ಬುರ್ಖಾ ಧರಿಸಿದ್ದಕ್ಕೆ ಟ್ರೋಲ್ ಮಾಡಿದ ತಸ್ಲೀಮಾ ನಸ್ರೀನ್ ಗೆ 'ಫೆಮಿನಿಸಂ' ಪಾಠ ಮಾಡಿದ ಎ.ಆರ್. ರಹ್ಮಾನ್ ಪುತ್ರಿ

Update: 2020-02-16 13:57 GMT

ಹೊಸದಿಲ್ಲಿ: ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಅವರ ಪುತ್ರಿ ಖತೀಜಾ ರಹಮಾನ್ ಬುರ್ಖಾ ಧರಿಸುವ ಬಗ್ಗೆ ಟೀಕಿಸಿದ ಲೇಖಕಿ ತಸ್ಲೀಮಾ ನಸ್ರೀನ್ ಗೆ ಖತೀಜಾ ನೀಡಿರುವ ತಿರುಗೇಟು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಖತೀಜಾ ಅವರ ಫೋಟೊವನ್ನು ಶೇರ್ ಮಾಡಿದ್ದ ತಸ್ಲೀಮಾ ನಸ್ರೀನ್, "ನಾನು ಎ.ಆರ್.ರಹಮಾನ್ ಅವರ ಸಂಗೀತವನ್ನು ಪ್ರೀತಿಸುತ್ತೇನೆ. ಆದರೆ ಯಾವಾಗೆಲ್ಲಾ ನಾನು ಅವರ ಪುತ್ರಿಯನ್ನು ನೋಡುತ್ತೇನೋ, ನನಗೆ ಉಸಿರುಗಟ್ಟಿದಂತಾಗುತ್ತದೆ. ಸಂಪ್ರದಾಯವಾದಿ ಕುಟುಂಬದ ಸುಶಿಕ್ಷಿತ ಮಹಿಳೆಯೂ ಕೂಡ ಬ್ರೈನ್ ವಾಶ್ ಗೊಳಗಾಗುತ್ತಾಳೆ ಎಂದು ತಿಳಿಯುವಾಗ ಬೇಸರವಾಗುತ್ತದೆ" ಎಂದಿದ್ದರು.

ತಸ್ಲೀಮಾ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಖತೀಜಾ ಕಾರ್ಸನ್ ಕೊಲ್ಹಾಫ್ ಅವರ ಹೇಳಿಕೆಯನ್ನು ಬರೆದು , "ಉಸಿರುಗಟ್ಟಿದಂತಾಗುವ ನನ್ನ ಪ್ರೀತಿಪಾತ್ರರಿಗೆ, ದಯವಿಟ್ಟು ಹೊರಹೋಗಿ ಉಸಿರಾಡಿ" ಎಂದಿದ್ದಾರೆ.

ಈ ಬಗ್ಗೆ ಇನ್ನೊಂದು ಪೋಸ್ಟ್ ಮಾಡಿರುವ ಖತೀಜಾ, "ನಾನು ಮಾಡಿರುವ ಆಯ್ಕೆಗಳ ಬಗ್ಗೆ ನಾನು ಎಂದಿಗೂ ವಿಷಾದಿಸಲಾರೆ. ನಾನು ಏನು ಮಾಡುತ್ತೇನೋ ಆ ಬಗ್ಗೆ ನಾನು ಸಂತಸಗೊಂಡಿದ್ದೇನೆ ಮತ್ತು ನನಗೆ ಹೆಮ್ಮೆಯಿದೆ ಹಾಗು ನನ್ನನ್ನು ಸ್ವೀಕರಿಸಿದವರಿಗೆ ಧನ್ಯವಾದ. ನನ್ನ ಕೆಲಸ ಮಾತನಾಡುತ್ತದೆ. ಪ್ರೀತಿಯ ತಸ್ಲೀಮಾ ನಸ್ರೀನ್, ನನ್ನ ವಸ್ತ್ರದಿಂದ ನಿಮಗೆ ಉಸಿರುಗಟ್ಟಿದಂತಾದರೆ ನನ್ನನ್ನು ಕ್ಷಮಿಸಿ. ಹೋಗಿ ಉಸಿರಾಡಿ. ಏಕೆಂದರೆ ನಾನು ಏನು ಮಾಡುತ್ತಿದ್ದೇನೋ ಆ ಬಗ್ಗೆ ನನಗೆ ಹೆಮ್ಮೆಯಿದೆ. ಫೆಮಿನಿಸಂ ಎಂದರೇನು ಎಂದು ನೀವು ಗೂಗಲ್ ನಲ್ಲಿ ಹುಡುಕಾಡಿ ಎಂದು ನಾನು ಹೇಳಲು ಇಚ್ಛಿಸುತ್ತೇನೆ. ಏಕೆಂದರೆ ಅದು ಇನ್ನೊಬ್ಬ ಮಹಿಳೆಯನ್ನು ಛೇಡಿಸುವುದಲ್ಲ ಅಥವಾ ಘಟನೆಯೊಂದಕ್ಕೆ ಅವರ ತಂದೆಯನ್ನು ಎಳೆದು ತರುವುದಲ್ಲ" ಎಂದು ತಿರುಗೇಟು ನೀಡಿದ್ದಾರೆ.

ಖತೀಜಾರ ಈ ಪ್ರತಿಕ್ರಿಯೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಅವರ ನೇರನುಡಿಯ ಬಗ್ಗೆ ಹಲವರು ಕಾಮೆಂಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News