ತೀವ್ರ ಆರ್ಥಿಕ ಸಂಕಷ್ಟ: ಕಾರ್ಮಿಕರೇ ಒಡೆಯರಾಗಿದ್ದ ಮಲೆನಾಡಿನ ಸಹಕಾರಿ ಸಾರಿಗೆ ಸಂಸ್ಥೆ ದಿವಾಳಿ ?

Update: 2020-02-18 10:53 GMT

► ಹೋರಾಟದ ಮೂಲಕ ಹುಟ್ಟಿದ್ದ ಸಾರಿಗೆ ಸಂಸ್ಥೆಯ 3 ದಶಕಗಳ ಪ್ರಯಾಣಕ್ಕೆ ಬ್ರೇಕ್

ಚಿಕ್ಕಮಗಳೂರು, ಫೆ.16: ಅದು 90ರ ದಶಕದ ಕಾಲ, ಮಲೆನಾಡಿನಲ್ಲಿ ಸಾರ್ವಜನಿಕರಿಗೆ ಮೊಟ್ಟ ಮೊದಲು ಖಾಸಗಿಯಾಗಿ ಸಾರಿಗೆ ಬಸ್‍ಗಳ ಸೌಲಭ್ಯವನ್ನು ಕಲ್ಪಿಸಿದ್ದ ಶಂಕರ್ ಟ್ರಾನ್ಸ್ ಪೋರ್ಟ್ ಹೆಸರಿನ ಸಂಸ್ಥೆ ಇಲ್ಲಿನ ಸಾರಿಗೆ ಕ್ಷೇತ್ರದ ಅಧಿಪತಿಯಂತಿತ್ತು. ಅತ್ಯಂತ ಲಾಭದಲ್ಲಿದ್ದ ಈ ಸಂಸ್ಥೆಯ ನೌಕರರು ವೇತನ ಹೆಚ್ಚಿಸಿ ಎಂದು ದಿಢೀರ್ ಮುಷ್ಕರ ಆರಂಭಿಸಿದ್ದರು. ಸಂಸ್ಥೆಯ ಮಾಲಕರು ಕಾರ್ಮಿಕರ ವೇತನ ಹೆಚ್ಚಳಕ್ಕೆ ಸುತಾರಾಂ ಒಪ್ಪಿರಲಿಲ್ಲ. ಪಟ್ಟು ಬಿಡದ ಕಾರ್ಮಿಕರು ಅನಿರ್ದಿಷ್ಟಾವಧಿಗೆ ಮುಷ್ಕರವನ್ನು ಮುಂದುವರಿಸಿದ್ದರು. ಸುಮಾರು 70 ದಿನಗಳ ಮುಷ್ಕರದ ಬಳಿಕವೂ ಶಂಕರ್ ಸಾರಿಗೆ ಸಂಸ್ಥೆಯ ಮಾಲಕರು ತಮ್ಮ ಪಟ್ಟು ಸಡಿಲಿಸದೇ ಸಂಸ್ಥೆಯನ್ನೇ ಮುಚ್ಚುವ ನಿರ್ಧಾರವನ್ನು ಘೋಷಿಸಿಯೇ ಬಿಟ್ಟಿದ್ದರು. ಸಂಸ್ಥೆಯ ಮಾಲಕರ ಈ ಹಠಾತ್ ನಿರ್ಧಾರದಿಂದಾಗಿ ಮುಷ್ಕರ ನಿರತ 123 ಮಂದಿ ಕಾರ್ಮಿಕರು ದಿಢೀರ್ ಉದ್ಯೋಗ ಕಳೆದುಕೊಂಡು ಬೀದಿಪಾಲಾಗಿದ್ದರು. 

ಈ ವೇಳೆ ಜಿಲ್ಲೆಯಲ್ಲಿ ಕಾರ್ಮಿಕರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ, ಜಿಲ್ಲೆಯಾದ್ಯಂತ ಮನೆಮಾತಾಗಿದ್ದ, ಕಾರ್ಮಿಕರ ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದ ಓರ್ವ ಬುದ್ಧಿವಂತ ಕಾರ್ಮಿಕ ನಾಯಕ ಅತಂತ್ರರಾಗಿ ಬೀದಿಪಾಲಾಗಿದ್ದ ಕಾರ್ಮಿಕರ ನೆರವಿಗೆ ಧಾವಿಸಿದ್ದರು. ಅಂದಿನ ಜಿಲ್ಲಾಧಿಕಾರಿಯಾಗಿದ್ದ ಸುಬ್ರಹ್ಮಣ್ಯ ಅವರ ಸಹಕಾರ ಪಡೆದ ಅವರು ಇಡೀ ದೇಶದಲ್ಲೇ ಪ್ರಥಮ ಬಾರಿಗೆ ಕಾರ್ಮಿಕರೇ ಮಾಲಕರಾಗಿದ್ದ, ಕೇವಲ 6 ಬಸ್‍ಗಳನ್ನಿಟ್ಟುಕೊಂಡು 1991, ಮಾ.8ರಂದು ಸಹಕಾರಿ ತತ್ವದಡಿಯಲ್ಲಿ ಸಾರಿಗೆ ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದರು. ಅಂದು ಹುಟ್ಟಿಕೊಂಡ ಸಾರಿಗೆ ಸಂಸ್ಥೆಯ ಹೆಸರು ಮಲೆನಾಡಿನ ಖಾಸಗಿ ಸಾರಿಗೆ ಕ್ಷೇತ್ರದ ಕಣ್ಮಣಿ 'ಸಹಕಾರ ಸಾರಿಗೆ'.

1991ರಲ್ಲಿ ಸಹಕಾರಿ ತತ್ವದಡಿಯಲ್ಲಿ ಕಾರ್ಮಿಕರೇ ಮಾಲಕರಾಗಿ ಹುಟ್ಟು ಪಡೆದ ಸಹಕಾರಿ ಸಾರಿಗೆ ಸಂಸ್ಥೆ ಅಂದಿನಿಂದ ಇಂದಿನವರೆಗೂ ಮಲೆನಾಡಿನ ಜನರ ಜೀವನಾಡಿಯಾಗಿದ್ದುಕೊಂಡು ಮನೆನಾಡಿನಾದ್ಯಂತ ಶಿಸ್ತುಬದ್ಧ ಸಾರಿಗೆ ಜಾಲವನ್ನು ಸಮರ್ಪಕವಾಗಿ ವಿಸ್ತರಿಸಿಕೊಂಡು ಬಂದಿದೆ. ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಸಂಸ್ಥೆ ಕೆಲವೇ ದಿನಗಳಲ್ಲಿ ಏಷ್ಯಾ ಖಂಡದಲ್ಲೇ ಅತ್ಯಂತ ಮಾದರಿ ಸಾರಿಗೆ ಸಂಸ್ಥೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿತ್ತು. ಇಂತಹ ಅಪರೂಪದ ಸಹಕಾರ ಸಾರಿಗೆ ಸಂಸ್ಥೆ ಇದೀಗ ದಿವಾಳಿಯ ಅಂಚಿಗೆ ಬಂದು ನಿಂತಿದ್ದು, ಮಲೆನಾಡಿನಲ್ಲಿ ಸಾವಿರಾರು ಕಾರ್ಮಿಕರ ಪಾಲಿಗೆ ಬದುಕು ನೀಡಿದಲ್ಲದೇ, ಇಲ್ಲಿನ ಲಕ್ಷಾಂತರ ಮಂದಿ ಜನರ ಪಾಲಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿದ್ದ ಈ ಸಂಸ್ಥೆ 2020, ಫೆ.16ರಿಂದ ತನ್ನ ಸುಧೀರ್ಘ ಪ್ರಯಾಣದ ಯಾನವನ್ನು ನಿಲ್ಲಿಸಿದ್ದು, ಈ ದಿಢೀರ್ ಬೆಳವಣಿಗೆಯಿಂದಾಗಿ ಮಲೆನಾಡಿನ ಜನರು ಅಕ್ಷರಶಃ ಕಂಗಾಲಾಗಿದ್ದಾರೆ.

1991, ಮಾ.8ರಂದು ಹುಟ್ಟಿದ ಸಹಕಾರ ಸಾರಿಗೆ ಸಂಸ್ಥೆ ಮಲೆನಾಡಿನಲ್ಲಿ ಹಂತಹಂತವಾಗಿ ತನ್ನ ಸಾರಿಗೆ ಮಾರ್ಗಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಬಂದಿದೆ. ಅತ್ಯಂತ ಶಿಸ್ತುಬದ್ಧ ಆಡಳಿತ, ಕಾರ್ಮಿಕರ ಪ್ರಾಮಾಣಿಕ ಶ್ರಮದ ಫಲವಾಗಿ ಆರಂಭದಲ್ಲಿ ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ ಮತ್ತು ಚಿಕ್ಕಮಗಳೂರು ತಾಲೂಕುಗಳ ವ್ಯಾಪ್ತಿಯಲ್ಲಿ ಹಳ್ಳಿಹಳ್ಳಿಯಲ್ಲೂ ಸಂಪರ್ಕ ಜಾಲ ಹೊಂದಿದ್ದ ಸಂಸ್ಥೆ ಆರ್ಥಿಕವಾಗಿ ಸದೃಢವಾಗುತ್ತಿದ್ದಂತೆ ತನ್ನ ಸಾರಿಗೆ ಜಾಲವನ್ನು ಇಡೀ ಜಿಲ್ಲೆಗೆ ವಿಸ್ತರಿಸಿತ್ತು. ನಂತರ ನೆರೆಯ ಜಿಲ್ಲೆಗಳಾದ ಶಿವಮೊಗ್ಗ, ಉಡುಪಿ ಜಿಲ್ಲೆಗಳಿಗೂ ಸಾರಿಗೆ ಸಂಪರ್ಕ ಸೇವೆಯನ್ನು ವಿಸ್ತರಿಸಿ ಜಿಲ್ಲೆಯ ಪ್ರಮುಖ ಸಾರಿಗೆ ಸಂಸ್ಥೆಯಾಗಿ ಬೆಳೆದು ಹೆಮ್ಮರವಾಗಿತ್ತು. ಆರಂಭದಲ್ಲಿ ಶಂಕರ್ ಕಂಪೆನಿಯಿಂದ ಖರೀದಿಸಿದ್ದ 6 ಬಸ್‍ಗಳ ಸೇವೆ ಪ್ರಸಕ್ತ 70 ಬಸ್‍ಗಳಿಗೆ ಬಂದು ನಿಂತಿದೆ. ಕೊಪ್ಪ ಪಟ್ಟಣ ಸಮೀಪದ ಕಸವೆ ಎಂಬಲ್ಲಿ ಸಂಸ್ಥೆ ಕೋಟ್ಯಂತರ ರೂ. ಬೆಲೆ ಬಾಳುವ ಗಣಕೀಕೃತ ಸ್ವಂತ ಆಡಳಿತ ಕಚೇರಿಯನ್ನೂ ಹೊಂದಿದ್ದು, ಸದ್ಯ ಮುನ್ನೂರಕ್ಕೂ ಹೆಚ್ಚು ಕಾರ್ಮಿಕರು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲ ಕಾರ್ಮಿಕರು ಸಂಸ್ಥೆಯಲ್ಲಿ ಷೇರುಗಳನ್ನು ಪಡೆಯುವುದು ಕಡ್ಡಾಯವಾಗಿದ್ದು, ಕಾರ್ಮಿಕರಲ್ಲದವರಿಗೆ ಸಂಸ್ಥೆಯಲ್ಲಿ ಜಾಗವಿಲ್ಲ ಎಂಬ ನಿಯಮಕ್ಕೆ ಸಂಸ್ಥೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. 2017ರಲ್ಲಿ ಸಂಸ್ಥೆ ಬೆಳ್ಳಿಹಬ್ಬವನ್ನೂ ಆಚರಿಸಿಕೊಂಡಿರುವುದು ಸಂಸ್ಥೆಯ ಬೆಳವಣಿಗೆಗೆ ಹಿಡಿದ ಕನ್ನಡಿಯಾಗಿದೆ.

ಆರ್ಥಿಕ ಸಂಕಷ್ಟ-ಸರಕಾರದ ಅಸಹಕಾರ
ಮಲೆನಾಡಿನ ಸಾರಿಗೆ ಕ್ಷೇತ್ರದಲ್ಲಿ ತನ್ನದೇಯಾದ ಛಾಪು ಮೂಡಿಸಿರುವ ಸಹಕಾರ ಸಾರಿಗೆ ಸಂಸ್ಥೆ ಕಾರ್ಮಿಕರ ಶಿಸ್ತುಬದ್ಧ ಆಡಳಿತ ವ್ಯವಸ್ಥೆ, ಕಠಿಣ ಶ್ರಮದ ಫಲವಾಗಿ ಬಹುಬೇಗನೆ ಆರ್ಥಿಕ ಲಾಭಗಳಿಸುವಲ್ಲಿ ಶಕ್ತವಾಗಿತ್ತು. ಆದರೆ ಕಳೆದ ಒಂದೂವರೆ ದಶಕಗಳಿಂದೀಚೆಗೆ ಮಲೆನಾಡಿನ ಸಾರಿಗೆ ವ್ಯವಸ್ಥೆಯಲ್ಲಾದ ಬೆಳವಣಿಗೆ ಸಹಕಾರಿ ಸಾರಿಗೆಯ ಹಾದಿಗೆ ಮುಳ್ಳಾಗಲಾರಂಭಿಸಿದ್ದವು. ಮಲೆನಾಡಿನಲ್ಲಿ ಶಂಕರ್ ಕಂಪೆನಿ ಮುಚ್ಚಿದ ನಂತರ ಕಾರ್ಮಿಕರಿಂದಲೇ ಹುಟ್ಟಿಕೊಂಡ ಸಹಕಾರ ಸಾರಿಗೆ ಸಂಸ್ಥೆಗೆ ಆರಂಭದಲ್ಲಿ ಪೈಪೋಟಿ ನೀಡುವ ಖಾಸಗಿ ಸಾರಿಗೆ ಸಂಸ್ಥೆಗಳು ಇರಲಿಲ್ಲ. ಸರಕಾರಿ ಸಾರಿಗೆಯಂತೂ ಮಲೆನಾಡಿನಲ್ಲಿ ಇರಲೇ ಇಲ್ಲ. ಆದರೆ ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ಲಾಭಗಳಿಸುತ್ತಿದ್ದಂತೆ ಮಲೆನಾಡು ಭಾಗದಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳಲಾರಂಭಿಸಿದ್ದವು. ಸ್ಥಳೀಯವಾಗಿ ಹುಟ್ಟಿಕೊಂಡ ಇತರ ಖಾಸಗಿ ಸಾರಿಗೆ ಬಸ್‍ಗಳು ಹಾಗೂ ಉಡುಪಿ, ಶಿವಮೊಗ್ಗ ಜಿಲ್ಲೆಗಳ ಖಾಸಗಿ ಸಾರಿಗೆ ಬಸ್‍ಗಳು ಚಿಕ್ಕಮಗಳೂರು ಜಿಲ್ಲೆಯಲ್ಲೂ ಸಂಚಾರ ಆರಂಭಿಸಿದ ಪರಿಣಾಮ ಸಹಕಾರಿ ಸಾರಿಗೆ ತೀವ್ರ ಪೈಪೋಟಿಯನ್ನು ಎದುರಿಸಬೇಕಾಯಿತು.

ಬಳಿಕ ಸರಕಾರಿ ಸಾರಿಗೆ ಬಸ್‍ಗಳು ಮಲೆನಾಡಿನಲ್ಲೂ ರಸ್ತೆಗಿಳಿದಿದ್ದೂ ಸಹಕಾರ ಸಾರಿಗೆಗೆ ದೊಡ್ಡ ಹೊಡೆತ ನೀಡಿತ್ತು. ಖಾಸಗಿ ಹಾಗೂ ಸರಕಾರಿ ಸಾರಿಗೆ ಸಂಸ್ಥೆಗಳ ಪೈಪೋಟಿ ಹೆಚ್ಚಾದ ಪರಿಣಾಮ ಸಹಕಾರಿ ಸಾರಿಗೆ ಸಂಸ್ಥೆ ಕಳೆದೊಂದು ದಶಕದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಲಾರಂಭಿಸಿತ್ತು. ಇದರೊಂದಿಗೆ ಬಸ್‍ಗಳ ವಿಮೆ, ರೋಡ್ ಟ್ಯಾಕ್ಸ್, ಕಾರ್ಮಿಕರ ವೇತನ ಹಾಗೂ ಇತರ ಸೌಲಭ್ಯಗಳಲ್ಲಿ ಹೆಚ್ಚಳ ವಿದ್ಯಾರ್ಥಿಗಳ ರಿಯಾಯಿತಿ ಪಾಸ್ ಮತ್ತು ಡೀಸೆಲ್ ಬೆಲೆ ಏರಿಕೆ ಮತ್ತು ಕೇಂದ್ರ ಸರಕಾರದ ಜಿಎಸ್‍ಟಿ ಇತ್ಯಾದಿ ಹೊರೆಗಳಿಂದಾಗಿ ಸಂಸ್ಥೆ ಆರ್ಥಿಕವಾಗಿ ಚೇತರಿಸಿಕೊಳ್ಳಲಾಗಲಿಲ್ಲ. ಕಳೆದೊಂದು ದಶಕದಿಂದ ಸತತ ನಷ್ಟದಲ್ಲಿದ್ದ ಸಂಸ್ಥೆ ಕಳೆದ ನಾಲ್ಕು ವರ್ಷಗಳಿಂದ ಕಾರ್ಮಿಕರಿಗೆ ವೇತನ ಸೇರಿದಂತೆ ಬೋನಸ್, ಭತ್ತೆ, ಪಿಎಫ್ ಹಣ ಪಾವತಿಸಲೂ ಹಣವಿಲ್ಲದೇ ದಿವಾಳಿ ಹಂತಕ್ಕೆ ಬಂದು ನಿಂತಿದೆ.

ಸಹಕಾರ ನೀಡದ ಸರಕಾರ
ಸಹಕಾರಿ ತತ್ವದಡಿಯಲ್ಲಿ ಕಳೆದ ಮೂರು ದಶಕಗಳಿಂದ ಮಲೆನಾಡು ಭಾಗದ ಮೂರು ಜಿಲ್ಲೆಗಳ ಸಾರ್ವಜನಿಕರ ಸುಗಮ ಸಂಚಾರದ ವ್ಯವಸ್ಥೆಗೆ ಸಾಕ್ಷಿಯಾಗಿದ್ದ ಸಹಕಾರ ಸಾರಿಗೆ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಂತೆ ಸಂಸ್ಥೆಯ ನಿರ್ದೇಶಕರು ಹಲವು ಬಾರಿ ಸರಕಾರಕ್ಕೆ ಮನವಿ ನೀಡಿ ವಿಮೆ, ರಸ್ತೆ ತೆರಿಗೆ ಹಾಗೂ ವಿದ್ಯಾರ್ಥಿಗಳ ಬಸ್‍ಪಾಸ್ ಸೌಲಭ್ಯಕ್ಕೆ ಸಬ್ಸಿಡಿ ನೀಡವಂತೆ ಮನವಿ ಮಾಡಿದ್ದರು. ಇತ್ತೀಚೆಗೆ ಸಿಎಂ ಯಡಿಯೂರಪ್ಪ ಅವರನ್ನೂ ಸಂಸ್ಥೆ ಆಡಳಿತ ಮಂಡಳಿ ಸಹಕಾರ ಕೋರಿ ಮನವಿ ಮಾಡಿದ್ದರು. ಸಿಎಂ ನೆರವು ನೀಡುವ ಬಗ್ಗೆ ಭರವಸೆ ನೀಡಿದ್ದಲ್ಲದೆ ರೋಡ್ ಟ್ಯಾಕ್ಸ್ ಕಡಿತಕ್ಕೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಅಧಿಕಾರಿಗಳು ಸಿಎಂ ಸೂಚನೆಯಂತೆ ರಸ್ತೆ ತೆರಿಗೆ ಕಡಿತ ಅಸಾಧ್ಯ ಎಂದು ಹೇಳಿ ನಿರ್ಲಕ್ಷ್ಯ ಮಾಡಿದ್ದರೆಂದು ಸಂಸ್ಥೆಯ ನಿರ್ದೇಶಕ ವಿಜಯ್‍ ಕುಮಾರ್ ವಾರ್ತಾಭಾರತಿಗೆ ತಿಳಿಸಿದ್ದಾರೆ.

ಮಲೆನಾಡಿನ ಸಾರಿಗೆ ಕ್ಷೇತ್ರವನ್ನು ಮೂರು ದಶಕಗಳ ಕಾಲ ಶಿಸ್ತು ಬದ್ಧವಾಗಿ ಆಳಿದ ಸಹಕಾರಿ ಸಾರಿಗೆ ಸಂಸ್ಥೆ ಫೆ.15ರ ಸಂಜೆವರೆಗೆ ಕಾರ್ಯನಿರ್ವಹಿಸಿದ್ದು, ಫೆ.16ರಂದು ಬೆಳಗ್ಗೆಯಿಂದಲೇ ಸಂಸ್ಥೆಯ 70 ಬಸ್‍ಗಳು ಹಾಗೂ 300ಕ್ಕೂ ಹೆಚ್ಚು ಕಾರ್ಮಿಕರು ಕೆಲಸವನ್ನು ನಿಲ್ಲಿಸಿದ್ದಾರೆ. ಸಂಸ್ಥೆ ಸಾರಿಗೆ ಬಸ್‍ಗಳ ಓಡಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಧರ್ಮಪ್ಪ ಹಾಗೂ ನಿರ್ದೇಶಕ ವಿಜಯ್‍ ಕುಮಾರ್ ಹೇಳಿಕೆ ನೀಡಿದ್ದಾರಾದರೂ ಎಷ್ಟು ದಿನಗಳ ಕಾಲ ಬಸ್‍ಗಳ ಓಡಾಟ ಸ್ಥಗಿತವಾಗಲಿದೆ ಎಂಬ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಸಂಸ್ಥೆಯ ಮುಂದಿನ ನಡೆ ಬಗ್ಗೆ ಫೆ.16ರಂದೇ ಕೊಪ್ಪ ಪಟ್ಟಣದ ಕಚೇರಿಯಲ್ಲಿ ಕಾರ್ಮಿಕರ ಸಭೆ ನಡೆಯಲಿದ್ದು, ಸಭೆಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಂಸ್ಥೆಯ ಮೂಲಗಳು ವಾರ್ತಾಭಾರತಿಗೆ ತಿಳಿಸಿವೆ

ಸಹಕಾರ ಸಾರಿಗೆಗೆ ಕಾರ್ಮಿಕರೇ ಮಾಲಕರಾದ ಬಗೆ
ಮೊದಲೇ ಹೇಳಿದಂತೆ ಸಹಕಾರ ಸಾರಿಗೆ ಸಂಸ್ಥೆಯು ಸಹಕಾರಿ ತತ್ವದಡಿಯಲ್ಲಿ ರೂಪು ಪಡೆದ ಸಾರಿಗೆ ಸಂಸ್ಥೆಯಾಗಿದೆ. ಶಂಕರ್ ಟ್ರಾನ್ಸ್‍ಪೋರ್ಟ್ ಕಂಪೆನಿ ಕಾರ್ಮಿಕರ ವೇತನ ಹೆಚ್ಚಳಕ್ಕೆ ಒಪ್ಪದೇ ಸಂಸ್ಥೆಯನ್ನೇ ಮುಚ್ಚಿದ್ದರಿಂದ 123 ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಪಾಲಾಗಿದ್ದರು. ಆದರೆ ಕಂಪೆನಿಯು ಕೆಲಸ ಕಳೆದುಕೊಂಡ 123 ಕಾರ್ಮಿಕರಿಗೆ ಪರಿಹಾರವಾಗಿ ಒಟ್ಟು 12 ಲಕ್ಷ ಹಣವನ್ನು ಸಂದಾಯ ಮಾಡಿತ್ತು. ಈ ಹಣದೊಂದಿಗೆ ಕೆಲಸವಿಲ್ಲದೇ ಬೀದಿಪಾಲಾದ ಕಾರ್ಮಿಕರ ನೆರವಿಗೆ ಬಂದ ಜಿಲ್ಲೆಯ ಕಾರ್ಮಿಕ ಸಂಘಟನೆಗಳ ನಾಯಕರ ಮಾರ್ಗದರ್ಶನದಲ್ಲಿ ಕಾರ್ಮಿಕರು ತಮ್ಮ ಬಳಿ ಇದ್ದ 12 ಲಕ್ಷ ಹಣದಲ್ಲಿಯೇ ಶಂಕರ್ ಕಂಪೆನಿಯ 6 ಬಸ್‍ಗಳನ್ನು ಖರೀದಿಸಿ ಸಹಕಾರ ಸಾರಿಗೆ ಸಂಸ್ಥೆಯನ್ನು ಆರಂಭಿಸಿದ್ದರು. ಅಂದು 6 ಬಸ್‍ಗಳ ಮಾಲಕರಾಗಿದ್ದ ಸಂಸ್ಥೆಯ ಕಾರ್ಮಿಕರು ಸಂಸ್ಥೆಯ ಬಾಗಿಲು ಮುಚ್ಚುವ ಹಂತದಲ್ಲಿ ಒಟ್ಟು 70 ಬಸ್‍ಗಳ ಮಾಲಕರಾಗಿದ್ದು, ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಬಸ್ ಚಾಲಕರು, ನಿರ್ವಾಹಕರೂ ಸೇರಿದಂತೆ ಇತರ ಕಾರ್ಮಿಕರೇ ಈ ಸಂಸ್ಥೆಯ ಮಾಲಕರು, ಅಧ್ಯಕ್ಷರು, ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಇಡೀ ಆಡಳಿತ ವ್ಯವಸ್ಥೆ ಇಂದಿಗೂ ಸಂಪೂರ್ಣವಾಗಿ ಸಹಕಾರಿ ತತ್ವದಡಿಯಲ್ಲೇ ನಡೆಯುತ್ತಿರುವುದು ವಿಶೇಷವಾಗಿದೆ.

ದೇಶ ವಿದೇಶಗಳಲ್ಲೂ ಹರಡಿದೆ ಸಹಕಾರಿ ಸಾರಿಗೆ ಖ್ಯಾತಿ
ಮಲೆನಾಡಿನ ಕೊಪ್ಪದಂತಹ ಸಣ್ಣ ಪಟ್ಟಣದಲ್ಲಿ ಹುಟ್ಟಿಕೊಂಡ ಸಹಕಾರ ಸಾರಿಗೆ ಸಂಸ್ಥೆ ಕಳೆದ ಮೂರು ದಶಕಗಳಲ್ಲಿ ಸಾರಿಗೆ ಕ್ಷೇತ್ರದಲ್ಲಿ ಮಾಡಿದ ಸಾಧನೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಸಹಕಾರಿ ತತ್ವದಡಿಯಲ್ಲಿ ಕಾರ್ಯನಿರ್ವಹಿಸುವ, ಕಾರ್ಮಿಕರೇ ಮಾಲಕರಾಗಿರುವ ಏಷ್ಯಾ ಖಂಡದ ಮೊದಲ ಸಾರಿಗೆ ಸಂಸ್ಥೆ ಎಂದೂ ಸಹಕಾರ ಸಾರಿಗೆ ಜನಪ್ರಿಯತೆ ಗಳಿಸಿದೆ. ಹೆಗ್ಗಳಿಕೆ ಬಗ್ಗೆ ಕುತೂಹಲಗೊಂಡ ಜಪಾನ್ ದೇಶದ ಕ್ಯೂಟೋ ನಗರದ ರಿಟ್ಸುಮೆಕಿನ್ ವಿವಿಯ 21 ಸಂಶೋಧಕರ ತಂಡ ಸಹಕಾರಿ ಸಂಸ್ಥೆಯ ಕಚೇರಿಗೆ ಭೇಟಿ ನೀಡಿ ಅಧ್ಯಯನ ನಡೆಸಿತ್ತು. ಸಂಸ್ಥೆಯ ಸಹಕಾರಿ ತತ್ವದ ಕಾರ್ಯನಿರ್ವಹಣೆಯನ್ನು ಜಪಾನ್ ದೇಶ ತನ್ನ ಸಾರಿಗೆ ವ್ಯವಸ್ಥೆಯಲ್ಲೂ ಅಳವಡಿಸಿಕೊಂಡಿದೆ.

ಸಂಸ್ಥೆಯ ಕಾರ್ಯನಿರ್ವಹಣೆ ಅಧ್ಯಯನ ಮಾಡಿ ಪಿಎಚ್‍ಡಿ
ಮಲೆನಾಡಿನ ಈ ಸಂಸ್ಥೆಯ ಸಹಕಾರಿ ಸಾರಿಗೆ ವ್ಯವಸ್ಥೆಯ ಬಗ್ಗೆ ಹತ್ತಾರು ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಅಧ್ಯಯನ ನಡೆಸಿ ಪಿಎಚ್ಡಿ ಪದವಿಯನ್ನೂ ಪಡೆದಿದ್ದಾರೆ. ಮಂಗಳೂರು ವಿವಿಯ ಪ್ರಾಧ್ಯಾಪಕರೊಬ್ಬರು ಈ ಸಂಸ್ಥೆಯ ಮೇಲೆ ಅಧ್ಯಯನ ನಡೆಸಿ ಪಿಎಚ್ಡಿ ಪದವಿ ಪಡೆದಿದ್ದಲ್ಲದೇ ವಿವಿಯು ಅದನ್ನು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಪದವಿ ಪಠ್ಯಕ್ಕೆ ಸೇರಿಸಿತ್ತು. ಇದಲ್ಲದೇ ಸಹಕಾರ ಸಾರಿಗೆ ಸಂಸ್ಥೆ ಮೇಲೆ ಕೊಪ್ಪ ಸರಕಾರಿ ಕಾಲೇಜಿನ ಅಧ್ಯಾಪಕರೊಬ್ಬರು ಮಂಡಿಸಿದ ಪ್ರಬಂಧಕ್ಕೆ ಮಹಾರಾಷ್ಟ್ರದ ಕೊಲ್ಹಾಪುರ ಶಿವಾಜಿ ವಿವಿ ಪಿಎಚ್ಡಿ ಪದವಿ ನೀಡಿದೆ. ಇಂತಹ ಹತ್ತು ಹಲವು ಸಾಧನೆಗಳ ಗರಿ ಹೊತ್ತಿರುವ ಸಹಕಾರ ಸಾರಿಗೆ ಪಡೆದಿರುವ ಪ್ರಶಶ್ತಿಗಳಿಗೆ ಲೆಕ್ಕವೇ ಇಲ್ಲ.

ಕಾರ್ಮಿಕ ನಾಯಕ ಬಿ.ಕೆ.ಸುಂದರೇಶ್ ಕನಸಿನ ಕೂಸು: ಎಂ.ಕೆ.ಲಕ್ಷ್ಮಣ್ ಆಚಾರ್
ಸಹಕಾರ ಸಾರಿಗೆ ಸಂಸ್ಥೆ ಸಿಪಿಐ ನಾಯಕ, ಕಾರ್ಮಿಕ ಮುಖಂಡ ಬಿ.ಕೆ.ಸುಂದರೇಶ್ ಅವರ ಕನಸಿನ ಕೂಸು. ಮಲೆನಾಡಿನ ಕಾರ್ಮಿಕ ಚಳವಳಿಯಲ್ಲಿ ಅದಾಗಲೇ ಮುಂಚೂಣಿಯಲ್ಲಿದ್ದ ಬಿ.ಕೆ.ಸುಂದರೇಶ್ ಅವರು ಶಂಕರ್ ಕಂಪೆನಿಯಿಂದ ಹೊರ ಬಿದ್ದ ಕಾರ್ಮಿಕರಿಗೆ ಸಹಕಾರ ಸಾರಿಗೆ ಸಂಸ್ಥೆ ಮೂಲಕ ಬದುಕು ನೀಡಿದ್ದಾರೆ. ಶಂಕರ್ ಕಂಪೆನಿ ಲಾಭದಲ್ಲಿದ್ದಾಗ ಕಾರ್ಮಿಕರಿಗೆ ಯಾವುದೇ ಹಕ್ಕುಗಳನ್ನು ನೀಡಿರಲಿಲ್ಲ. ಆಗ ಕಾರ್ಮಿಕರು ಕಂಪೆನಿ ವಿರುದ್ಧ ತರುಗಿ ಬಿದ್ದರು. ಆಗ ಕಂಪೆನಿ ಮಾಲಕರು ತಮ್ಮ ಸಾರಿಗೆ ಸಂಸ್ಥೆಯನ್ನೇ ಮುಚ್ಚಲು ನಿರ್ಧರಿಸಿದ್ದರು. ಈ ವೇಳೆ ಬಿ.ಕೆ.ಸುಂದರೇಶ್ ಕಾರ್ಮಿಕರೊಂದಿಗೆ ಹೋರಾಟಕ್ಕಿಳಿದಿದ್ದರು. ಕಂಪೆನಿ ಮುಚ್ಚಿದಾಗ ಬೀದಿಪಾಲಾದಾಗ ಸುಂದರೇಶ್ ಅವರು ಕಾರ್ಮಿಕರೇ ಸಹಕಾರ ತತ್ವದಡಿಯಲ್ಲಿ ಸಾರಿಗೆ ಸಂಸ್ಥೆಯನ್ನು ಆರಂಭಿಸುವ ಬಗ್ಗೆ ಯೋಜನೆ ರೂಪಿಸಿ ಅದಕ್ಕೆ ಅಂದಿನ ಜಿಲ್ಲಾಧಿಕಾರಿ ಸುಬ್ರಹ್ಮಣ್ಯ ಹಾಗೂ ನಂತರ ಡಿಸಿ ಆಗಿದ್ದ ಅನಿತಾ ಕೌಲ್ ಎಂಬವರ ಸಹಕಾರದಿಂದ ಕಾರ್ಮಿಕರ ಹಣದಿಂದಲೇ 6 ಬಸ್‍ಗಳನ್ನು ಖರೀದಿಸಿ ಸಹಕಾರ ಸಾರಿಗೆ ಸಂಸ್ಥೆಯನ್ನು ಹುಟ್ಟು ಹಾಕಿದರು.

ಬಿ.ಕೆ.ಸುಂದರೇಶ್ ಅಂದು ಬೀದಿಪಾಲಾಗಿದ್ದ ಕಾರ್ಮಿಕರ ಹೋರಾಟಕ್ಕೆ ಧ್ವನಿಯಾಗಿ ಬಾರದಿದ್ದಲ್ಲಿ ಸಹಕಾರ ಸಾರಿಗೆ ಸಂಸ್ಥೆಯ ಅಸ್ತಿತ್ವವೇ ಇರುತ್ತಿರಲಿಲ್ಲ. ಮೂರು ದಶಕಗಳ ಕಾಲ ಸಹಕಾರಿ ತತ್ವದಡಿಯಲ್ಲಿ ಕಾರ್ಮಿಕರೇ ಮಾಲಕರಾಗಿ ಅತ್ಯಂತ ಯಶಸ್ವಿಯಾಗಿ ಮುನ್ನಡೆದಿದ್ದ ಸಂಸ್ಥೆ ಕ್ರಮೇಣ ಸಂಸ್ಥೆಯೊಳಗಿನ ಕಾರ್ಮಿಕರ ಭಿನ್ನಾಭಿಪ್ರಾಯ, ರಾಜಕಾರಣ ಮತ್ತು ಆರ್ಥಿಕ ಹೊರೆಗಳಿಂದಾಗಿಗೆ ದಿವಾಳಿ ಹಂತಕ್ಕೆ ತಲುಪಿದೆ. ಸುಂದರೇಶ್ ಕೊಡುಗೆ ನೆನೆದು ಸಂಸ್ಥೆಯ ಕಚೇರಿ ಆವರಣದಲ್ಲಿ ಅವರ ಹೆಸರಿನಲ್ಲಿ ಸಭಾಂಗಣವನ್ನೂ ನಿರ್ಮಿಸಲಾಗಿದೆ. ಪ್ರತೀ ವರ್ಷ ಸುಂದರೇಶ್ ಸ್ಮರಾಣಾರ್ಥ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಅಂದು ಬಿ.ಕೆ.ಸುಂದರೇಶ್ ಜತೆ ಕಾರ್ಮಿಕರ ಹೋರಾಟಲ್ಲಿ ಭಾಗಿಯಾಗಿದ್ದ ಅವರ ಒಡನಾಡಿ ಕಳಸ ಪಟ್ಟಣದ ಎಂ.ಕೆ.ಲಕ್ಷ್ಮಣ್ ಆಚಾರ್ ತಿಳಿಸಿದ್ದಾರೆ.

ಸಂಸ್ಥೆಯ ಬಸ್‍ಗಳ ಓಡಾಟ ನಿಂತಿರುವುದು ಮಲೆನಾಡಿನ ಜನರ ಪಾಲಿಗೆ ಶಾಕ್ ನೀಡಿದಂತಾಗಿದೆ. ಸಹಕಾರ ಸಾರಿಗೆ ನಮ್ಮ ಪ್ರತಿನಿತ್ಯದ ಜೀವನ ಭಾಗವಾಗಿದೆ. ಸರಕಾರದ ಕೆಂಪು ಬಸ್‍ಗಳನ್ನು ನೋಡುವ ಮೊದಲೇ ಸಹಕಾರ ಸಾರಿಗೆ ಬಸ್‍ಗಳು ನಮ್ಮ ಪ್ರಯಾಣದ ಭಾರವನ್ನು ನೀಗಿಸಿವೆ. ಕೊಪ್ಪದಿಂದ ಹೊರನಾಡಿಗೆ ಕಳೆದ 25 ವರ್ಷಗಳಿಂದ ಬೆಳಗಿನ ಹೊತ್ತು ಸಹಕಾರಿ ಸಾರಿಗೆ ಬಸ್ ಜಯಪುರ, ಕೊಗ್ರೆ, ಬಸರೀಕಟ್ಟೆ, ಬಾಳೆಹೊಳೆ, ಕಳಸ ಮಾರ್ಗವಾಗಿ ಹೊರನಾಡಿಗೆ ಹೋಗುತ್ತದೆ. ಇದೇ ಬಸ್‍ನಲ್ಲಿ ನಾನು ಕಳಸಲ್ಲಿರುವ ನನ್ನ ಅಂಗಡಿಗೆ ಹೋಗುತ್ತಿದ್ದೇನೆ. ರವಿವಾರ ಈ ಬಸ್ ಬಂದಿಲ್ಲ. ನಾನು ಸ್ನೇಹಿತನ ಬೈಕ್‍ನಲ್ಲಿ ಕಳಸಕ್ಕೆ ಬಂದೆ. ಬಂದ ನಂತರವೇ ಸಹಕಾರಿ ಸಾರಿಗೆ ಇನ್ನು ಮುಂದೆ ಬರಲ್ಲ ಎಂದು ತಿಳಿಯಿತು. ಮನಸ್ಸಿಗೆ ತುಂಬಾ ಬೇಜಾರಾಯಿತು.
- ರಾಘವೇಂದ್ರ ಭಟ್, ಬಾಳೆಹೊಳೆ ಗ್ರಾಮದ ನಿವಾಸಿ

ಸಹಕಾರಿ ಸಾರಿಗೆ ಕಳೆದ ಎರಡು ವರ್ಷಗಳಿಂದ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಟಿಕೆಟ್‍ನಿಂದ ಬಂದ ಹಣ ಡೀಸೆಲ್‍ಗೂ ಸಾಲುತ್ತಿರಲಿಲ್ಲ. ಹೇಗೋ ಎರಡು ವರ್ಷ ಬಸ್ ಸೇವೆ ನೀಡಿದ್ದೇವೆ. ಮುಂದೆ ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಸರಕಾರದಿಂದ ಆರ್ಥಿಕ ನೆರವು ಬರಬೇಕಿದೆ. ಸರಕಾರ 6 ಕೋಟಿಯಷ್ಟು ಹಣ ಬಿಡುಗಡೆ ಮಾಡಿದಲ್ಲಿ ಸೋಮವಾರದಿಂದಲೇ ಬಸ್ ಸೇವೆ ಆರಂಭಿಸುತ್ತೇವೆ. 
-ಧರ್ಮಪ್ಪ, ಅಧ್ಯಕ್ಷ, ಸಹಕಾರ ಸಾರಿಗೆ, ಕೊಪ್ಪ

Full View

Writer - ಕೆ.ಎಲ್ ಶಿವು

contributor

Editor - ಕೆ.ಎಲ್ ಶಿವು

contributor

Similar News