ಭಾರತವನ್ನು ‘ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿ’ಯಿಂದ ತೆಗೆದ ಅಮೆರಿಕ: ಶಿವಸೇನೆ ಆಕ್ರೋಶ

Update: 2020-02-15 15:58 GMT
Photo: twitter.com/ShivsenaComms

ಹೊಸದಿಲ್ಲಿ, ಫೆ. 15: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವುದಕ್ಕಿಂತ ಒಂದು ವಾರ ಮುನ್ನ ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಯಿಂದ ಭಾರತವನ್ನು ತೆಗೆದ ನಿರ್ಧಾರವನ್ನು ಶಿವಸೇನೆ ಶನಿವಾರ ಟೀಕಿಸಿದೆ.

‘‘ಟ್ರಂಪ್ ಆಡಳಿತ ಗೂಗ್ಲಿ ಎಸೆದಿದೆ. ಇನ್ನು ಮುಂದೆ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ ಅಲ್ಲ. ಅಭಿವೃದ್ಧಿ ಹೊಂದಿದ ದೇಶ. ಇದು ಭಾರತಕ್ಕೆ ದೊಡ್ಡ ಬಿಕ್ಕಟ್ಟು. ಶಿಕ್ಷಣ, ಆರೋಗ್ಯ, ಉದ್ಯೋಗ, ಸ್ವಚ್ಛತೆ ಹಾಗೂ ಬಡತನ ನಿರ್ಮೂಲನೆಯ ಮಾನದಂಡದಲ್ಲಿ ಅಭಿವೃದ್ಧಿ ಹೊಂದಿದ ಮಟ್ಟಕ್ಕಿಂತ ಭಾರತ ಮೈಲು ದೂರದಲ್ಲಿ ಇದೆ’’ ಎಂದು ಶಿವಸೇನೆ ತನ್ನ ಮುಖವಾಣಿಯಾದ ಸಾಮ್ನಾದಲ್ಲಿ ಹೇಳಿದೆ.

‘‘ಭಾರತ ಅಭಿವೃದ್ಧಿ ಹೊಂದಿದ ದೇಶ ಹಾಗೂ ಇನ್ನು ಮುಂದೆ ಅಭಿವೃದ್ಧಿ ಹೊಂದುತ್ತಿರುವ ದೇಶ ಪಡೆಯುವ ಸವಲತ್ತು ಭಾರತಕ್ಕೆ ಸಿಗದು. ಆದರೆ, ನಮ್ಮ ಪ್ರಧಾನಿ ಅವರು ಒಂದು ಮಾರ್ಗವನ್ನು ಕಂಡು ಕೊಂಡಿದ್ದಾರೆ. ಟ್ರಂಪ್ ಕಳುಹಿಸಿದ ಹಾಗಲಕಾಯಿಯನ್ನು ಸಿಹಿತಿಂಡಿಯಾಗಿ ಪರಿವರ್ತಿಸಿದ್ದಾರೆ’’ ಎಂದು ಶಿವಸೇನೆ ಸಂಪಾದಕೀಯದಲ್ಲಿ ಹೇಳಿದೆ.

ಡೊನಾಲ್ಡ್ ಟ್ರಂಪ್ ಭೇಟಿಗೆ ಗುಜರಾತ್ ಆಡಳಿತ ಭವ್ಯ ವ್ಯವಸ್ಥೆ ಮಾಡುತ್ತಿರುವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸಂದರ್ಭ “ಭಾರತದ ಜಾಗತಿಕ ವ್ಯಾಪಾರದ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಈ ಹಾಗಲಕಾಯಿ ಬಂದಿದೆ’’ ಎಂದು ಅದು ಹೇಳಿದೆ.

ಭಾರತವನ್ನು ಅಭಿವೃದ್ಧಿ ಹೊಂದುತ್ತಿರುವ ಪಟ್ಟಿಯಿಂದ ತೆಗಯಲಾಗಿದೆ. ಅದಕ್ಕೆ ಬದಲಾಗಿ ಈಗ ಅಭಿವೃದ್ಧಿ ಹೊಂದಿದ ದೇಶ ಎಂದು ಪರಿಗಣಿಸಲಾಗಿದೆ. ಈ ವಾರದ ಆರಂಭದಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಕಚೇರಿ ಬಿಡುಗಡೆ ಮಾಡಿದ ನೋಟಿಸಿನಲ್ಲಿ, ಜಾಗತಿಕ ವ್ಯಾಪಾರದಲ್ಲಿ ಶೇ. 0.5ಕ್ಕಿಂತ ಹೆಚ್ಚು ಪಾಲು ಇರುವ ದೇಶವನ್ನು ಇನ್ನು ಮುಂದೆ ಅಭಿವೃದ್ಧಿ ಹೊಂದಿದ ದೇಶ ಎಂದು ಪರಿಗಣಿಸಲಾಗುವುದು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News