ರಾಷ್ಟ್ರೀಯ ದಾಖಲೆಯೊಂದಿಗೆ ಟೋಕಿಯೊ ಒಲಿಂಪಿಕ್ಸ್ ಗೆ ಭಾವನಾ

Update: 2020-02-15 18:01 GMT

ರಾಂಚಿ, ಫೆ.15: ಏಳನೇ ಆವೃತ್ತಿಯ ರಾಷ್ಟ್ರೀಯ ರೇಸ್ ವಾಕ್ ಚಾಂಪಿಯನ್‌ಶಿಪ್‌ನಲ್ಲಿ ಅಷ್ಟೇನೂ ಪ್ರಸಿದ್ದಿಯಲ್ಲಿಲ್ಲದ ಭಾವನಾ ಜಾಟ್ 20 ಕಿ.ಮೀ. ರೇಸ್ ವಾಕ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಸಮಯದಲ್ಲಿ ಗುರಿ ತಲುಪಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. 24ರ ಹರೆಯದ ರಾಜಸ್ಥಾನದ ಅಥ್ಲೀಟ್ ಭಾವನಾ 1 ಗಂಟೆ, 29 ನಿಮಿಷ ಹಾಗೂ 54 ಸೆಕೆಂಡ್‌ನಲ್ಲಿ ಗುರಿ ತಲುಪಿದರು. ಈ ಮೂಲಕ ಒಲಿಂಪಿಕ್ಸ್ ಅರ್ಹತಾ ಸಮಯ(1:31:00)ಕ್ಕಿಂತ ಮೊದಲು ಗುರಿ ತಲುಪಿ ಚಿನ್ನ ಜಯಿಸಿದರು. ರಾಜ್‌ಸಮಂದ್ ಜಿಲ್ಲೆಯ ರೈತ ಕುಟುಂಬದಿಂದ ಬಂದಿರುವ ಭಾವನಾ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ಶ್ರೇಷ್ಠ 1:38.30 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದರು. ಶನಿವಾರದ ತನ್ನ ಪ್ರದರ್ಶನ ಮಟ್ಟದಲ್ಲಿ 8ಕ್ಕೂ ಅಧಿಕ ನಿಮಿಷ ಪ್ರಗತಿ ಸಾಧಿಸಿದರು. ಕಳೆದ ವರ್ಷದ ಆಗಸ್ಟ್‌ನಲ್ಲಿ ಪುಣೆಯಲ್ಲಿ ನಡೆದ ಅಖಿಲ ಭಾರತ ಅಂತರ್-ರೈಲ್ವೆ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 20 ಮೀ.ರೇಸ್ ವಾಕ್‌ನ್ನು 1:36:17 ಸೆಕೆಂಡ್‌ನಲ್ಲಿ ಕ್ರಮಿಸಿದ್ದರು. ಜೈಪುರದಲ್ಲಿ ತನ್ನ ಕೋಚ್ ಗುರುಮುಖ್ ಸಿಂಗ್‌ರಿಂದ ಸ್ವಯಂ ಆಗಿ ತರಬೇತಿ ಪಡೆಯುತ್ತಿರುವ ಭಾವನಾ ಈ ತನಕ ಯಾವುದೇ ಜೂನಿಯರ್ ಅಥವಾ ಸೀನಿಯರ್ ಮಟ್ಟದ ಅಂತರ್‌ರಾಷ್ಟ್ರೀಯ ಸ್ಪರ್ಧೆೆಗಳಲ್ಲಿ ಭಾಗವಹಿಸಿಲ್ಲ. ಭಾರತದ ಅಥ್ಲೆಟಿಕ್ಸ್ ಒಕ್ಕೂಟದ ಅಡಿ ರಾಷ್ಟ್ರೀಯ ಶಿಬಿರದಲ್ಲೂ ಭಾಗಿಯಾಗಿಲ್ಲ. 2016ರಲ್ಲಿ ಹೈದರಾಬಾದ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಅಂತರ್-ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ತನ್ನ ಹಿರಿಯರ ವಿಭಾಗದ ವೃತ್ತಿಜೀವನ ಆರಂಭಿಸಿದ್ದ ಭಾವನಾ 1:52:38 ಸೆಕೆಂಡ್‌ನಲ್ಲಿ ಗುರಿ ತಲುಪಿ ಐದನೇ ಸ್ಥಾನ ಪಡೆದಿದ್ದರು. ಕಳೆದ ವರ್ಷದ ರಾಂಚಿಯಲ್ಲಿ ನಡೆದಿದ್ದ ರಾಷ್ಟ್ರೀಯ ಓಪನ್ ಟೂರ್ನಿ ಬಳಿಕ ಶನಿವಾರ ಎರಡನೇ ಬಾರಿ ಈ ಸಾಧನೆ ಮಾಡಿದರು.

‘‘ಇಂದು ನನಗೆ ಕನಸು ನನಸಾದ ದಿನ. ತರಬೇತಿಯ ಅವಧಿಯಲ್ಲಿ 1:27:00 ರೇಂಜ್‌ನಲ್ಲಿ ಸ್ಪರ್ಧಿಸುತ್ತಿದ್ದೆ. ವಾತಾವರಣ ನನಗೆ ಪೂರಕವಾಗಿದ್ದರೆ, ಒಲಿಂಪಿಕ್ಸ್ ಅರ್ಹತಾ ಮಾರ್ಕ್ 1:31:00 ತಲುಪುವ ವಿಶ್ವಾಸದಲ್ಲಿದ್ದೆ. ನನ್ನ ಕೋಚ್ ಜೊತೆ ಕಳೆದ ಹಲವು ತಿಂಗಳ ಕಾಲ ಕಠಿಣ ಪರಿಶ್ರಮಪಟ್ಟಿದ್ದೆ. ಹೀಗಾಗಿ ಈ ಪ್ರದರ್ಶನ ನೀಡಲು ನನ್ನಿಂದ ಸಾಧ್ಯವಾಗಿದೆ’’ಎಂದು ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂ ಸುತ್ತಲಿನ ಮೈದಾನದಲ್ಲಿ ತರಬೇತಿ ನಡೆಸುತ್ತಿದ್ದ ಭಾವನಾ ಹೇಳಿದ್ದಾರೆ.

ಕೆ.ಟಿ. ಇರ್ಫಾನ್(ಪುರುಷರ 20 ಮೀ. ರೇಸ್ ವಾಕ್), ಅವಿನಾಶ್ ಸಬ್ಲೆ(ಪುರುಷರ 3000 ಮೀ. ಸ್ಟೀಪಲ್‌ಚೇಸ್), ಮಿಕ್ಸೆಡ್ 4-400 ಮೀ. ರಿಲೇ ತಂಡ ಹಾಗೂ ನೀರಜ್ ಚೋಪ್ರಾ(ಪುರುಷರ ಜಾವೆಲಿನ್)ಅಥ್ಲೆಟಿಕ್ಸ್ ವಿಭಾಗದಿಂದ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಪುರುಷರ 20 ಕಿ.ಮೀ. ರೇಸ್‌ವಾಕ್‌ನಲ್ಲಿ ಸರ್ವಿಸಸ್‌ನ ಸಂದೀಪ್ ಕುಮಾರ್ 1 ಗಂಟೆ, 21 ನಿಮಿಷ ಹಾಗೂ 34 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದ್ದಾರೆ. ಕುಮಾರ್ ಕೂದಲೆಳೆ ಅಂತರದಿಂದ ಒಲಿಂಪಿಕ್ಸ್ ಅರ್ಹತಾ ಸಮಯ(1:21:00 ಸೆ.)ತಲುಪಲು ವಿಫಲರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News