'ದೇಶದ್ರೋಹ' ಪ್ರಕರಣ: ಶಾಹೀನ್ ಶಾಲೆಯ ಮುಖ್ಯ ಶಿಕ್ಷಕಿ, ವಿದ್ಯಾರ್ಥಿನಿಯ ತಾಯಿ ಜೈಲಿನಿಂದ ಬಿಡುಗಡೆ

Update: 2020-02-15 13:51 GMT

ಬೀದರ್, ಫೆ.15: ಬೀದರ್‌ನ ಶಾಹೀನ್ ಶಾಲೆಯಲ್ಲಿ ಪ್ರದರ್ಶಿಸಲಾದ ಸಿಎಎ ವಿರೋಧಿ ನಾಟಕ ಪ್ರಕರಣ ಹಿನ್ನೆಲೆಯಲ್ಲಿ ಬಂಧಿಸಲ್ಪಟ್ಟಿದ್ದ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ಬಾಲಕಿಯ ತಾಯಿ ನಜುಮುನ್ನೀಸಾ ಅವರು ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಕಳೆದ 16 ದಿನಗಳಿಂದ ಜೈಲಿನಲ್ಲಿದ್ದ ಫರೀದಾ ಬೇಗಂ ಹಾಗೂ ನಜುಮುನ್ನೀಸಾ ಅವರಿಗೆ ಬೀದರ್ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಶುಕ್ರವಾರ ಜಾಮೀನು ನೀಡಿತ್ತು. ಇಂದು ಅವರು ಜೈಲಿನಿಂದ ಹೊರಬಂದಿದ್ದಾರೆ.

ಜ.30ರಂದು ಬಂಧಿಸಲ್ಪಟ್ಟಿದ್ದ ಫರೀದಾ ಬೇಗಂ ಹಾಗೂ ಬಾಲಕಿಯ ತಾಯಿ ನಜುಮುನ್ನೀಸಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬೀದರ್ ನ್ಯಾಯಪೀಠ, ಇಬ್ಬರಿಗೂ ನಿನ್ನೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ನೀಲೇಶ್ ಎಂಬುವವರು ನೀಡಿದ ದೂರಿನ ಮೇರೆಗೆ ದೇಶದ್ರೋಹದ ಕೇಸ್ ದಾಖಲಾಗಿತ್ತು. ದೂರು ದಾಖಲಿಸಿದ್ದ ಬೀದರ್ ನೂತನ ಠಾಣೆ ಪೊಲೀಸರು ಈ ಇಬ್ಬರು ಮಹಿಳೆಯರನ್ನು ಬಂಧಿಸಿದ್ದರು.

ಪ್ರಕರಣವೇನು: ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ದೇಶವ್ಯಾಪಿ ಹೋರಾಟಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿರುವಂತೆಯೇ ಜ.21ರಂದು ಬೀದರ್‌ನ ಶಾಹೀನ್ ಶಾಲೆಯಲ್ಲಿ ಮಕ್ಕಳಿಂದ ನಾಟಕ ಪ್ರದರ್ಶನ ನಡೆದಿತ್ತು. ನಾಟಕದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಎಬಿವಿಪಿ ಕಾರ್ಯಕರ್ತ ನೀಲೇಶ್ ಎಂಬವರು ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ದೂರು ದಾಖಲಿಸಿದ್ದರು.

ಈ ದೂರಿನ ಮೇರೆಗೆ ಕಾರ್ಯಾಚರಣೆ ಮಾಡಿದ ಪೊಲೀಸರು ಶಾಹೀನ್ ಶಾಲೆಯ ಮುಖ್ಯ ಶಿಕ್ಷಕಿ ಫರೀದಾ ಬೇಗಂ ಹಾಗೂ ಬಾಲಕಿಯ ತಾಯಿ ನಜುಮುನ್ನೀಸಾ ಎಂಬಿಬ್ಬರನ್ನು ಬಂಧಿಸಿದ್ದರು. ಸಮಾಜದಲ್ಲಿ ಹಿಂಸೆ ನಡೆಯಲು ಮತ್ತು ನರೇಂದ್ರ ಮೋದಿ ವಿರುದ್ಧ ದ್ವೇಷ ಸಾಧಿಸಲು ಮಕ್ಕಳಿಗೆ ಪ್ರಚೋದನೆ ಕೊಡಲಾಯಿತು ಎಂದು ಪೊಲೀಸರು ಆರೋಪ ಮಾಡಿ ಪ್ರಕರಣ ದಾಖಲಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News