ಪೊಲೀಸ್ ಭದ್ರತೆ ನೀಡಿದ್ದಕ್ಕೆ 1 ಕೋ.ರೂ. ನೀಡಲು ಕವಿ ಇಮ್ರಾನ್‌ಗೆ ಉ.ಪ್ರ.ಸರಕಾರ ನೋಟಿಸ್

Update: 2020-02-16 05:27 GMT

 ಲಕ್ನೋ, ಫೆ.15: ಕವಿ ಹಾಗೂ ರಾಜಕಾರಿಣಿಯಾಗಿರುವ ಇಮ್ರಾನ್ ಪ್ರತಾಪ್‌ ಗರ್ಹಿಗೆ ನೋಟಿಸ್ ಕಳುಹಿಸಿರುವ ಮೊರಾದಾಬಾದ್ ಜಿಲ್ಲಾಡಳಿತ, ಜನವರಿ 29ರಿಂದ ನಗರದಲ್ಲಿ ಪೌರತ್ವ ಕಾಯ್ದೆ(ಸಿಎಎ) ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ ನಿಮ್ಮಿಂದ 1.04 ಕೋ.ರೂ.ವಶಪಡಿಸಿಕೊಳ್ಳುವುದಾಗಿ ತಿಳಿಸಿದೆ.

ಪ್ರತಿಭಟನೆಯ ವೇಳೆ ನಿಯೋಜಿಸಲಾಗಿದ್ದ ಪೊಲೀಸ್ ಭದ್ರತಾ ಸಿಬ್ಬಂದಿಗಳ ಪ್ರತಿದಿನದ ಖರ್ಚುವೆಚ್ಚವನ್ನು ಆಧರಿಸಿ ಲೆಕ್ಕ ಹಾಕಲಾಗಿದೆ ಎಂದು ನೊಟೀಸ್‌ನಲ್ಲಿ ತಿಳಿಸಲಾಗಿದೆ.

‘‘ಸ್ಥಳದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ನೀವು ಕೊಟ್ಟ ಕರೆಯ ಮೇಲೆ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ದೊಡ್ಡ ಗುಂಪು ಈದ್ಗಾ ಮೈದಾನದಲ್ಲಿ ನೆರೆದಿತ್ತು. ಕಾನೂನು ಹಾಗೂ ಸುವ್ಯವಸ್ಥೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆರ್‌ಎಸ್‌ಎಫ್‌ನ ಒಂದು ಹೆಚ್ಚುವರಿ ಪ್ಲಾಟೂನ್, ಪಿಎಸಿಯನ್ನು ನಿಯೋಜಿಸಲಾಗಿತ್ತು. ಈ ಭದ್ರತಾ ಸಿಬ್ಬಂದಿಗಳ ಪ್ರತಿದಿನದ ಖರ್ಚು 13.42 ಲಕ್ಷ ರೂ. ಜಿಲ್ಲಾಡಳಿತ ನಿಮ್ಮಿಂದ 1.04 ಕೋ.ರೂ.ವನ್ನು ವಶಪಡಿಸಿಕೊಳ್ಳಲಿದೆ ಎಂದು ಹೆಚ್ಚುವರಿ ನಗರ ಮ್ಯಾಜಿಸ್ಟ್ರೇಟ್ ರಾಜೇಶ್ ಕುಮಾರ್ ನೀಡಿದ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

 ಇಮ್ರಾನ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲು ಸ್ಥಳಕ್ಕೆ ತಲುಪುವ ಒಂದುದಿನದ ಮೊದಲು ಫೆಬ್ರವರಿ 6ರಂದು ನೋಟಿಸ್ ನೀಡಲಾಗಿದೆ. ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಮೊರಾದಾಬಾದ್‌ನಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತಿದ್ದ ಇಮ್ರಾನ್ ಫೆ.7ರಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

"ಉತ್ತರಪ್ರದೇಶ ಸರಕಾರ ಜನತೆ ಅಧಿಕಾರಿಗಳ ವಿರುದ್ಧ ಮಾತನಾಡುವುದನ್ನು ಇಷ್ಟಪಡುತ್ತಿಲ್ಲ. ಫೆ.7ಕ್ಕೆ ಸಾಕಷ್ಟು ಮೊದಲೇ ಮೊರಾದಾಬಾದ್‌ಗೆ ಭೇಟಿ ನೀಡಿದ್ದೆ. ಅಲ್ಲಿ ಯಾವುದೇ ಕಾನೂನು ಸುವ್ಯವಸ್ಥೆಯ ಸಮಸ್ಯೆಯಿಲ್ಲ. ರಾಜ್ಯಸರಕಾರ ನಮ್ಮನ್ನು ಗುರಿ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ಜಿಲ್ಲಾಡಳಿತ ಪ್ರತಿಭಟನಾಕಾರರನ್ನು ಬೆದರಿಸಲು ವಿವಿಧ ರೀತಿಯ ಪ್ರಯತ್ನ ನಡೆಸಿತ್ತು. ಆದರೆ ನಾವು ಇದಕ್ಕೆ ಹೆದರಲಿಲ್ಲ. ನಾನು ಫೆ.7ರಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದೆ. ಕಾನೂನು ಸುವ್ಯವಸ್ಥೆ ಧಕ್ಕೆಯಾಗುವ ಯಾವುದೇ ಪದವನ್ನು ನನ್ನ ಭಾಷಣದಲ್ಲಿ ಪ್ರಸ್ತಾವಿಸಿಲ್ಲ. ನಾನು ಈ ನೋಟಿಸ್‌ನ ವಿರುದ್ಧ ನ್ಯಾಯಾಲಯಕ್ಕೆ ತೆರಳುವೆ’’ಎಂದು ಇಮ್ರಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News