ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಏಶ್ಯನ್ ಚಾಂಪಿಯನ್‌ಗೆ ಲಕ್ಷ್ಯ ಸೇನ್ ಶಾಕ್

Update: 2020-02-15 17:59 GMT

ಹೈದರಾಬಾದ್, ಫೆ.15: ಫಿಲಿಪ್ಪೀನ್ಸ್ ನ ಮನಿಲಾದಲ್ಲಿ ಶನಿವಾರ ನಡೆದ ಏಶ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಂಡೋನೇಶ್ಯಕ್ಕೆ ಆರಂಭದಲ್ಲಿ ಭೀತಿ ಹುಟ್ಟಿಸಿದ್ದ ಭಾರತ ಅಂತಿಮವಾಗಿ 2-3 ಅಂತರದಿಂದ ಸೋಲುಂಡಿದೆ. ಈ ಸೋಲಿನೊಂದಿಗೆ ಭಾರತ ಕಂಚಿಗೆ ತೃಪ್ತಿಪಟ್ಟುಕೊಂಡಿದೆ.

ಲಕ್ಷ ಸೇನ್ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.7ನೇ ಆಟಗಾರ ಜೋನಾಥನ್ ಕ್ರಿಸ್ಟಿ ಅವರನ್ನು 21-18, 22-20 ಗೇಮ್‌ಗಳ ಅಂತರದಿಂದ ಸೋಲಿಸಿ ಶಾಕ್ ನೀಡಿದರು. ಇಡೀ ಟೂರ್ನಮೆಂಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಯುವ ಶಟ್ಲರ್ ಸೇನ್ ಏಶ್ಯನ್ ಗೇಮ್ಸ್ ಚಾಂಪಿಯನ್ ಕ್ರಿಸ್ಟಿಗೆ ಸೋಲುಣಿಸಿದರು.

ವಿಶ್ವದ ನಂ.31ನೇ ಆಟಗಾರ ಸೇನ್ ಮೊದಲ ಗೇಮ್‌ನ್ನು ಸುಲಭವಾಗಿ ಜಯಿಸಿದರು. ಆದರೆ, ಎರಡನೇ ಗೇಮ್‌ನಲ್ಲಿ ಕಠಿಣ ಸವಾಲು ಎದುರಿಸಿದರು. 15-19 ಹಿನ್ನಡೆಯಿಂದ ಚೇತರಿಸಿಕೊಂಡ ಕ್ರಿಸ್ಟಿ ಅವರು ಲಕ್ಷ ವಿರುದ್ಧ 19-19ರಿಂದ ಸಮಬಲ ಸಾಧಿಸಿದರು. ಲಕ್ಷ ಸೇನ್ ತನ್ನಲ್ಲಾ ಅನುಭವವನ್ನು ಬಳಸಿಕೊಂಡು ತನ್ನ ವೃತ್ತಿಜೀವನದಲ್ಲಿ ದೊಡ್ಡ ಗೆಲುವು ದಾಖಲಿಸಿದರು.

 ಇದಕ್ಕೂ ಮೊದಲು ಅಂಥೋನಿ ಸಿನಿಸುಕಾ ವಿರುದ್ಧ ಮೊದಲ ಗೇಮ್‌ನ್ನು 6-21 ಅಂತರದಿಂದ ಸೋತ ಬಳಿಕ ಸಾಯಿ ಪ್ರಣೀತ್ ಗಾಯಗೊಂಡು ನಿವೃತ್ತಿಯಾದರು. ಸಾಯಿ ಪ್ರಣೀತ್‌ಗೆ ಪಂದ್ಯದ ಆರಂಭದಲ್ಲಿ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು.

 ಭಾರತದ ಡಬಲ್ಸ್ ಜೋಡಿ ಎಂಆರ್ ಅರ್ಜುನ್ ಹಾಗೂ ಧುೃವ ಕಪಿಲ ಹಾಲಿ ವಿಶ್ವ ಚಾಂಪಿಯನ್, ವಿಶ್ವದ ನಂ.2ನೇ ಜೋಡಿ ಮುಹಮ್ಮದ್ ಅಹ್ಸಾನ್ ಹಾಗೂ ಹೆಂಡ್ರಾ ಸೆಟಿಯವಾನ್ ವಿರುದ್ಧ ಸೋತರು.

 ಕಿಡಂಬಿ ಶ್ರೀಕಾಂತ್ ಅನುಪಸ್ಥಿತಿಯಲ್ಲಿ ಸಿಂಗಲ್ಸ್ ಪಂದ್ಯ ಆಡಿದ ಶುಭಾಂಕರ್ ಡೇ ಇಂಡೋನೇಶ್ಯದ ಶೇಶಾ ಹಿರೆನ್ ರಶ್ಟಾವಿಟೊ ವಿರುದ್ಧ 17-21, 15-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

 ನಿರ್ಣಾಯಕ ಐದನೇ ಪಂದ್ಯದಲ್ಲಿ ಬದಲಿ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಹಾಗೂ ಲಕ್ಷ ಸೇನ್ ವಿಶ್ವದ ನಂ.1 ಡಬಲ್ಸ್ ತಂಡ ಮಾರ್ಕಸ್ ಫೆರ್ನಾಲ್ಡಿ ಹಾಗೂ ಕೆವಿನ್ ಸಂಜಯ ವಿರುದ್ಧ ಯಾವ ಹಂತದಲ್ಲೂ ಹೋರಾಟ ನೀಡದೆ 6-21, 13-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

ಇಂಡೋನೇಶ್ಯ ತಂಡ ಫೈನಲ್‌ನಲ್ಲಿ ಮಲೇಶ್ಯದ ಸವಾಲು ಎದುರಿಸಲಿದೆ. ಮಲೇಶ್ಯ ತಂಡ ಮತ್ತೊಂದು ಸೆಮಿ ಫೈನಲ್‌ನಲ್ಲಿ ಜಪಾನ್ ವಿರುದ್ಧ 3-0 ಅಂತರದಿಂದ ಜಯ ಸಾಧಿಸಿದೆ. ಜಪಾನ್ ಹಾಗೂ ಕೊರಿಯಾ ನಡುವೆ ಮಹಿಳಾ ಫೈನಲ್ ಪಂದ್ಯ ನಡೆಯಲಿದೆ. ಜಪಾನ್ ತಂಡ ಮಲೇಶ್ಯವನ್ನು 3-0 ಅಂತರದಿಂದ ಮಣಿಸಿದರೆ, ಕೊರಿಯಾ ತಂಡ ಥಾಯ್ಲೆಂಡ್‌ನ್ನು 3-1 ಅಂತರದಿಂದ ಮಣಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News