ಆಪ್ 62, ಬಿಜೆಪಿ 8 ದಿಲ್ಲಿಯ ಸಂದೇಶ

Update: 2020-02-14 18:38 GMT

ದಿಲ್ಲಿ ಅಸೆಂಬ್ಲಿ ಚುನಾವಣೆಗಳ ಫಲಿತಾಂಶ ಬಂದು ಆಮ್ ಆದ್ಮಿ ಪಕ್ಷ (ಆಪ್), 2015ರಲ್ಲಿ ಪಡೆದ ಸೀಟುಗಳಿಗಿಂತ ಕೇವಲ ಐದು ಸ್ಥಾನಗಳನ್ನು ಕಡಿಮೆ ಪಡೆದು ಅಧಿಕಾರ ಉಳಿಸಿಕೊಂಡಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಆಪ್, ಬಿಜೆಪಿ ಮತ್ತು ಕಾಂಗ್ರೆಸ್‌ನ ದೃಷ್ಟಿಯಿಂದ ದಿಲ್ಲಿ ಚುನಾವಣಾ ಫಲಿತಾಂಶಗಳನ್ನು ಅರ್ಥೈಸುವ ಪ್ರಯತ್ನ ಇಲ್ಲಿದೆ.

2015ರಲ್ಲಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿದ್ದ ಆಪ್ ಈ ಬಾರಿ 62 ಸ್ಥಾನಗಳನ್ನು ಗೆದ್ದಿದೆ. ಇಷ್ಟೊಂದು ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಳ್ಳುವುದು ಒಂದು ದೊಡ್ಡ ಸಾಧನೆ.

ಆದರೆ ನಾವು ಆಪ್‌ನ ಗೆಲುವನ್ನು ಹಲವು ಕೋನಗಳಿಂದ ವಿಶ್ಲೇಷಿಸಬೇಕಾದ ಅವಶ್ಯಕತೆ ಇದೆ. ಇಲ್ಲಿ ಹಲವು ಅಂಶಗಳನ್ನು ಗಮನಿಸಬೇಕು. ಮೊದಲನೆಯದಾಗಿ, ಆಪ್‌ಗೆ ಅರವಿಂದ್ ಕೇಜ್ರಿವಾಲ್ ನೀಡಿದ ನಾಯಕತ್ವದ ಪಾತ್ರ, ಜನ ಸಾಮಾನ್ಯ ದಿಲ್ಲಿ ಮತದಾರರಿಗೆ ಅವರ ಉಚಿತ ನೀರು ಹಾಗೂ ವಿದ್ಯುತ್ ಯೋಜನೆಗಳು ನೀಡಿದ ನೆಮ್ಮದಿ ಪಕ್ಷದ ಯಶಸ್ಸಿನ ಹಿಂದೆ ಇದೆ. ಮಹಿಳೆಯರಿಗೆ ಉಚಿತ ಬಸ್ ಸೇವೆ, ಆರೋಗ್ಯ ಸೇವೆ ಯೋಜನೆಗಳು ಅವರು ವಹಿಸಿದ ಧನಾತ್ಮಕ ಪಾತ್ರದ ಸಾಕ್ಷಿಗಳಾಗಿವೆ. ಮೊಹಲ್ಲಾ ಚಿಕಿತ್ಸಾಲಯಗಳು ದಿಲ್ಲಿಯ ಜನರ ಮನಸ್ಸನ್ನು ಗೆದ್ದವು. ಹೈಯರ್ ಸೆಕೆಂಡರಿ ಶಾಲಾ ಶಿಕ್ಷಣದವರೆಗೆ ಉಚಿತ ಶಿಕ್ಷಣ ಯೋಜನೆ ಕೂಡ ಅವರ ಜನಪ್ರಿಯತೆಯನ್ನು ಹೆಚ್ಚಿಸಲು ಕಾರಣವಾದವು. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೇಜ್ರಿವಾಲ್ ತನ್ನ ಜನಪರ ಯೋಜನೆಗಳಿಗಾಗಿ ಮತಯಾಚಿಸಿದರು ಮತ್ತು ಮತದಾರರು ಅವರಿಗೆ ಸೂಕ್ತ ಪ್ರತಿಫಲ ನೀಡಿದರು.

ಎರಡನೆಯದಾಗಿ, ಕೇಜ್ರಿವಾಲ್‌ರವರು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಶಾಹೀನ್‌ಬಾಗ್ ಪ್ರತಿಭಟನೆಗಳಂತಹ ವಿಷಯಗಳಿಂದ ದೂರ ಉಳಿದರು.
ಮೂರನೆಯದಾಗಿ, ಕೇಜ್ರಿವಾಲ್ ತನ್ನ ಚುನಾವಣಾ ಪ್ರಚಾರದ ಉದ್ದಕ್ಕೂ ಮೋದಿ ವಿರೋಧಿ ಭಾಷಣಗಳನ್ನು ಮಾಡಲಿಲ್ಲ. ಅವರು ರಾಷ್ಟ್ರೀಯ ಚುನಾವಣೆಗಳು ಹಾಗೂ ರಾಜ್ಯ/ಸ್ಥಳೀಯ ಚುನಾವಣೆಯ ನಡುವಿನ ಅಂತರವನ್ನು ಸರಿಯಾಗಿ ಗುರುತಿಸಿದರು. ತನ್ನ ಸಾಧನೆಗಾಗಿ ತನ್ನ ಸರಕಾರ ಮಾಡಿದ ಜನಪರ ಕೆಲಸಗಳಿಗಾಗಿ ಮತ ನೀಡುವಂತೆ ಅವರು ಮತದಾರರನ್ನು ವಿನಂತಿಸಿಕೊಂಡರು.
ದಿಲ್ಲಿಯ ಚುನಾವಣಾ ಸ್ಪರ್ಧೆಯಿಂದ ಕೇಜ್ರಿವಾಲ್ ಇನ್ನಷ್ಟು ಸಮರ್ಥ ನಾಯಕನಾಗಿ ಮೂಡಿಬಂದಿದ್ದಾರೆ. ಹಾಗಾಗಿ ಬಿಜೆಪಿ ವಿರುದ್ಧದ ತಮ್ಮ ಹೋರಾಟದಲ್ಲಿ ವಿರೋಧ ಪಕ್ಷಗಳು ಇವರನ್ನು ಗಂಭೀರವಾಗಿ ಪರಿಗಣಿಸಲೇ ಬೇಕಾಗುತ್ತದೆ.

70ರಲ್ಲಿ ಕೇವಲ 8 ಸ್ಥಾನಗಳಿಸಿರುವ ಬಿಜೆಪಿ ತನ್ನ ಸ್ಥಿತಿಯನ್ನು ತೀರ ಸ್ವಲ್ಪ ಸುಧಾರಿಸಿಕೊಂಡಿದೆ. ಗೃಹ ಸಚಿವ ಅಮಿತ್ ಶಾ ಬಿಜೆಪಿ 45 ಸ್ಥಾನಗಳನ್ನು ಗೆಲ್ಲುತ್ತದೆಂದು ಜಂಭ ಕೊಚ್ಚಿಕೊಂಡಿದ್ದರು. ಸಿಎಎಯಂತಹ ರಾಷ್ಟ್ರೀಯ ಪ್ರಶ್ನೆಗಳನ್ನು ರಾಜ್ಯ ಚುನಾವಣೆಗಳಲ್ಲಿ ಬಳಸುವ, ರಾಷ್ಟ್ರೀಯ ಪ್ರಶ್ನೆಗಳು, ರಾಜ್ಯ ಪ್ರಶ್ನೆಗಳು ಎಂದೂ ಬಿಂಬಿಸುವ ಬಿಜೆಪಿಯ ತಂತ್ರದ ಸೋಲನ್ನು ದಿಲ್ಲಿ ಚುನಾವಣೆ ಸ್ಪಷ್ಟಪಡಿಸಿದೆ.

ಹಾಗೆಯೇ ಚುನಾವಣೆ ಡಿವಿಡೆಂಡ್‌ಗಳನ್ನು ಪಡೆಯಲು ಶಾಹೀನ್ ಬಾಗ್ ಪ್ರತಿಭಟನೆಯನ್ನು ಮತ್ತೆ ಮತ್ತೆ ಜಪಿಸುವ ಅದರ ತಂತ್ರ ವಿಫಲಗೊಂಡಿದೆ. ದಿಲ್ಲಿ ಚುನಾವಣೆಯ ಸಂದೇಶ ಬಹಳ ಸ್ಪಷ್ಟ ಇದೆ: ತನ್ನ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಸ್ಥಳೀಯ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗಿರ ಬೇಕಾಗಿತ್ತು. ದಿಲ್ಲಿ ಚುನಾವಣೆಗಳಲ್ಲಿ ಬಿಜೆಪಿಯ ಸಾಧನೆ ನರೇಂದ್ರ ಮೋದಿ-ಅಮಿತ್ ಶಾರವರ ಚುನಾವಣಾ ಪ್ರಚಾರ ತಂತ್ರದ ಮಿತಿಗಳನ್ನು ತೋರಿಸಿಕೊಟ್ಟಿದೆ. ಚುನಾವಣಾ ಪ್ರಚಾರದ ವೇಳೆ ಈ ಜೋಡಿ ಸುಮಾರು ನಲ್ವತ್ತು ಚುನಾವಣಾ ರ್ಯಾಲಿಗಳನ್ನು ನಡೆಸಿದ್ದರೂ ನಿರೀಕ್ಷಿತ ಗೆಲುವು ದೊರಕಲಿಲ್ಲ ಎನ್ನುವುದು ಗಮನಾರ್ಹ.

ಬಿಜೆಪಿಯ ವಿರುದ್ಧ ಕೆಲಸ ಮಾಡ ಬಹುದಾದ ಇನ್ನೊಂದು ಅಂಶವೆಂದರೆ ತನ್ನ ಪಕ್ಷ ಗೆದ್ದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಬಹಿರಂಗ ಪಡಿಸುವಲ್ಲಿ ಅದರ ವೈಫಲ್ಯ, ಮೋದಿ ನೇತೃತ್ವದ ಬಿಜೆಪಿ ಹಲವು ರಾಜ್ಯಗಳಲ್ಲಿ ಈ ತಂತ್ರವನ್ನು ಬಳಸಿದೆ. ಬಹುತೇಕ ಚುನಾವಣೆಗಳಲ್ಲಿ ಈ ತಂತ್ರ ಫಲಿಸಲಿಲ್ಲ. ದಿಲ್ಲಿಯಲ್ಲಂತೂ ಇದು ಪೂರ್ಣ ವಿಫಲವಾಯಿತು.

ದಿಲ್ಲಿ ಚುನಾವಣೆಗಳಲ್ಲಿ ಮೂರನೇ ಮತ್ತು ಅಷ್ಟೊಂದು ಮುಖ್ಯವಲ್ಲದ ಪಾತ್ರಧಾರಿ, ಕಾಂಗ್ರೆಸ್ ಪಕ್ಷ ಚುನಾವಣಾ ದಿನಾಂಕ ಪ್ರಕಟವಾದಂದಿನಿಂದಲೂ ಚುನಾವಣೆಯಲ್ಲಿ ಹೇಳುವಂತಹ ಆಸಕ್ತಿ ತೋರಿಸಲೇ ಇಲ್ಲ ಎನ್ನುವುದು ಪಕ್ಷದ ಸದ್ಯದ ಸ್ಥಿತಿಗತಿಯ ಕುರಿತಾದ ವಿಷಾದದ ಒಂದು ವೀಕ್ಷಕ ವರದಿಯಾಗಿದೆ.
ದಿಲ್ಲಿ ಚುನಾವಣೆಯ ಫಲಿತಾಂಶಗಳು ಹಲವು ಸಂದೇಶಗಳನ್ನು ನೀಡಿವೆ; 1)ಭಾರತದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ಮುಖ್ಯ ಪಾತ್ರಧಾರಿಗಳಾಗಿಯೇ ಮುಂದುವರಿದಿದೆ.
 
(2)ರಾಷ್ಟ್ರೀಯ ಪ್ರಶ್ನೆಗಳ ವಿಷಯಗಳ ಚರ್ವಿತ ಚರ್ವಣ ಮಾಡುವ ಬದಲು ಬಿಜೆಪಿ ಮುಂದಿನ ಅಸೆಂಬ್ಲಿ ಚುನಾವಣೆಗಳಲ್ಲಿ ತಾನು ಮತದಾರರ ಮುಂದೆ ಇಡಬೇಕಾದ ಮುಖ್ಯ ವಿಷಯಗಳು ಯಾವುವು ಎಂಬ ಕುರಿತು ಮರುಚಿಂತನೆ ನಡೆಸುವ ಅನಿವಾರ್ಯ ಸೃಷ್ಟಿಸಿದೆ. (3)ಭಾರತದ ರಾಜಕಾರಣದಲ್ಲಿ ತಾನು ಒಂದು ಅರ್ಥಪೂರ್ಣ ಪಾತ್ರವಹಿಸಬೇಕಾದರೆ, ಏಕಾಂಗಿಯಾಗಿ ಹೋರಾಡಬೇಕೋ ಅಥವಾ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಮುಂದುವರಿಯ ಬೇಕೋ ಎನ್ನುವುದನ್ನು ಕಾಂಗ್ರೆಸ್ ನಿರ್ಧರಿಸಬೇಕಾಗುತ್ತದೆ.

(ಲೇಖಕರು ಬೆಂಗಳೂರು ವಿಶ್ವವಿದ್ಯಾನಿಲಯದ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು ಮತ್ತು ಐಸಿಎಸ್‌ಎಸ್‌ಆರ್‌ನಲ್ಲಿ ಸೀನಿಯರ್ ಫೆಲೊ ಆಗಿ ಸೇವೆಸಲ್ಲಿಸಿದ್ದರು.)

- ಕೃಪೆ: ಡೆಕ್ಕನ್ ಹೆರಾಲ್ಡ್

Writer - ಪಿ. ಎಸ್. ಜಯರಾಮು

contributor

Editor - ಪಿ. ಎಸ್. ಜಯರಾಮು

contributor

Similar News