಶಾಹೀನ್ ಶಿಕ್ಷಣ ಸಂಸ್ಥೆಗೆ ಸಮವಸ್ತ್ರದಲ್ಲಿ ತೆರಳಿರುವ ಪೊಲೀಸರು ಅಪ್ರಾಪ್ತ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದರಿಂದ, ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದಂತಾಗಿದೆ. ಇದು ಕಾನೂನು ಬಾಹಿರವಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಪೊಲೀಸರು ಸಮವಸ್ತ್ರದಲ್ಲಿ ತೆರಳಿ ಅದು ಹೇಗೆ ಅಪ್ರಾಪ್ತ ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದರು. ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆಯೇ ಎಂಬುದರ ಬಗ್ಗೆ ಮಾಹಿತಿ ನೀಡಲು ಸೂಚಿಸಿ, ವಿಚಾರಣೆಯನ್ನು ಫೆ.19ಕ್ಕೆ ಮುಂದೂಡಿತು.

ಡಿವೈಎಸ್ಪಿ ಸಹಿತ ಪೊಲೀಸರು ನಾಟಕದ ಕುರಿತು ವಿದ್ಯಾರ್ಥಿಗಳ ವಿಚಾರಣೆ ನಡೆಸಿದರು ಎಂದು ಶಾಲೆಯ ಮುಖ್ಯಸ್ಥ ತೌಸೀಫ್ ಮಡಿಕೇರಿ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News