ಗುಂಡು ಹೊಡೆದವನನ್ನು ಅಪ್ರಾಪ್ತ ಎಂದ ಮಾಧ್ಯಮಗಳಿಗೆ ಶಾಹೀನ್ ಶಾಲೆಯ ಮಕ್ಕಳು ಅಪ್ರಾಪ್ತರಂತೆ ಕಾಣುವುದಿಲ್ಲವೇ ?

Update: 2020-02-15 17:06 GMT

ಕಲಬುರಗಿ, ಫೆ.15: ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರುದ್ಧದ ಹೋರಾಟ ದೇಶ ಮತ್ತು ಸಂವಿಧಾನ ಉಳಿಸುವ ಹೋರಾಟವಾಗಿದೆ. ಭಾರತವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡಲು ಬಿಡುವುದಿಲ್ಲ. ಭಾರತಕ್ಕೆ ಯಾವುದೇ ಧರ್ಮ, ಜಾತಿ ಇಲ್ಲ ಎಂಬುದನ್ನು ಪ್ರಧಾನಿ ಅರ್ಥೈಸಿಕೊಳಬೇಕು ಎಂದು ಸಂಸದ ಅಸದುದ್ದೀನ್ ಒವೈಸಿ ಹೇಳಿದ್ದಾರೆ.

ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ವಿರೋಧಿಸಿ ನಗರದ ಪೀರ್ ಬಂಗಾಲಿ ಮೈದಾನದಲ್ಲಿ ನಡೆದ ಬೃಹತ್ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರೆಸ್ಸೆಸ್ ನವರು ದೇಶವನ್ನು ಕೋಮುವಾದದ ಅಫೀಮ್ ನಲ್ಲಿ ಮುಳುಗಿಸಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಆಸ್ಸಾಂನಲ್ಲಿ ಎನ್ಆರ್ಸಿ ಯಿಂದ ಹೊರಗುಳಿದ ಹಿಂದೂಗಳಿಗೆ ಪೌರತ್ವ ನೀಡಲು ಹೊರಟಿದ್ದಾರೆ. ಆದರೆ 5 ಲಕ್ಷ ಮುಸ್ಲಿಮರನ್ನು ಶಿಕ್ಷೆಗೆ ಗುರಿಪಡಿಸುತ್ತಾರೆ. ಮೋದಿ ಅವರು ತಾನು ಪ್ರಧಾನಿ ಆಗಿರುವವರೆಗೆ ಎನ್‌ಆರ್‌ಸಿ ಜಾರಿ ಮಾಡಲ್ಲ ಎಂದು ಘೋಷಿಸಲಿ ಎಂದು ಒತ್ತಾಯಿಸಿದರು.

ಇದು ನಮ್ಮ ಅಸ್ತಿತ್ವದ ಹೋರಾಟವಾಗಿದೆ. ಇಲ್ಲದಿದ್ದರೆ ದೇಶದಲ್ಲಿ ಶವಗಳಂತೆ ಬದುಕಬೇಕಾಗುತ್ತದೆ. ಬೀದರ್ ನಲ್ಲಿ ಒಂದು ನಾಟಕ ಪ್ರದರ್ಶಿಸಿದ್ದಕ್ಕೆ ವಿಧವೆ ಮಹಿಳೆ, ಮಕ್ಕಳು ಮತ್ತು ಸಂಸ್ಥೆಯ ಮೇಲೆ ಪ್ರಕರಣ ದಾಖಲಿಸಿ ಜೈಲಿನಲ್ಲಿ ಹಾಕಿ ಹಿಂಸೆ ನೀಡಲಾಗುತ್ತಿದೆ. ಗೋಲಿಮಾರೊ ಎಂದು ಹೇಳುವವರ ಮೇಲೆ ಯಾವುದೇ ಪ್ರಕರಣ ದಾಖಲಾಗಲ್ಲ. ಆದರೆ ಅಮಾಯಕ ಮಕ್ಕಳ ಮೇಲೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗುತ್ತಿದೆ. ಪ್ರತಿಭಟನೆ ನಡೆಸುತ್ತಿದ್ದ, ಜಾಮಿಯಾ ವಿದ್ಯಾರ್ಥಿಗಳ ಮೇಲೆ ಗುಂಡು ಹೊಡೆದ ಯುವಕನನ್ನು ಅಪ್ರಾಪ್ತ ಎಂದು ಮಾಧ್ಯಮ ಕೆಲವೆ ನಿಮಿಷದಲ್ಲಿ ಘೋಷಣೆ ಮಾಡಿ ವರದಿ ಮಾಡುತ್ತದೆ. ಆದರೆ ಬೀದರ್ ನ ಪುಟ್ಟ ಮಕ್ಕಳು ಇವರಿಗೆ ಅಪ್ರಾಪ್ತರಂತೆ ಕಾಣುವುದಿಲ್ಲ. ಇವರು ಮುಸ್ಲಿಂ ಆದ ಕಾರಣಕ್ಕೆ ಇವರ ಮೇಲೆ ಭೇದವೇ ಎಂದು ಅವರು ವಾಗ್ದಾಳಿ ನಡೆಸಿದರು.

ಸಮಾವೇಶದಲ್ಲಿ ಔರಂಗಬಾದ್ ಸಂಸದ ಇಮ್ತಿಯಾಜ್ ಜಲೀಲ್, ಎಐಎಂಐಎಂ ನಾಯಕ ವಾರಿಸ್ ಪಠಾನ್, ಎಐಎಂಐಎಂ ಕಲಬುರಗಿ ಜಿಲ್ಲಾಧ್ಯಕ್ಷ ಅಬ್ದುಲ್ ರಹೀಮ್ ಮಿರ್ಚಿ, ನ್ಯಾಯವಾದಿ ಸೈಯದ್ ಮಜಹರ್, ಜೆಡಿಎಸ್ ಜಿಲ್ಲಾ ಮುಖಂಡ ನಾಸೀರ್ ಹುಸೈನ್ ಉಸ್ತಾದ್, ಪೀಪಲ್ಸ್ ಫೋರಂ ಸಂಸ್ಥಾಪಕ ಅಧ್ಯಕ್ಷ, ಕಲಬುರಗಿ ನಗರಾಭಿವೃದ್ಧಿ ಮಾಜಿ ಅಧ್ಯಕ್ಷ ಡಾ. ಅಜಗರ್ ಚುಲಬುಲ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಗುರುಶಾಂತ ಪಟೇದಾರ್, ಇಲ್ಯಾಸ್ ಸೇಠ್ ಬಾಗಬಾನ್, ನ್ಯಾಯವಾದ ವಹಾಜ್ ಬಾಬಾ, ಮಜೀದ್ ಪ್ಯಾರೆ ಸೇರಿ ಅನೇಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News