ದಲಿತರು ಹೊರಗಿನವರು ಎಂದ ಬಿಜೆಪಿ ವಿರುದ್ಧ ಶ್ರೀನಿವಾಸಪ್ರಸಾದ್ ಏಕೆ ಮಾತಾಡುತ್ತಿಲ್ಲ: ಸಿ.ಎಂ.ಇಬ್ರಾಹಿಂ ಪ್ರಶ್ನೆ

Update: 2020-02-15 18:04 GMT

ಮೈಸೂರು: ಈ ದೇಶದ ಮೂಲನಿವಾಸಿಗಳಾದ ದಲಿತರು, ನಾಯಕರು ಮತ್ತು ಬುಡಕಟ್ಟು ಜನರನ್ನು ಹೊರಗಿನಿಂದ ಬಂದವರು ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಹೇಳುತ್ತಿದ್ದಾರೆ. ಇದರ ಬಗ್ಗೆ ಬಿಜೆಪಿಯಲ್ಲಿರುವ ಸಂಸದ ವಿ.ಶ್ರೀನಿವಾಸಪ್ರಸಾದ್ ಏಕೆ ಮಾತನಾಡುತ್ತಿಲ್ಲ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದರು.

ಸಿಎಎ, ಎನ್‌ಆರ್‌ಸಿ ಮತ್ತು ಎನ್‍ಪಿಆರ್ ವಿರೋಧಿಸಿ ನಗರದ ಪುರಭವನದ ಆವರಣದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂಸದ ವಿ.ಶ್ರೀನಿವಾಸಪ್ರಸಾದ್ ಅಂಬೇಡ್ಕರ್ ಬಗ್ಗೆ ಮಾತನಾಡಿದರೆ ಸಾಲದು, ಅಂಬೇಡ್ಕರ್ ಎಳೆದ ರಥವನ್ನು ಮುಂದಕ್ಕೆ ಎಳೆದುಕೊಂಡು ಹೋಗುವ ಪ್ರಯತ್ನ ಮಾಡಬೇಕಿತ್ತು. ಆದರೆ ಮುಸ್ಲಿಮರು ಅಂಬೇಡ್ಕರ್ ರಥವನ್ನು ಎಳೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್ ಮತ್ತು ಸಂವಿಧಾನವನ್ನು ಸಹಿಸದ ಕೋಮುವಾದಿ ಸರ್ಕಾರ ಮೀಸಲಾತಿ ತೆಗೆಯುವ ಉದ್ದೇಶದಿಂದ ಎಲ್ಐಸಿ, ಎಚ್ಎಎಲ್, ಬಿಪಿಸಿ ಸೇರಿದಂತೆ ಅನೇಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದೆ ಎಂದು ತಿಳಿಸಿದರು.

ದಿಲ್ಲಿ ಚುನಾವಣೆಯಲ್ಲಿ 2 ಸಾವಿರ ಕೋಟಿ ಖರ್ಚು ಮಾಡಿದ ಬಿಜೆಪಿಯನ್ನು ಕೇಜ್ರಿವಾಲ್ ಗುಡಿಸಿ ಗುಂಡಾಂತರ ಮಾಡಿದ್ದಾರೆ. ದೆಹಲಿ ಚುನಾವಣೆ ನಂತರ ಮೋದಿ, ಅಮಿತ್ ಶಾ ಕಾಣದಂತೆ ಮಾಯವಾಗಿ ಅದ್ಯಾರೊ ನಡ್ಡಾ ಎಂಬ ವ್ಯಕ್ತಿಯನ್ನು ಮುಂದೆ ಬಿಟ್ಟರು, ಇವರಿಗೆ ಗಂಡಸುತನ ಇದ್ದರೆ ಇವಿಎಂ ಮಷಿನ್ ಬ್ಯಾನ್ ಮಾಡಿ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಲಿ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷದ ತಪ್ಪಿನಿಂದ ಇಂದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಮ್ಮಲ್ಲಿನ ಒಳ ಜಗಳ ಇಂದು ದೇಶವನ್ನು ಈ ಸ್ಥಿತಿಗೆ ತಲುಪಿಸಿದೆ.
-ಸಿ.ಎಂ.ಇಬ್ರಾಹಿಂ, ಮಾಜಿ ಕೇಂದ್ರ ಸಚಿವ.

ಅಂಬೇಡ್ಕರ್ ಅವರನ್ನು ಅಪ್ಪಿಕೊಳ್ಳದೆ, ಸಂವಿಧಾನವನ್ನು ಓದಿಕೊಳ್ಳದೆ ಇರುವುದರಿಂದ ಮುಸ್ಲಿಮರ ಮೇಲೆ ನಿರಂತರ ದೌರ್ಜನ್ಯ, ಹಲ್ಲೆಗಳು ನಡೆಯುತ್ತಿವೆ.
-ನಜ್ಮಾ ನಜೀರ್, ಹೋರಾಟಗಾರ್ತಿ

ಗಾಂಧಿಯನ್ನು ಕೊಂದ ಗೋಡ್ಸೆ ಸಂತಾನ ಇಂದು ಸಂವಿಧಾನವನ್ನು ಕೊಲ್ಲಲು ಯತ್ನಿಸುತ್ತಿದೆ. ಸುಳ್ಳುಗಳನ್ನೇ ಸತ್ಯವಾಗಿಸಿ ಜನರನ್ನು ಮೂರ್ಖರನ್ನಾಗಿ ಮಾಡಿ ಕುರ್ಚಿ ಭದ್ರಪಡಿಸಿಕೊಳ್ಳತ್ತಿರುವ ಸಂತತಿಯನ್ನು ಕಿತ್ತೊಗೆಯಬೇಕಿದೆ.

-ಟಿ.ಗುರುರಾಜ್, ಹಿರಿಯ ಪತ್ರಕರ್ತ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News