ಸರಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಅನಿವಾರ್ಯ: ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಜಯಮ್ಮ ಎಚ್ಚರಿಕೆ

Update: 2020-02-14 17:38 GMT

ಬೆಂಗಳೂರು, ಫೆ.14: ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ 16 ತಿಂಗಳಿನಿಂದ ಬಾಕಿ ಹಣವನ್ನು ಪಾವತಿಸದೆ ಸರಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ತೀವ್ರ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಂ.ಜಯಮ್ಮ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರಕಾರ ಗೌರವಧನ ಹೆಚ್ಚಳವನ್ನು ಅಕ್ಟೋಬರ್ 2018ರಿಂದ ಅನ್ವಯವಾಗುವಂತೆ ಹಾಗೂ ರಾಜ್ಯ ಸರಕಾರವು ನವೆಂಬರ್ 2019ರಿಂದ ಅನ್ವಯವಾಗುವಂತೆ ಗೌರವಧನ ಹೆಚ್ಚಳ ಮಾಡಿದ್ದರೂ ಇದುವರೆಗೂ 16 ತಿಂಗಳಿನಿಂದ ಬಾಕಿ ಪಾವತಿಸದಿರುವುದು ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ದೇಶದ ಹಲವಾರು ರಾಜ್ಯಗಳಲ್ಲಿ ಗೌರವಧನ ಹೆಚ್ಚಳ ಜಾರಿ ಮಾಡಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಯಾಕೆ ಜಾರಿಯಾಗುತ್ತಿಲ್ಲವೆಂದು ಪ್ರಶ್ನಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳನ್ನು ಬಗೆಹರಿಸುವಂತೆ ಎಐಟಿಯುಸಿಗೆ ವತಿಯಿಂದ ಕಳೆದ ಜನವರಿ 23. 24ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತೆಯರು ಭಾಗವಹಿಸಿದ್ದರು. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆಗೆ ಆರೋಗ್ಯ ಸರಿಯಿರಲಿಲ್ಲ. ಶೀಘ್ರದಲ್ಲಿಯೇ ಸಚಿವರೊಂದಿಗೆ ಸಭೆ ಏರ್ಪಡಿಸುವುದಾಗಿ ಇಲಾಖೆ ಕಾರ್ಯದರ್ಶಿ ಭರವಸೆ ನೀಡಿದ್ದರಿಂದ ಮಾನವೀಯತೆಯ ದೃಷ್ಟಿಯಿಂದ ಪ್ರತಿಭಟನೆಯನ್ನು ವಾಪಸ್ ಪಡೆದುಕೊಳ್ಳಲಾಯಿತು.

ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಸಂಬಂಧಿಸಿದಂತೆ ಸಭೆ ನಡೆಸುವ ಸಲುವಾಗಿ ಎಐಟಿಯುಸಿಯಿಂದ ಸಚಿವೆ ಶಶಿಕಲಾ ಜೊಲ್ಲೆಯವರೆಗೆ ಮನವಿ ಹಲವು ಸಲ ಮನವಿ ಮಾಡಿಕೊಳ್ಳಲಾಯಿತು. ಆದರೂ ಸಚಿವರು ನಿರ್ಲಕ್ಷ ವಹಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗಿದೆ ಎಂದು ಪ್ರಕಟನೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News