ಶಿವಮೊಗ್ಗ: ಸಿಎಎ ವಿರೋಧಿಸಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ತಾತ್ಕಾಲಿಕ ತೆರೆ

Update: 2020-02-15 17:33 GMT

ಶಿವಮೊಗ್ಗ, ಫೆ.15: ಎನ್‌ಆರ್‌ಸಿ, ಎನ್‌ಪಿ ಆರ್ ಹಾಗೂ ಸಿಎಎ ವಿರೋಧಿಸಿ ಜಾಯಿಂಟ್ ಆಕ್ಷನ್ ಕಮಿಟಿ ವತಿಯಿಂದ ನಗರದ ಈದ್ಗಾ ಬಾಗ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ತಾತ್ಕಾಲಿಕ ತೆರೆಬಿದ್ದಿದೆ.

ಜಾಯಿಂಟ್ ಆಕ್ಷನ್ ಕಮಿಟಿ ಕೇಂದ್ರ ಸರಕಾರದ ಉದ್ದೇಶಿತ ಎನ್‌ಆರ್‌ಸಿ, ಎನ್‌ಪಿಆರ್ ಹಾಗೂ ಸಿಎಎ ತಿದ್ದುಪಡಿ ಕಾಯ್ದೆ ವಿರೋಧಿಸಿ ಶಾಂತಿಯುತ ಅನಿರ್ದಿಷ್ಟಾವಧಿ ಧರಣಿಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಹತ್ತು ದಿವಸಗಳಿಂದ ದಿಲ್ಲಿಯ ಶಾಹಿನ್‌ ಬಾಗ್ ರೀತಿಯಲ್ಲೇ ನಗರದ ಈದ್ಗಾ ಬಾಗ್ ಮೈದಾನದಲ್ಲಿ ಶಾಂತಿಯುತ ಅನಿರ್ದಿಷ್ಟಾವದಿ ಧರಣಿ ನಡೆಸಲಾಗುತ್ತಿತ್ತು. ಹತ್ತು ದಿವಸಗಳಿಂದ ಹಗಲಿರಳು ನಡೆದ ಧರಣಿಗೆ ದಲಿತ ಸಂಘರ್ಷ ಸಮಿತಿ, ಸ್ವರಾಜ್ ಇಂಡಿಯಾ, ಎಸ್‌ಡಿಪಿಐ, ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಹಲವಾರು ಸಂಘಟನೆಗಳ ಉತ್ತಮ ಬೆಂಬಲ ದೊರೆಯಿತು. ಎಡಪಂಥೀಯ ಸಂಘಟನೆಗಳ ನಾಯಕರು, ಪ್ರಗತಿಪರರು ಧರಣಿಯಲ್ಲಿ ಭಾಗವಹಿಸಿ ಕೇಂದ್ರ ಸರಕಾರದ ನಡೆಯನ್ನು ಖಂಡಿಸಿದರು.

ಸಭೆಯಲ್ಲಿ ಮಾತನಾಡಿದ ಪ್ರೊ.ನಜ್ಮಾ ನಝೀರ್, ನಾವೆಲ್ಲರೂ ಮತದಾರರ ಗುರುತಿನ ಚೀಟಿ ಹಿಡಿದುಕೊಂಡು ಮತದಾನ ಮಾಡಿದ್ದೇವೆ. ಆದರೆ, ಮತದಾರರ ಗುರುತಿನ ಚೀಟಿ ನಮ್ಮ ಪೌರತ್ವ ಸಾಬೀತು ಪಡಿಸಲು ಮಾನದಂಡವಲ್ಲ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಹಾಗಿದ್ದರೆ, ಸಿಎಎಗೆ ಮಾನ್ಯತೆ ಇಲ್ಲದಿರುವ ಮತದಾರರ ಚೀಟಿಯಿಂದ ನಾಗರೀಕತೆ ಸಾಬೀತುಪಡಿಸಿ ಚುನಾಯಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮಾನ್ಯತೆ ಕಳೆದು ಕೊಳ್ಳುತ್ತಾರೆ. ಜೊತೆಗೆ ಶಿವಮೊಗ್ಗ ಜಿಲ್ಲೆಯಿಂದ ಚುನಾಯಿಸಿ ಸಂಸತ್‌ಗೆ ಕಳುಹಿಸಿರುವ ಸಂಸದ ಬಿ.ವೈ.ರಾಘವೇಂದ್ರ, ಸಿ.ಎಂ. ಯಡಿಯೂ ರಪ್ಪನವರೂ ಮಾನ್ಯತೆ ಕಳೆದುಕೊಳ್ಳುತ್ತಾರೆ ಎಂದು ನುಡಿದರು.

ಸಿಎಎ, ಎನ್‌ಆರ್‌ಸಿ,ಎನ್‌ಪಿಆರ್ ಸದ್ಯ ದೇಶಕ್ಕೆ ಅವಶ್ಯಕವಿಲ್ಲ ಎಂಬುದನ್ನು ಪ್ರಧಾನಿ ಮೋದಿಯವರು ಅರ್ಥೈಸಿಕೊಳ್ಳಬೇಕು. ಜೊತೆಗೆ ದೇಶದ ಆರ್ಥಿಕತೆ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದ ನಜ್ಮಾ, ಪ್ರಧಾನಿ ಯವರು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಂತೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದಿರಿ. ಅಧಿಕಾರಕ್ಕೆ ಬಂದ ನಂತರ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದೀರಿ ಎಂಬುದನ್ನು ಬಹಿರಂಗ ಪಡಿಸಬೇಕು. ವಿದೇಶದಲ್ಲಿರುವ ಕಪ್ಪು ಹಣವನ್ನು ತರುತ್ತೇವೆ. ಅದನ್ನು ದೇಶದ ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎಂದು ಹೇಳಿದ್ದೀರಿ. ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಸ್ವಯಂ ಉದ್ಯೋಗ ಮಾಡುವವರಿಗೆ ಮುದ್ರಾ ಯೋಜನೆಯಡಿ ಎಷ್ಟು ಜನರಿಗೆ ಸಾಲ ಕೊಟ್ಟಿದ್ದೀರಿ ಎಂದು ಅವರು ಇದೇ ವೇಳೆ ಕೇಂದ್ರ ಸರಕಾರವನ್ನು ಪ್ರಶ್ನಿಸಿದರು.

ಬಳಿಕ ಮಾತನಾಡಿದ ಚಿಂತಕ ಮಹೇಂದ್ರ ಕುಮಾರ್, ಕೇಂದ್ರ ಸರಕಾರ ಮಾನವ ವಿರೋಧಿಯಾದ ಎನ್‌ಆರ್‌ಸಿ, ಎನ್‌ಆರ್‌ಪಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ. ಇದರ ವಿರುದ್ಧ ಪ್ರತಿಭಟನೆ ನಿರಂತರವಾಗಿರಲಿದೆ ಎಂದು ಹೇಳಿದರು.

ಸಭೆಯ ನಂತರ ಸಿಎಎ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಹಾಗೂ ಎನ್‌ಆರ್‌ಪಿ ರದ್ದುಪಡಿ ಮಾಡುವಂತೆ ಡಿಸಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News