ಚೆನ್ನೈಯಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ: ಘರ್ಷಣೆಯಲ್ಲಿ ನಾಲ್ವರು ಪೊಲೀಸರು, ಪ್ರತಿಭಟನಾಕಾರರಿಗೆ ಗಾಯ

Update: 2020-02-15 16:02 GMT

ಚೆನ್ನೈ, ಫೆ. 15: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಚೆನ್ನೈಯಲ್ಲಿ ನಡೆದ ಪ್ರತಿಭಟನೆ ಸಂದರ್ಭ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ನಾಲ್ವರು ಪೊಲೀಸರು, ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಚೆನ್ನೈಯ ವಾಶರ್‌ಮನ್‌ಪೇಟ್‌ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ಸಂದರ್ಭ ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಹಾರಿದರು. ಈ ಸಂದರ್ಭ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಅಲ್ಲದೆ 100ಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರ ಕ್ರಮವನ್ನು ವಿರೋಧಿಸಿ ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಯಿತು. ಬಂಧಿತರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಲಾಯಿತು. ಈ ಸಂದರ್ಭ ನಡೆದ ಕಲ್ಲು ತೂರಾಟದಲ್ಲಿ ಜಂಟಿ ಆಯುಕ್ತೆ, ಇಬ್ಬರು ಮಹಿಳಾ ಪೊಲೀಸರು ಹಾಗೂ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಗಾಯಗೊಂಡರು.

ಕೆಲವು ಪ್ರತಿಭಟಕಾರರು ಕೂಡ ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಅನಂತರ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಸರ್ವಸಮ್ಮತ ನಿರ್ಧಾರಕ್ಕೆ ಬರಲಾಯಿತು. ಪ್ರತಿಭಟನಾಕಾರರು ಪ್ರತಿಭಟನೆ ಹಿಂದೆ ತೆಗೆಯಲು ನಿರ್ಧರಿಸಿದರು. ಈಗ ಈ ಪ್ರದೇಶ ಸಹಜ ಸ್ಥಿತಿಗೆ ಮರಳಿದೆ ಎಂದು ಪೊಲೀಸರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News