ಹನೂರು: ವರ್ಷಗಳು ಕಳೆದರೂ ಉದ್ಘಾಟನೆಯಾಗದ ಶಾಲಾ ಕಟ್ಟಡ

Update: 2020-02-16 18:49 GMT

ಹನೂರು, ಫೆ.16: ಶಿಕ್ಷಣ ಸಚಿವ ಸುರೇಶ್‍ ಕುಮಾರ್ ರವರು ಉಸ್ತುವಾರಿ ವಹಿಸಿಕೂಂಡಿರುವ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬೈಲೂರಿನಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಶಾಲಾ ಕಟ್ಟಡ ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದರೂ ಇಲ್ಲಿಯವರೆಗೂ ಉದ್ಘಾಟನೆ ಭಾಗ್ಯ ಮಾತ್ರ ದೊರೆಕಿಲ್ಲ. ಇದು ಹೊಸ ಕಟ್ಟಡದಲ್ಲಿ ಕಲಿಯಬೇಕೆನ್ನುವ ವಿದ್ಯಾರ್ಥಿಗಳ ಆಸೆಗೆ ತಣ್ಣೀರೆರಚಿದಂತಾಗಿದೆ .

ಹನೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ನಿರ್ಮಾಣಗೊಂಡ (ಆರ್‍ಎಂಎಸ್‍ಎ) ಸರಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ ನೂತನ ಕಟ್ಟಡದ ಕಾಮಗಾರಿ ಮುಕ್ತಾಯಗೊಂಡು 2 ವರ್ಷಗಳೇ ಆಗುತ್ತಿದೆ. ಆದರೂ ಉದ್ಘಾಟನೆಯ ಭಾಗ್ಯ ಮಾತ್ರ ದೂರೆತಿಲ್ಲ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಯೋಜನಯಡಿಯಲ್ಲಿ ನಿರ್ಮಾಣವಾಗಿರುವ ಈ ಶಾಲೆಯ ಕಟ್ಟಡದ ಕಾಮಗಾರಿ ಆರಂಭದಲ್ಲಿ ವೇಗದಿಂದ ನಡೆಯುತ್ತಿದ್ದರೂ ಬಳಿಕ ಅನೇಕ ಕಾರಣಗಳಿಂದ ವಿಳಂಬವಾಗಿತ್ತು. ಈಗ ಕಟ್ಟಡ ಕಾಮಗಾರಿಯೂ ಮುಕ್ತಾಯಗೊಂಡಿದೆ. ಆದರೆ ವಿದ್ಯಾರ್ಥಿಗಳ 'ಹೊಸ ಕಟ್ಟಡ' ಭಾಗ್ಯ ಮಾತ್ರ ಮರೀಚಿಕೆಯಾಗಿದೆ.

ಕಾಮಗಾರಿ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳು ಹಲವು ಕಾರಣಗಳನ್ನು ನೀಡುತ್ತಾರೆ. ಕಟ್ಟಡದ ಉದ್ಘಾಟನೆಯ ವಿಳಂಬಕ್ಕೆ ಗುತ್ತಿಗೆದಾರರ ಲೋಪವೋ, ಅಧಿಕಾರಿಗಳ ನಿರ್ಲಕ್ಷತನವೋ ಅಥವಾ ಜನಪ್ರತಿನಿಧಿಗಳ ಬೇಜವವ್ದಾರಿತನವೋ ಯಾವ ಕಾರಣ ಎಂಬುದೇ ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಶಿಕ್ಷಣ ಸಚಿವರು ಉಸ್ತುವಾರಿ ನೇತೃತ್ವ ವಹಿಸಿಕೂಂಡಿರುವ ಜಿಲ್ಲೆಯಲ್ಲಿಯೇ ಈ ರೀತಿಯ ಅವ್ಯವಸ್ಥೆಯ ಪರಿಸ್ಥಿತಿಯಾದರೆ ರಾಜ್ಯದ ವಿವಿಧ ಶಾಲಾ ಕಟ್ಟಡದ ಗತಿ ಏನು ಎಂಬುವುದು ಸಾರ್ವಜನಿಕರ ಯಕ್ಷ ಪ್ರಶ್ನೆ.

ಗ್ರಾಮಸ್ಥರ ಮನವಿ: ಬೈಲೂರು ಪ್ರಾಥಮಿಕ ಶಾಲೆಯಲ್ಲಿರುವ 5 ಕೊಠಡಿಗಳ ಪೈಕಿ ಮೂರು ಕೊಠಡಿಗಳಲ್ಲಿ ಇಲ್ಲಿನ ಶಿಕ್ಷಕರು 1 ರಿಂದ 8 ನೇ ತರಗತಿ ತನಕ 113 ಮಕ್ಕಳಿಗೆ ಪಾಠ ಭೋದಿಸುತ್ತಾರೆ. ಅದೇ ರೀತಿಯಲ್ಲಿ ಪ್ರೌಡಶಾಲೆಯ ಶಿಕ್ಷಕರು ಇನ್ನುಳಿದ 2 ಕೊಠಡಿಯಲ್ಲಿ 9, 10ನೇ ತರಗತಿಯ ಒಟ್ಟು 66ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಾಠ ಬೋಧಿಸುತ್ತಿದ್ದಾರೆ. ಇನ್ನಾದರೂ ಶಿಕ್ಷಣ ಸಚಿವರು, ಶಾಸಕರು, ಅಧಿಕಾರಿಗಳು ಇತ್ತ ಗಮನಿಸಿ ಶಾಲಾ ಕಟ್ಟಡವನ್ನು ಉದ್ಘಾಟನೆ ಮಾಡಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂಬುದು ಗ್ರಾಮಸ್ಥರ ಮನವಿಯಾಗಿದೆ.

ಬೈಲೂರು ಶಾಲೆ ಕಟ್ಟಡದ ಉದ್ಘಾಟನೆಯ ವಿಳಂಬದ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರಾವಾಣಿ ಮುಖಾಂತರ ಗಮನ ಹರಿಸಲು ಪ್ರಯತ್ನಸಿದ್ದಾದರೂ ನಮ್ಮ ಕರೆಗಳನ್ನು ಸ್ವೀಕಾರ ಮಾಡದೇ ನಿರ್ಲಕ್ಷ್ಯ ವಹಿಸುತ್ತಾರೆ

-ಮಹದೇವಪ್ರಭು, ಬೈಲೂರು ನಿವಾಸಿ

ಇತ್ತೀಚಿಗಷ್ಟೇ ನಾನು ಚಾಮರಾಜನಗರ ಜಿಲ್ಲಾ ಶಿಕ್ಷಣ ಇಲಾಖೆಗೆ ಡಿಡಿಪಿಐ ಆಗಿ ಸೇವೆ ಸಲ್ಲಿಸಲು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದೇನೆ. ಬೈಲೂರು ಪ್ರೌಢಶಾಲಾ ಕಟ್ಟಡ ಉದ್ಘಾಟನೆಯಲ್ಲಿ ಏಕೆ ವಿಳಂಬ ಆಗಿದೆ ಎಂಬುದನ್ನು ತಿಳಿದು ಶೀಘ್ರದಲ್ಲಿಯೇ  ಕ್ರಮಕೈಗೊಳ್ಳಲಾಗುವುದು

-ಜವರೇಗೌಡ, ಡಿಡಿಪಿಐ ಚಾಮರಾಜನಗರ ಜಿಲ್ಲೆ

Writer - ವರದಿ: ಅಭಿಲಾಷ್‍ ಗೌಡ

contributor

Editor - ವರದಿ: ಅಭಿಲಾಷ್‍ ಗೌಡ

contributor

Similar News