5 ಲಕ್ಷ ರೂ. ಪರಿಹಾರಕ್ಕೆ ಈಗಲೂ ಕಾಯುತ್ತಿದೆ ಪುಲ್ವಾಮ ಹುತಾತ್ಮ ಯೋಧನ ಕುಟುಂಬ

Update: 2020-02-15 15:43 GMT

ಬಠಿಂಡಾ (ಪಂಜಾಬ್),ಫೆ.15: ಒಂದು ವರ್ಷದ ಹಿಂದೆ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೋಗಾ ಜಿಲ್ಲೆಯ ಘಲೌಟಿ ಗ್ರಾಮದ ನಿವಾಸಿ, ಸಿಆರ್‌ಪಿಎಫ್ ಹೆಡ್ ಕಾನ್‌ಸ್ಟೇಬಲ್ ಜೈಮಲ್ ಸಿಂಗ್ ಹುತಾತ್ಮರಾಗಿದ್ದರು. ಇದೀಗ ಭ್ರಮ ನಿರಸನಗೊಂಡಿರುವ ಅವರ ಕುಟುಂಬವು,ಪಂಜಾಬ್ ಸರಕಾರವು ತಮ್ಮನ್ನು ಮತ್ತು ಜೈಮಲ್‌ರ ಬಲಿದಾನವನ್ನು ಮರೆಯುತ್ತಿದೆ ಎಂದು ಆರೋಪಿಸಿದೆ. 12 ಲ.ರೂ.ಗಳ ಪರಿಹಾರದ ಪೈಕಿ ಐದು ಲಕ್ಷ ರೂ.ಗಳನ್ನು ಪಂಜಾಬ್ ಸರಕಾರವು ಇನ್ನೂ ಪಾವತಿಸದಿರುವ ಬಗ್ಗೆ ಜೈಮಲ್ ಕುಟುಂಬವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

19ರ ವಯಸ್ಸಿನಲ್ಲೇ ಸಿಆರ್‌ಪಿಎಫ್‌ಗೆ ಸೇರ್ಪಡೆಗೊಂಡಿದ್ದ ಜೈಮಲ್ ಹೆತ್ತವರಾದ ಜಸ್ವಂತ್ ಸಿಂಗ್ ಮತ್ತು ಸುಖವಿಂದರ್ ಕೌರ್,ಪತ್ನಿ ಸುಖಜಿತ್ ಮತ್ತು ಆಗ ಐದೂವರೆ ವರ್ಷ ಪ್ರಾಯವಾಗಿದ್ದ ಪುತ್ರ ಗುರುಪ್ರಕಾಶ ಮತ್ತು ಕಿರಿಯ ಸೋದರನನ್ನು ಅಗಲಿದ್ದಾರೆ. ಜೈಮಲ್(44) ಬಾಂಬ್ ದಾಳಿಗೆ ಗುರಿಯಾಗಿದ್ದ ಸಿಆರ್‌ಪಿಎಫ್ ಬಸ್ಸನ್ನು ಚಲಾಯಿಸುತ್ತಿದ್ದರು.

 ಪಂಜಾಬ್ ಸರಕಾರ ಮತ್ತು ಸಿಆರ್‌ಪಿಎಫ್ ತನ್ನ ಮುಂದಿರಿಸಿದ್ದ ಉದ್ಯೋಗದ ಕೊಡುಗೆಯನ್ನು ತಾನು ನಿರಾಕರಿಸಿದ್ದು,ತನ್ನ ಬದಲಿಗೆ ಈಗ ಒಂದನೇ ತರಗತಿಯಲ್ಲಿ ಓದುತ್ತಿರುವ ಪುತ್ರ ಗುರುಪ್ರಕಾಶ್ ಗೆ ಹುದ್ದೆಯನ್ನು ಮೀಸಲಿಡುವಂತೆ ಲಿಖಿತ ಕೋರಿಕೆಯನ್ನು ಸಲ್ಲಿಸಿದ್ದೇನೆ ಎಂದು ಸುಖಜಿತ್ ತಿಳಿಸಿದರು. ಹಾಲಿ ಪಂಚಕುಲಾದಲ್ಲಿ ಪುತ್ರನೊಂದಿಗೆ ವಾಸವಾಗಿರುವ ಸುಖಜಿತ ಕೋಟ ಇಸೆ ಖಾನ್‌ ನಲ್ಲಿ ನಿಯಮಿತವಾಗಿ ಅತ್ತೆ-ಮಾವನನ್ನು ಭೇಟಿಯಾಗುತ್ತಿದ್ದಾರೆ.

‘ಜೈಮಲ್ ಮತ್ತು ಇತರರು ದೇಶಕ್ಕಾಗಿ ಬಲಿದಾನಗೈದಿದ್ದಾರೆ. ರಾಜ್ಯ ಸರಕಾರವು ನಮ್ಮ ಬೆನ್ನಿಗೆ ನಿಲ್ಲುತ್ತದೆ ಎಂದು ನಾವು ಆಶಿಸಿದ್ದೆವು. ಆದರೆ 2019,ಫೆ.23ರಂದು ಸ್ಮರಣ ಕಾರ್ಯಕ್ರಮದ ಬಳಿಕ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ರಾಜ್ಯ ಸರಕಾರವು ವಾಗ್ದಾನ ಮಾಡಿದ 12 ಲ.ರೂ.ಗಳ ಪೈಕಿ ಕೇವಲ ಏಳು ಲ.ರೂ.ನೀಡಿದೆ. ಉಳಿದ ಐದು ಲ.ರೂ.ಯಾವಾಗ ದೊರೆಯುತ್ತದೆ ಎನ್ನುವುದು ಗೊತ್ತಿಲ್ಲ. ಹಣ ಮುಖ್ಯವಲ್ಲ, ಸಹಾನುಭೂತಿಯ ಮಾತುಗಳು ಮುಖ್ಯ’ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಸುಖಜಿತ್,ಸರಕಾರವು ತನ್ನ ಪುತ್ರನ ಶಾಲಾ ಪ್ರವೇಶ ಶುಲ್ಕವನ್ನು ಪಾವತಿಸಿದೆ ಮತ್ತು 12ನೇ ತರಗತಿಯವರೆಗೆ ಆತನ ಸಂಪೂರ್ಣ ಶುಲ್ಕವನ್ನು ಮನ್ನಾ ಮಾಡುವುದಾಗಿ ಶಾಲಾಡಳಿತವು ಭರವಸೆ ನೀಡಿದೆ ’ಎಂದರು.

 ‘ಗುರುಪ್ರಕಾಶ ನಮ್ಮ ಮದುವೆಯ 16 ವರ್ಷಗಳ ಬಳಿಕ ಜನಿಸಿದ್ದ. ನನ್ನ ಪತಿ ಆತನಿಗೆ ಒಳ್ಳೆಯ ಶಿಕ್ಷಣ ಕೊಡಿಸಲು ಬಯಸಿದ್ದರು. ಅವರ ಕನಸನ್ನು ನಾನು ಪೂರ್ಣಗೊಳಿಸುತ್ತೇನೆ ಮತ್ತು ಇದೇ ಕಾರಣದಿಂದ ನಾನು ಉದ್ಯೋಗಕ್ಕೆ ಸೇರಲಿಲ್ಲ ’ಎಂದು ಸುಖಜಿತ್ ಹೆಳಿದರು.

ರಾಜ್ಯ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮದ ಗುರುದ್ವಾರಾದಲ್ಲಿ ಗ್ರಂಥಿಯಾಗಿರುವ ಜಸ್ವಂತ ಸಿಂಗ್,ಮಗ ಹುತಾತ್ಮನಾದಾಗ ಹೆತ್ತವರು ದೇಶಕ್ಕಾಗಿ ತಮ್ಮೆಲ್ಲ ಭರವಸೆಯನ್ನು ಕಳೆದುಕೊಳ್ಳುತ್ತಾರೆ. ಅವರ ಬೆಂಬಲಕ್ಕೆ ನಿಲ್ಲುವುದು ಸರಕಾರಗಳ ಕರ್ತವ್ಯವಾಗಿದೆ ಎಂದರು. ಆಡಳಿತಾತ್ಮಕ ಕಾರಣಗಳಿಂದ ಐದು ಲ.ರೂ.ಗಳ ಬಾಕಿ ಪರಿಹಾರವನ್ನು ಪಾವತಿಸುವಲ್ಲಿ ವಿಳಂಬವಾಗಿದೆ ಎಂದು ಮೋಗಾ ಜಿಲ್ಲಾಧಿಕಾರಿ ಸಂದೀಪ ಹನ್ಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News