ನಾಡಗೀತೆಗೆ ಅವಮಾನ ಆರೋಪ: ಇಬ್ಬರು ಶಿಕ್ಷಕರ ಅಮಾನತು

Update: 2021-03-12 12:27 GMT

ಬೀದರ್, ಫೆ. 16: ನಾಡಗೀತೆ ಹಾಡುತ್ತಿದ್ದಾಗ ಮೂತ್ರವಿಸರ್ಜನೆಗೆ ತೆರಳಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಶಿಕ್ಷಕರನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ.

ನಗರದ ಪಶು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ 2019-20ನೆ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಈ ಘಟನೆ ನಡೆದಿತ್ತು. ಕ್ರೀಡಾಕೂಟದಲ್ಲಿ ನಾಡಗೀತೆ ಹಾಡುವಾಗ ಔರಾದ್ ತಾಲೂಕಿನ ಹಿಪ್ಪಳಗಾಂವ ಸರಕಾರಿ ಶಾಲೆಯ ಶಿಕ್ಷಕ ವಿರೇಶ ಹಾಗೂ ಗಂಗಾರಾಮ ತಾಂಡ ಸರಕಾರಿ ಶಾಲೆಯ ಶಿಕ್ಷಕ ವಿಜಯಕುಮಾರ ರಾಠೋಡ್ ಎಂಬುವರು ಮೂತ್ರ ವಿಸರ್ಜನೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಇಬ್ಬರು ಶಿಕ್ಷಕರನ್ನು ಬೀದರ್ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹದೇವ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಕರು ಅದೇ ಪ್ರಾಂಗಣದಲ್ಲಿ ಮೂತ್ರ ವಿಸರ್ಜನೆಗೆ ತೆರಳಿ ನಾಡಗೀತೆ ಹಾಗೂ ಕ್ರೀಡಾಕೂಟಕ್ಕೆ ಅವಮಾನಿಸಿದ್ದಾರೆಂದು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News