ಎಲ್ಲ ರಾಜಕೀಯ ಪಕ್ಷಗಳಲ್ಲೂ ವೈರಸ್ ಇದೆ: ಬಿ.ಎಲ್.ಸಂತೋಷ್

Update: 2020-02-16 18:37 GMT

ಶಿವಮೊಗ್ಗ, ಫೆ.16: ನೆಹರೂ ನಂತರದ ರಾಜಕಾರಣದಲ್ಲಿ ದುರಾಡಳಿತ, ಭ್ರಷ್ಟಾಚಾರ ಇನ್ನಿತರ ವೈರಸ್‌ಗಳನ್ನು ಇಂಜೆಕ್ಟ್ ಮಾಡಿದೆ. ಅವುಗಳು ವ್ಯಕ್ತಿ ರೂಪದ ವೈರಸ್‌ಗಳಲ್ಲ. ಅದು ಎಲ್ಲ ರಾಜಕೀಯ ಪಕ್ಷಗಳಲ್ಲೂ ಸೇರಿಕೊಂಡಿವೆ. ವೈರಸ್‌ಗಳನ್ನು ನಿವಾರಿಸದೇ ಭಿನ್ನ ರಾಜಕಾರಣ ನೀಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.

ಬಿಜೆಪಿ ಜಿಲ್ಲಾ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನ ನಮ್ಮನ್ನು ಯಾವ ಕಾರಣಕ್ಕೆ ಅಧಿಕಾರ ನೀಡಿದ್ದಾರೆ ಎಂಬುವುದನ್ನು ಅರಿತುಕೊಳ್ಳಬೇಕು, ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನಂತರ, ಜನ ಜೀವನದಲ್ಲಿ ಬದಲಾವಣೆ ತರೋಣ, ಭಿನ್ನ ರಾಜಕಾರಣ ಸೃಷ್ಟಿಸೋಣ. ಈ ಮಾನಸಿಕ ದೃಢತೆಯಿಂದ ಮುಂದೆ ಸಾಗಿದಲ್ಲಿ ಖಂಡಿತ ಜನ ಮಾನಸದಲ್ಲಿ ಉಳಿಯಲು ಸಾಧ್ಯ ಎಂದರು.

ಭಾರತ ಪಕ್ವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದೆ. ಒಂದು ವೇಳೆ, ಜನರ ಆಯ್ಕೆ ಉದ್ದೇಶ ಮರೆತಲ್ಲಿ ಪರಿಸ್ಥಿತಿ ಹೀಗೆಯೇ ಇರುತ್ತದೆ ಎಂದೇನಿಲ್ಲ. ಅದಕ್ಕಾಗಿ, ಜನರ ಸಮಸ್ಯೆಗಳನ್ನು ಪರಿಹರಿಸಿ ಭಿನ್ನ ರಾಜಕಾರಣ ನೀಡೋಣ. ಎಲ್ಲರೂ ಒಗ್ಗಟ್ಟಾಗಬೇಕು ಎಂದರು.

ನರೇಂದ್ರ ಮೋದಿ ಗುಜರಾಜ್ ಸಿಎಂ ಆಗಿದ್ದಾಗ ಅವರಿಗೆ ವಿಸಾ ನೀಡಲು ಅಮೆರಿಕಾ ಸರಕಾರ ನಿರಾಕರಿಸಿತ್ತು. ಭಾರತದ ಬುದ್ಧಿಜೀವಿಗಳು ಎಂದು ಕರೆಸಿಕೊಂಡಿರುವ ಹಾಗೂ ದೇಶದ ಮರ್ಯಾದೆಯನ್ನು ಎಲ್ಲಿ ಬೇಕಾದರೂ ಹರಾಜಿಗೆ ಇಡುವ ಕೆಲವರ ನೇತೃತ್ವದಲ್ಲಿ ವಿಸಾ ಕೊಡಲು ನಿರಾಕರಿಸಿಲಾಗಿತ್ತು. ಈಗ ಅದೇ ದೇಶದ ಅಧ್ಯಕ್ಷರು ಗುಜರಾತ್ ರಾಜಧಾನಿಗೆ ಬರಲಿದ್ದಾರೆ. ಇದು ಸಾಂಕೇತಿಕ ಗಳಿಗೆಯಾಗಿದೆ‌ ಎಂದರು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ವಿಧಾನ್ ಪರಿಷತ್ ಮಾಜಿ ಸದಸ್ಯರಾದ ಭಾನುಪ್ರಕಾಶ್, ಅರ್.ಕೆ ಸಿದ್ದರಾಮಣ್ಣ, ಪ್ರಮುಖರಾದ ಗಿರೀಶ್ ಪಟೇಲ್, ಮಹಾನಗರ ಪಾಲಿಕೆ ಮೇಯರ್ ಸುವರ್ಣಾ ಶಂಕರ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News