ಮೂಡಿಗೆರೆ: ಸಿಎಎ, ಎನ್‌ಆರ್‌ಸಿ, ಎನ್‍ಪಿಆರ್ ವಿರೋಧಿಸಿ ಮಾನವ ಸರಪಳಿ

Update: 2020-02-14 18:52 GMT

ಮೂಡಿಗೆರೆ, ಫೆ.14: ಕೇಂದ್ರ ಸರಕಾರದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‍ಪಿಆರ್ ಕಾಯ್ದೆಗಳು, ಜನವಿರೋಧಿ, ಸಂವಿಧಾನ ವಿರೋಧಿಯಾಗಿದ್ದು, ಕೇಂದ್ರ ಸರಕಾರ ಈ ಕಾಯ್ದೆಗಳನ್ನು ಜಾರಿ ಮಾಡಬಾರದೆಂದು ಆಗ್ರಹಿಸಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಸೇರಿದಂತೆ ಸಾವಿರಾರು ಸಾರ್ವಜನಿಕರು ಮಾನವ ಸರಪಳಿ ನಿರ್ಮಿಸಿ ಕಾಯ್ದೆಗಳ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಳಗ್ಗೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಜಾಮಿಯಾ ಮಸೀದಿ, ಬದ್ರಿಯ ಮಸೀದಿ, ಬಣಕಲ್‍ನ ಖೂಬಾ ಮಸೀದಿಗಳ ಆವರಣದಲ್ಲಿ, ರಸ್ತೆಗಳ ಮುಂಭಾಗದಲ್ಲಿ ಶುಕ್ರವಾರದ ನಮಾಝ್ ಬಳಿಕ ಸಮಾವೇಶಗೊಂಡ ಸಾವಿರಾರು ಮುಸ್ಲಿಮರು ಸಿಎಎ, ಎನ್‌ಆರ್‌ಸಿ, ಎನ್‍ಪಿಆರ್ ಕಾಯ್ದೆಗಳ ಜಾರಿಗೆ ವಿರೋಧ ವ್ಯಕ್ತಪಡಿಸಿ ಮಾನವ ಸರಪಳಿ ನಿರ್ಮಿಸಿ ಶಾಂತಿಯುತವಾಗಿ ಧರಣಿ ನಡೆಸಿದರು.

ಸಾವಿರಾರು ಸಂಖ್ಯೆಯಲ್ಲಿದ್ದ ಮುಸ್ಲಿಮರು ನಿರ್ಮಿಸಿದ್ದ ಮಾನವ ಸರಪಳಿಗೆ ಪಟ್ಟಣದ ಸಾರ್ವಜನಿಕರೂ ಸಾಥ್ ನೀಡಿದ್ದು ವಿಶೇಷವಾಗಿತ್ತು. ಮಾನವ ಸರಪಳಿ ನಿರ್ಮಿಸಿದ ಜನರು ನೋ ಸಿಎಎ, ನೋ ಎನ್‌ಆರ್‌ಸಿ, ನೋ ಎನ್‍ಪಿಆರ್ ಎಂಭ ಘೋಷಣೆಗಳನ್ನು ಕೂಗುತ್ತಾ ಕಾಯ್ದೆಗಳ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದು ಕಂಡು ಬಂತು. ಮಾನವ ಸರಪಳಿಯಲ್ಲಿ ಭಾಗವಹಿಸಿದ್ದವರು ಸಿಎಎ, ಎನ್‌ಆರ್‌ಸಿ, ಎನ್‍ಪಿಆರ್ ಬ್ಯಾಡ್ಜ್‍ಗಳನ್ನು ಧರಿಸಿದ್ದು, ಎಲ್ಲೆಡೆ ಆಝಾದಿ ಘೋಷಣೆಗಳನ್ನೂ ಕೂಗಲಾಯಿತು.

ಇದಕ್ಕೂ ಮುನ್ನ ಮುಖಂಡರು, ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರಕಾರ ಜಾರಿ ಮಾಡಿರುವ ಈ ಕಾಯ್ದೆಗಳು ಧರ್ಮಾಧಾರಿತ ಕಾಯ್ದೆಗಳಾಗಿದ್ದು, ಜಾತ್ಯತೀತ ರಾಷ್ಟ್ರದಲ್ಲಿ ಇಂತಹ ಕಾಯ್ದೆಗಳ ಮೂಲಕ ಜನರ ಮೂಲ ಹುಡುಕುವುದು ಸಂವಿಧಾನ ವಿರೋಧಿಯಾಗಿದೆ. ಇಂತಹ ಕಾಯ್ದೆ ಜಾರಿಯಿಂದಾಗಿ ಅಸ್ಸಾಂ ರಾಜ್ಯದಲ್ಲಿ ಇದೇ ದೇಶದಲ್ಲಿ ಹುಟ್ಟಿ ಬೆಳೆದ ಲಕ್ಷಾಂತರ ಜನರು ಅತಂತ್ರರಾಗಿದ್ದಾರೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಆದಿವಾಸಿಗಳು, ದಲಿತರು, ಮುಸ್ಲಿಂ ಸಮುದಾಯದ ಜನರಲ್ಲಿ ಅನಕ್ಷರತೆ ಹೆಚ್ಚಿದ್ದು, ಇಂತಹ ಸಮುದಾಐದ ಜನರು ತಾವು ಇದೇ ದೇಶದ ಮೂಲ ನಿವಾಸಿಗಳೆಂದು ಸಾಬೀತು ಮಾಡಲು ಬೇಕಾಗಿರುವ ದಾಖಲೆಗಳನ್ನು ಹೊಂದಿಲ್ಲ. ಈ ಕಾಯ್ದೆಯು ಧರ್ಮ, ಜಾತಿಯ ಆಧಾರದ ಮೇಲೆ ಜನರನ್ನು ವಿಂಗಡಣೆ ಮಾಡುತ್ತಿದ್ದು, ಇಂತಹ ಮಾನವ ವಿರೋಧಿ ಕಾಯ್ದೆಗಳ ಜಾರಿ ವಿರುದ್ಧ ಧ್ವನಿ ಎತ್ತಬೇಕಾಗಿರುವುದು ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News