ನಟ ಸುದೀಪ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಹೈಕೋರ್ಟ್

Update: 2020-02-15 18:43 GMT

ಚಿಕ್ಕಮಗಳೂರು, ಫೆ.15: ನಟ ಕಿಚ್ಚ ಸುದೀಪ್ ಮಾಲಕತ್ವದ ಕಿಚ್ಚ ಕ್ರಿಯೇಷನ್ಸ್ ನಿರ್ಮಾಣದ ವಾರಸ್ದಾರ ಧಾರವಾಹಿ ವಿವಾದ ಪ್ರಕರಣದಲ್ಲಿ ನಟ ಸುದೀಪ್ ಮತ್ತು ಅವರ ಸಹೋದರ ಮಹೇಶ್ ಸಂಜೀವ್ ಹಾಗೂ ಕಿಚ್ಚ ಕ್ರಿಯೇಷನ್ ವಿರುದ್ಧ ಬೈಗೂರು ಎಸ್ಟೇಟ್ ಮಾಲಕ ದೀಪಕ್ ಮಯೂರ್ ಪಟೇಲ್ ಎಂಬವರು ಸಲ್ಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದು ಸುದೀಪ್ ಪರ ವಕೀಲ ಮತ್ತು ಸುಪ್ರೀಂ ಕೋರ್ಟ್ ವಕೀಲ ಗೋಪಿಪ್ರಕಾಶ್ ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಸಮೀಪದಲ್ಲಿರುವ ಬೈಗೂರಿನಲ್ಲಿ ದೀಪಕ್ ಮಯೂರ್ ಪಾಟೀಲ್ ಮಾಲಕತ್ವದ ದೊಡ್ಮನೆ ಎಸ್ಟೇಟ್‍ನಲ್ಲಿ ವಾರಸ್ದಾರ ಧಾರವಾಹಿಯನ್ನು 2014ರಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಧಾರವಾಹಿ ಚಿತ್ರೀಕರಣ ವೇಳೆ ಕಾಫಿತೋಟ, ಅಡಿಕೆ ಮರಗಳನ್ನು ಕಡಿದು ನಾಶ ಮಾಡಲಾಗಿದೆ ಹಾಗೂ ಬಾಡಿಗೆ ಬಾಕಿ ಹಣವನ್ನು ನೀಡಿಲ್ಲವೆಂದು ಆರೋಪಿಸಿ ನಟ ಸುದೀಪ್ ವಿರುದ್ಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೀಪಕ್ ಪಟೇಲ್ ಪ್ರಕರಣ ದಾಖಲಿಸಿದ್ದರು. ಬಳಿಕ ಪ್ರಕರಣ ಹೈಕೋರ್ಟ್ ಮೇಟ್ಟಿಲೇರಿದ್ದು, ವಿಚಾರಣೆ ಬಳಿಕ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ಗೋಪಿ ಪ್ರಕಾಶ್ ತಿಳಿಸಿದರು.

ದೀಪಕ್ ಮಯೂರ್ ಪಾಟೇಲ್ ಅವರು ನಟ ಸುದೀಪ್ ಅವರ ವಿರುದ್ಧ ಸುಳ್ಳು ದೂರು ದಾಖಲಿಸಿ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ, ನ್ಯಾಯಾಲಯ ಸತ್ಯವನ್ನು ಎತ್ತಿಹಿಡಿದಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಕೀಲರಾದ ಚರಣ್, ನಿತ್ಯಾ ಕಿಚ್ಚ ಕ್ರಿಯೇಷನ್ ಮ್ಯಾನೇಜರ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News