ಮಾ.1ರಿಂದ ಚಿಕ್ಕಮಗಳೂರು ಜಿಲ್ಲೆಯ 32 ಬಿಎಸ್ಸೆನ್ನೆಲ್ ಎಕ್ಸ್ ಚೇಂಜ್‌ಗಳು ಸ್ತಬ್ಧ

Update: 2020-02-15 17:38 GMT

ಚಿಕ್ಕಮಗಳೂರು, ಫೆ.15: ಕಳೆದ ಐದು ದಶಕಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಘೋಷಿಸಿದ್ದ ಇಪ್ಪತ್ತು ಅಂಶಗಳ ಕಾರ್ಯಕ್ರಮದ ಅನ್ವಯ ದೇಶದ ಲಕ್ಷಾಂತರ ಗ್ರಾಮಗಳಿಗೆ ಸಂಪರ್ಕ ಜಾಲವನ್ನು ವಿಸ್ತರಿಸಿ ವಿಶ್ವಮಾನ್ಯತೆ ಪಡೆದಿದ್ದ ಸ್ಥಿರ ದೂರವಾಣಿ ವ್ಯವಸ್ಥೆ ಬಿಎಸ್ಸೆನ್ನೆಲ್ ಇಂದಿನ ಆಧುನಿಕತೆ ಮತ್ತು ಜಾಗತೀಕರಣ, ಖಾಸಗೀಕರಣದ ಭರಾಟೆಯಲ್ಲಿ ನೇಪಥ್ಯಕ್ಕೆ ಸರಿಯತೊಡಗಿದ್ದು, ಮುಂದಿನ ಹದಿನೈದು ದಿನಗಳಲ್ಲಿ ಜಿಲ್ಲೆಯ ಹಳ್ಳಿಗಾಡಿನ ಏಕೈಕ ಸಂಪರ್ಕ ವ್ಯವಸ್ಥೆಯಾಗಿದ್ದ 32 ಟೆಲಿಫೋನ್ ಎಕ್ಸ್‌ಚೇಂಜ್‌ಗಳು ಸ್ಥಗಿತಗೊಳ್ಳಲಿವೆ.

ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಯಾದ ನಂತರ ದೇಶದ ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯ ಪ್ರತೀಕವಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆಶಯದಂತೆ ಸಿದ್ಧಪಡಿಸಿದ್ದ ಇಂದಿಗೂ ದೇಶಾದ್ಯಂತ ಉಳಿದುಕೊಂಡಿರುವ ಇಪ್ಪತ್ತು ಅಂಶಗಳ ಕಾರ್ಯಕ್ರಮದಲ್ಲಿ ಹಳ್ಳಿಗಾಡಿನ ಜನತೆಗೆ ದೂರವಾಣಿ ಸೌಲಭ್ಯವನ್ನು ಕ್ರಾಂತಿಕಾರಕವಾಗಿ ಕಲ್ಪಿಸುವ ಯೋಜನೆ ರೂಪಿಸಿ ಜಾರಿಗೆ ತಂದಿದ್ದರು. ಅಮೇರಿಕಾದಂತಹ ಅತ್ಯಂತ ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿ ಉನ್ನತಹುದ್ದೆಯಲ್ಲಿದ್ದ ಭಾರತೀಯ ಮೂಲದ ಶ್ಯಾಮ್ ಪಿತ್ರೋಡ ಅವರನ್ನು ರಾಜೀವ್ ಗಾಂಧಿ ಭಾರತಕ್ಕೆ ಕರೆತಂದು ತಮ್ಮ ವೈಜ್ಞಾನಿಕ ಸಲಹೆಗಾರರಾಗಿ ನೇಮಕ ಮಾಡಿಕೊಂಡ ನಂತರ ಭಾರತದ ದೂರಸಂಪರ್ಕ ವ್ಯವಸ್ಥೆ ಆಧುನಿಕತೆಯ ಹಾದಿಗೆ ಹೊರಳಿತು. ಆಪರೇಟರ್ ಮೂಲಕ ಚಾಲನೆಯಲ್ಲಿದ್ದ ಟೆಲಿಕಾಂ ಸಂಪರ್ಕವನ್ನು ಶ್ಯಾಮ್ ಪಿತ್ರೋಡ ಅವರು ಆಧುನಿಕ ಟೆಲಿಫೋನ್ ತಂತ್ರಜ್ಞಾನವಾದ ಸೀಡಾಟ್ ವ್ಯವಸ್ಥೆಗೆ ಬದಲಾಯಿಸಿದರು. ಅದಕ್ಕಾಗಿ ಭಾರತ ಸರಕಾರ ಸಾವಿರಾರು ಕೊಟಿ ರೂ. ವ್ಯಯಮಾಡಿತ್ತು. ಅದರಿಂದ ಗ್ರಾಹಕ ನೇರವಾಗಿ ತನೆಗ ಬೇಕಾದ ಊರಿಗೆ, ತನಗೆ ಬೇಕಾದವರಿಗೆ ಸಂಖ್ಯೆಯನ್ನು ಒತ್ತುವ ಮೂಲಕ ಸಂಪರ್ಕ ಪಡೆಯಲು ಸೌಲಭ್ಯ ಹೊಂದುವಂತಾಯಿತು.

ಈ ನೇರ ಡಯಲಿಂಗ್, ಎಸ್‌ಟಿಡಿ, ಐಎಸ್‌ಡಿ ಸೌಲಭ್ಯಗಳು ಭಾರತವನ್ನು ವಿಶ್ವದ ಅನೇಕ ರಾಷ್ಟ್ರಗಳು ತಿರುಗಿ ನೋಡುವಂತಾಯಿತು. ಭಾರತದ ಟೆಲಿಫೋನ್ ಕ್ರಾಂತಿಯ ಸಾಧನೆಗೆ ತಲೆದೂಗಿದ ಇರಾನ್‌ನಂತಹ ಶ್ರೀಮಂತ ರಾಷ್ಟ್ರ ತನ್ನ ದೇಶದಲ್ಲೂ ಟೆಲಿಫೋನ್ ಸೌಲಭ್ಯ ಅಭಿವೃದ್ಧಿಪಡಿಸಿಕೊಡುವಂತೆ ಭಾರತ ಸರಕಾರವನ್ನು ಕೋರಿತ್ತು. ಅದಕ್ಕೆ ಸ್ಪಂದಿಸಿದ ಅಂದಿನ ಪ್ರಧಾನಿ ರಾಜೀವ್‌ ಗಾಂದಿ ಮತ್ತು ವೈಜ್ಞಾನಿಕ ಸಲಹೆಗಾರ ಶ್ಯಾಮ್ ಪಿತ್ರೋಡ ಅವರು ಭಾರತದ ದೂರಸಂಪರ್ಕ ಇಲಾಖೆಯ ತಂತ್ರಜ್ಞಾನವನ್ನು ಇರಾನ್‌ಗೆ ಕಳುಹಿಸಿ ಅಲ್ಲಿಯೂ ಟೆಲಿಫೋನ್ ಕ್ರಾಂತಿ ನಡೆಸಲು ಕಾರಣವಾಗಿದ್ದರು.

ಈ ಇಪ್ಪತ್ತು ಅಂಶದ ಕಾರ್ಯಕ್ರಮದ ಅನ್ವಯ ಭಾರತದ ಎಲ್ಲಾ ವರ್ಗದ ಜನತೆ ಹಲವಾರು ಸೌಲಭ್ಯಗಳನ್ನು ಸರಳವಾಗಿ ಪಡೆಯುವಂತಾಗಿತ್ತು. ಜೊತೆಗೆ ಸ್ವಯಂ ಚಾಲಿತ ದೂರವಾಣಿಯ ಸದಸ್ಯರಾದರು. ಆದರೆ, ಈಗಿನ ಮೊಬೈಲ್ ಕ್ರಾಂತಿಯ ಕಾರಣದಿಂದ ಕ್ರಮೇಣ ಸ್ಥಿರ ದೂರವಾಣಿ ವ್ಯವಸ್ಥೆ ನೇಪಥ್ಯಕ್ಕೆ ಸರಿದಿದ್ದರೂ ನೆಟ್‌ವರ್ಕ್ ಸಮಸ್ಯೆಯ ಕಾರಣದಿಂದಾಗಿ ಗ್ರಾಮೀಣ ಭಾಗದಲ್ಲಿ ಈಗಲೂ ಜನತೆ ಸ್ಥಿರ ದೂರವಾಣಿಯನ್ನೇ ನಂಬಿದ್ದಾರೆ. ಆದರೆ ಹಾಲಿ ಕೇಂದ್ರ ಸರಕಾರದ ಟೆಲಿಕಾಂ ನೀತಿಯ ಕಾರಣದಿಂದಾಗಿ ಖಾಸಗಿ ಸಂಸ್ಥೆಗಳಿಗೆ ಬಲ ದೊರೆತು ಸರಕಾರಿ ಸ್ವಾಮ್ಯದ ದೂರವಾಣಿ ವ್ಯವಸ್ಥೆ ಸಡಿಲಗೊಂಡಿದ್ದರ ಪರಿಣಾಮ ಬಿಎಸ್ಸೆನ್ನೆಲ್, ಎಂಟಿಎನ್‌ಎಲ್ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.

ಈ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ ಇಪ್ಪತ್ತಕ್ಕಿಂತ ಕಡಿಮೆ ಸಂಪರ್ಕ ಹೊಂದಿರುವ ಬಿಎಸ್ಸೆನ್ನೆಲ್‌ನ ಮೂವತ್ತೆರಡು ಟೆಲಿಫೋನ್ ಎಕ್ಸ್‌ಚೇಂಜ್‌ಗಳನ್ನು ಮಾರ್ಚ್ ಒಂದರಿಂದ ಸ್ಥಗಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಅರಸಿನಗುಪ್ಪೆ, ಅಲೆಹಳ್ಳಿ, ಅತ್ತಿಗುಂಡಿ, ಭಾರತೀ ಬೈಲು, ಬೇಗಾನೆ, ಬುಕಡಿಬೈಲು, ಬಿ. ಮಲ್ಲೇನಹಳ್ಳಿ, ಗೌಡಹಳ್ಳಿ, ಹಂತೂರ್, ಕೂಡ್ಲುರ್, ಕಡವಂತಿ, ಮಲ್ಲೇಶ್ವರ, ಕಚಿಗೆ, ಕಲ್ಕೆರೆ, ಕೆಮ್ಮಣ್ಣುಗುಂಡಿ, ಕುಂದುರ್, ಕಣಿವೆ, ಕೆರೆಕಟ್ಟೆ, ಕಟ್ಟಿನ ಮನೆ, ಲಕ್ಯಾ, ಎಂ.ಸಿ.ಹಳ್ಳಿ, ಮತ್ತಿ ಘಟ್ಟ, ಮುತ್ತಿನಕೊಪ್ಪ, ಮೇಲ್ಪಾಲ್, ನಿಡುವಾಳೆ, ರಾಮೇನಹಳ್ಳಿ, ಸಿದ್ಧರ ಮಠ, ಸಂಸೆ, ಸೊಕ್ಕೆ, ತೆಕ್ಕೂರ್, ಉತ್ತಮೇಶ್ವರ, ಎಳ್ಳಂಬಳಸೆಯಲ್ಲಿ ಮುಂದಿನ ಹದಿನಾಲ್ಕು ದಿನಗಳು ಮಾತ್ರ ಸ್ಥಿರ ದೂರವಾಣಿ ರಿಂಗಣಿಸಲಿದ್ದು, ಮಾ.1ರಂದು ಸ್ಥಬ್ದವಾಗಲಿವೆ.

ಜಿಲ್ಲೆಯಲ್ಲಿ ಬಿಎಸ್ಸೆನ್ನೆಲ್‌ನಿಂದ ನಿವೃತ್ತಿ ಪಡೆದ ಸಾವಿರಾರು ಸಿಬ್ಬಂದಿ
 
ಈಗ ಬಿಎಸ್ಸೆನ್ನೆಲ್ ಸಂಸ್ಥೆಯ ಬಹುತೇಕ ಸಿಬ್ಬಂದಿ ಸ್ವಯಂ ನಿವೃತ್ತಿ ಪಡೆದಿದ್ದರೆ, ಜಿಲ್ಲೆಯಲ್ಲಿ ಸಾವಿರಾರು ಸಿಬ್ಬಂದಿ ಇತ್ತೀಗಷ್ಟೆ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಹೀಗಾಗಿ ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಸ್ಥಿರ ದೂರವಾಣಿ ಕೇಂದ್ರಗಳನ್ನು ಸಂಸ್ಥೆ ಮುಚ್ಚುವ ನಿರ್ಧಾರಕ್ಕೆ ಬಂದಿದೆ.

ಇತಿಹಾಸದ ಪುಟ ಸೇರುತ್ತಿರುವ ಶಿಸ್ತುಬದ್ಧ ಇಲಾಖೆ
ಸ್ವಾತಂತ್ರ್ಯ ಭಾರತದಲ್ಲಿ ಅಂಚೆ ಮತ್ತು ತಂತಿ ಇಲಾಖೆಯಾಗಿ ಅಂಚೆಯೊಂದಿಗೆ ಟೆಲಿಫೋನ್, ಟೆಲಿಗ್ರಾಂ ಸೌಲಭ್ಯ ಕಲ್ಪಿಸಿ ಅತ್ಯಂತ ಪ್ರಾಮಾಣಿಕ ಸೇವೆ ಹಾಗೂ ಶಿಸ್ತುಬದ್ಧ ಇಲಾಖೆಯಾಗಿದ್ದು ಎಂಬತ್ತರ ದಶಕದಲ್ಲಿ ಅಂಚೆ ಮತ್ತು ದೂರವಾಣಿ ಇಲಾಖೆಯಾಗಿ ಇಬ್ಭಾಗಗೊಂಡು ಪ್ರತ್ಯೇಕವಾಗಿದ್ದರೂ ಕೇಂದ್ರ ಸರಕಾರದ ಅಡಿಯಲ್ಲೇ ಇತ್ತು. ಆದರೆ ಖಾಸಗೀಕರಣಕ್ಕೆ ಸಿಲುಕಿದ ಬಿಎಸ್ಸೆನ್ನೆಲ್ ಕ್ರಮೇಣ ಇತಿಹಾಸದ ಪುಟಕ್ಕೆ ದಾಖಲಾಗುವತ್ತ ಸಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News