ಸಿಎಎ, ಎನ್‌ಆರ್‌ಸಿ ಮೂಲಕ ಹಿಂದೂ ಮುಸ್ಲಿಮರನ್ನು ಬೇರ್ಪಡಿಸುವ ಯತ್ನ: ಸಿ.ಎಂ.ಇಬ್ರಾಹಿಂ

Update: 2020-02-15 17:49 GMT

ಮೈಸೂರು,ಫೆ.15: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಸಿಎಎ, ಎನ್‌ಆರ್‌ಸಿ ಮತ್ತು ಎನ್‍ಪಿಆರ್ ವಿರೋಧಿಸಿ “ಇಹಾಸಾಸ್ ಮೈಸೂರು” ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಪುರಭವನದ ಆವರಣಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಸಿಎಎ, ಎನ್‌ಆರ್‌ಸಿ ಮತ್ತು ಎನ್‍ಪಿಆರ್ ಕಾಯ್ದೆಯನ್ನು ನಾಯಕರು, ಸಾರ್ವಜನಿಕರು ಒಕ್ಕೊರಲಿನಿಂದ ವಿರೋಧಿಸಿದರು.

ಸಂವಿಧಾನಕ್ಕೆ ವಿರುದ್ಧವಾದ ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ, ದೇಶಕ್ಕೆ ಮಾರಕವಾಗಿರುವ ಈ ಕಾಯ್ದೆಯನ್ನು ತಿರಸ್ಕರಿಸಿ ಭಾರತೀಯರಾದ ನಾವು ದೇಶವನ್ನು ರಕ್ಷಿಸುವ ಅಗತ್ಯವಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಮಾತನಾಡಿ, ಕೇಂದ್ರ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾದ ಸಿಎಎ, ಎನ್‌ಆರ್‌ಸಿ ಮತ್ತು ಎನ್‍ಪಿಆರ್ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ಹಿಂದೂ ಮತ್ತು ಮುಸ್ಲಿಮರನ್ನು ಬೇರೆ ಬೇರೆ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಎ ಎನ್‌ಆರ್‌ಸಿ ಮತ್ತು ಎನ್‍ಪಿಆರ್ ಕಾಯ್ದೆಯನ್ನು ಮೊದಲಿಗೆ ವಿದ್ಯಾರ್ಥಿಗಳು ವಿರೋಧಿಸಿದರು, ನಂತರ ಮುಸ್ಲಿಮರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರ ಜೊತೆ ನಮ್ಮ ಎಲ್ಲಾ ರಾಜಕೀಯ ಪಕ್ಷಗಳು ಬೀದಿಗಿಳಿದು ಹೋರಾಟ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಬಂದು 72 ವರ್ಷ ಕಳೆದರೂ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ, ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರಕಿಲ್ಲ, ಸಾಚಾರ್ ವರದಿಯಲ್ಲಿ ಈ ದೇಶದ ದಲಿತರಿಗಿಂತಲೂ ಮುಸ್ಲಿಮರ ಬದುಕು ಕಷ್ಟಕರ ಎಂದು ಉಲ್ಲೇಖಿಸಲಾಗಿದೆ. ಆದರೂ ಎಲ್ಲಾ ರಾಜಕೀಯ ಪಕ್ಷಗಳು ಮುಸ್ಲಿಮರ ಹಿತ ಕಾಯುವಲ್ಲಿ ವಿಫಲರಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಸ್ಲಿಮರಿಗೆ ರಾಜಕೀಯ ಜಾಗೃತಿ ಮೂಡಿಸುವಲ್ಲಿ ನಮ್ಮ ನಾಯಕರು ವಿಫಲರಾದರು ಎಂದ ಅವರು, ಸಿಎಎ, ಎನ್‌ಆರ್‌ಸಿ ಮತ್ತು ಎನ್‍ಪಿಆರ್ ಕಾಯ್ದೆಯಿಂದ ಮುಸ್ಲಿಮರಿಗಷ್ಟೇ ತೊಂದರೆ ಅಲ್ಲ, ಈ ದೇಶದ 90% ಜನರಿಗೆ ತೊಂದರೆ. ಇಂದು ಮುಸ್ಲಿಮರು ಮತ್ತು ದಲಿತರು ಬೀದಿಗಳಿದು ಹೋರಾಟ ಮಾಡುತ್ತಿದ್ದಾರೆ. ಲಿಂಗಾಯತ, ಕುರುಬರ ಬುಡಕ್ಕೆ ಇನ್ನೂ ಬಂದಿಲ್ಲ, ಮುಂದಿನ ದಿನಗಳಲ್ಲಿ ಅವರು ಸಹ ಬೀದಿಗಿಳಿಯಲಿದ್ದಾರೆ ಎಂದು ಹೇಳಿದರು.

ಮುಸ್ಲಿಮರು ಎಂದೂ ಅವರಿಗಾಗಿ ಬೀದಿಗಿಳಿದವರಲ್ಲ, ಜಮ್ಮ ಕಾಶ್ಮೀರದಲ್ಲಿ 1 ಕೋಟಿಗೂ ಅಧಿಕ ಮುಸ್ಲಿಂರನ್ನು ಬಂಧನದಲ್ಲಿಡಲಾಗಿತ್ತು. ಆಗ ಯಾವ ಮುಸ್ಲಿಮರು ಬೀದಿಗಳಿಯಲಿಲ್ಲ, ಗಾಂಧಿ ಸಿದ್ಧಾಂತ, ಅಂಬೇಡ್ಕರ್ ಸಂವಿಧಾನ ಈ ದೇಶದ ಆಧಾರ ಸ್ಥಂಬಗಳು, ಅದನ್ನು ಕೆಡವಲು ಯತ್ನಿಸುತ್ತಿರುವ  ಕೋಮುವಾದಿಗಳ ವಿರುದ್ಧ ಮುಸ್ಲಿಮರು ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಪತ್ರಕರ್ತ ಟಿ.ಗುರುರಾಜ್, ಕೆ.ದೀಪಕ್, ನಜ್ಮಾ ನಜೀರ್, ಪ್ರೊ.ಸೈಯದ್ ಅಕೀಲ್ ಅಹಮದ್ ಮಾತನಾಡಿದರು.

ವಕೀಲೆ ಅಸ್ಮಾ ಪರ್ವೀನ್, ಪ್ರೊ.ಶಬ್ಬೀರ್ ಮುಸ್ತಾಫ, ಮಾಜಿ ಮೇಯರ್ ಅಯೂಬ್ ಖಾನ್, ಅಭಿರುಚಿ ಗಣೇಶ್, ಸಿಐಟಿಯು ಪಿ.ಶೇಷಾದ್ರಿ, ರವಿ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವರು, ಶಕೀಲ್ ಅಹಮದ್, ಪರ್ವೀನ್, ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News