ಸಿಎಎ ವಿರೋಧಿ ಪ್ರತಿಭಟನೆಗೆ ಸಿಖ್ಖರ ಪರಮೋಚ್ಛ ಪೀಠದ ಬೆಂಬಲ

Update: 2020-02-15 15:56 GMT

ಅಮೃತಸರ,ಫೆ.16: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಲವಾರು ವಾರಗಳಿಂದ ಪ್ರತಿಭಟನೆ ನಡೆಸುತ್ತಿರುವ ಮುಸ್ಲಿಂ ಸಂಘಟನೆಗಳಿಗೆ, ಸಿಖ್ಖರ ಪರಮೋಚ್ಛ ಧಾರ್ಮಿಕ ಪೀಠ ಅಕಾಲ್ ತಖ್ತ್ ಶನಿವಾರ ತನ್ನ ಬೆಂಬಲವನ್ನು ಘೋಷಿಸಿದೆ.

    ಅಕಾಲ್‌ತಖ್ತ್‌ನ ಮುಖ್ಯ ಅರ್ಚಕ ಗಿಯಾನಿ ಹರ್‌ಪ್ರೀತ್ ಸಿಂಗ್ ಅವರು ಇಂದು ಅಮೃತಸರದಲ್ಲಿ ತನ್ನನ್ನು ಭೇಟಿಯಾದ ದಿಲ್ಲಿ ಅಲ್ಪಸಂಖ್ಯಾತ ಆಯೋಗದ ವರಿಷ್ಠ ಝಫರುಲ್ ಇಸ್ಲಾಂ ಖಾನ್ ನೇತೃತ್ವದ ನಿಯೋಗದ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ, ಸಿಎಎ ವಿರೋಧಿ ಪ್ರತಿಭಟನೆಗೆ ತನ್ನ ಬೆಂಬಲವನ್ನು ಘೋಷಿಸಿದರು.

 ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ಅಲ್ಪಸಂಖ್ಯಾತರಲ್ಲಿ ಭಯ ಹಾಗೂ ಅಭದ್ರತೆಯ ಭಾವನೆಯುಂಟಾಗಿದೆ ಹಾಗೂ ದಮನಿತರ ಬೆಂಬಲವಾಗಿ ಸಿಖ್ಖರು ನಿಲ್ಲಬೇಕಾಗುತ್ತದೆ ಎಂದು ಜಾಥೇದಾರ್ ಎಂದು ಕರೆಯಲಾಗುವ ಅಕಾಲ್‌ ತಖ್ತ್‌ನ ವರಿಷ್ಠರು ತಿಳಿಸಿದ್ದಾರೆ.

 ‘‘ಸಂತ್ರಸ್ತರು ಹಾಗೂ ಅನ್ಯಾಯದ ವಿರುದ್ಧ ಎದ್ದುನಿಲ್ಲುವುದು ಸಿಖ್ಖರ ತಾತ್ವಿಕ ಹೊಣೆಗಾರಿಕೆಯಾಗಿದೆ. ನಾವು ಇದೇ ರೀತಿಯ ಮನವಿಯನ್ನು ಇನ್ನೊಂದು ಸಮುದಾಯದಿಂದ ಸ್ವೀಕರಿಸಿದ್ದೇವೆ. ಅಲ್ಪಸಂಖ್ಯಾತರಲ್ಲಿ ಭಯ ಹಾಗೂ ಅಭದ್ರತೆಯ ಭಾವನೆಯಿದ್ದು, ಇದು ದೇಶಕ್ಕೆ ಒಳ್ಳೆಯದಲ್ಲ’’ ಎಂದು ಅವರು ಮುಸ್ಲಿಂ ನಿಯೋಗ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

 ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಿಂದೂ ಸಂಘಟನೆಗಳಿಂದಲೂ ಬೆಂಬಲವನ್ನು ಪಡೆಯುವಂತೆ ಅಕಾಲ್‌ತಖ್ತ್‌ನ ಮುಖ್ಯ ಅರ್ಚಕರು ಮುಸ್ಲಿಂ ನಾಯಕರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News