ಮಹಿಳೆಯರಿಗೆ ಸೇನೆಯಲ್ಲಿ ಸಮಾನ ಅವಕಾಶ: ಕೇಂದ್ರಕ್ಕೆ ಸುಪ್ರೀಂ ಆದೇಶ

Update: 2020-02-17 15:55 GMT

ಹೊಸದಿಲ್ಲಿ,ಫೆ.17: ಸೇನೆಯಲ್ಲಿನ ಮಹಿಳಾ ಅಧಿಕಾರಿಗಳು ಪುರುಷ ಅಧಿಕಾರಿಗಳಿಗೆ ಸಮನಾಗಿ ಕಮಾಂಡ್ ಹುದ್ದೆಗಳನ್ನು ಪಡೆಯಬಹುದು ಎಂದು ಸೋಮವಾರ ಸ್ಪಷ್ಟ ಪಡಿಸಿರುವ ಸರ್ವೋಚ್ಚ ನ್ಯಾಯಾಲಯವು,ಇದರ ವಿರುದ್ಧ ಸರಕಾರದ ವಾದಗಳು ತಾರತಮ್ಯ ಮತ್ತು ಗೊಂದಲದಿಂದ ಕೂಡಿವೆ ಹಾಗೂ ರೂಢಮಾದರಿಯನ್ನು ಅವಲಂಬಿಸಿವೆ ಎಂದು ಹೇಳಿದೆ. ಮಹಿಳಾ ಅಧಿಕಾರಿಗಳ ಸೇವಾವಧಿಯನ್ನು ಪರಿಗಣಿಸದೆ ಅವರಿಗೆ ಪರ್ಮನೆಂಟ್ ಕಮಿಷನ್ ಅಂದರೆ ನಿವೃತ್ತಿಯಾಗುವವರೆಗೂ ಕರ್ತವ್ಯ ಸಲ್ಲಿಸಲು ಅವಕಾಶವನ್ನು ಒದಗಿಸಬೇಕು ಎಂದೂ ಅದು ಆದೇಶಿಸಿದೆ. ನ್ಯಾಯಾಲಯದ ಈ ತೀರ್ಪು ಭಾರತೀಯ ಸೇನೆಯಲ್ಲಿ ಮಹತ್ವದ ಬದಲಾವಣೆಗಳಿಗೆ ನಾಂದಿ ಹಾಡಲಿದೆ.

ಸೇನೆಯು ನ್ಯಾಯಾಲಯದ ತೀರ್ಪನ್ನು ಮೂರು ತಿಂಗಳುಗಳಲ್ಲಿ ಜಾರಿಗೊಳಿಸ ಬೇಕಿದೆ.

   ನ್ಯಾಯಾಲಯದ ತೀರ್ಪನ್ನು ಸರಳವಾಗಿ ವಿವರಿಸುವುದಾದರೆ ಮಹಿಳೆ ತನ್ನ ಪುರುಷ ಸಹೋದ್ಯೋಗಿಗಳಂತೆ ಪ್ರತಿಭೆಯ ಆಧಾರದಲ್ಲಿ ಕರ್ನಲ್ ಅಥವಾ ಮೇಲಿನ ಹುದ್ದೆಗಳಿಗೆ ಭಡ್ತಿ ಪಡೆಯಬಹುದು. ಕರ್ನಲ್ ಹುದ್ದೆಯಲ್ಲಿರುವ ಅಧಿಕಾರಿ ಸಾಕಷ್ಟು ನಿಯಂತ್ರಣಾಧಿಕಾರವನ್ನು ಹೊಂದಿದ್ದು,ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಅಧಿಕಾರವೂ ಇರುತ್ತದೆ. ಸಾಮಾನ್ಯವಾಗಿ 850 ಯೋಧರಿರುವ ಬೆಟಾಲಿಯನ್ ಕರ್ನಲ್ ಅಧೀನದಲ್ಲಿರುತ್ತದೆ. ಸದ್ಯಕ್ಕೆ ಪದಾತಿ ಪಡೆ ಮತ್ತು ಫಿರಂಗಿ ದಳ ಅಥವಾ ಶಸ್ತ್ರಸಜ್ಜಿತ ಯುದ್ಧಪಡೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು ಸೇರಿಸಿಕೊಳ್ಳುತ್ತಿಲ್ಲವಾದರೂ ಕರ್ನಲ್ ಹುದ್ದೆಯಲ್ಲಿ ಯಶಸ್ವಿಯಾದ ಮಹಿಳಾ ಅಧಿಕಾರಿ ತಾಂತ್ರಿಕವಾಗಿ ಮೇಲಿನ ಹುದ್ದೆಗಳಿಗೆ ಭಡ್ತಿ ಪಡೆಯಬಹುದಾಗಿದೆ.

ಸೇನೆಯಲ್ಲಿ ಶಾರ್ಟ್ ಸರ್ವಿಸ್ ಕಮಿಷನ್(ಎಸ್‌ಎಸ್‌ಸಿ) ಅಥವಾ ಸೀಮಿತ ಸೇವಾ ವರ್ಗದಲ್ಲಿ 14 ವರ್ಷಗಳಿಗೂ ಅಧಿಕ ಸೇವೆ ಸಲ್ಲಿಸಿರುವ ಮಹಿಳಾ ಅಧಿಕಾರಿಗಳು ಪರ್ಮನೆಂಟ್ ಕಮಿಷನ್‌ನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದೂ ಸರ್ವೋಚ್ಚ ನ್ಯಾಯಾಲಯವು ತೀರ್ಪಿನಲ್ಲಿ ಹೇಳಿದೆ. 14 ವರ್ಷಗಳಿಗೂ ಕಡಿಮೆ ಅವಧಿಯ ಸೇವೆ ಸಲ್ಲಿಸಿರುವ ಮಹಿಳಾ ಅಧಿಕಾರಿಗಳನ್ನು ಮಾತ್ರ ಪರ್ಮನೆಂಟ್ ಕಮಿಷನ್‌ಗೆ ಪರಿಗಣಿಸುವ ಕೇಂದ್ರ ಸರಕಾರದ ನೀತಿಯು ‘ಮೂಲಭೂತ ತಪ್ಪು’ ಆಗಿದೆ ಎಂದು ಅದು ಟೀಕಿಸಿದೆ.

ಸೇನೆಯು ಪುರುಷರು ಮತ್ತು ಮಹಿಳೆಯರ ನಡುವೆ ತಾರತಮ್ಯ ಮಾಡುವಂತಿಲ್ಲ ಎನ್ನುವ ಮೂಲಕ ನ್ಯಾಯಾಲಯವು ವರ್ಷಗಳಿಂದಲೂ ರಾಜಾರೋಷವಾಗಿ ನಡೆದುಕೊಂಡು ಬಂದಿರುವ ಲಿಂಗ ತಾರತಮ್ಯಕ್ಕೆ ತೆರೆಯೆಳೆದಿದೆ.

ಲಿಂಗಾಧಾರಿತ ಟೀಕೆಯು ಮಹಿಳೆಯರು ಮತ್ತು ದೇಶದ ಘನತೆಗೆ ಅವಹೇಳನವಾಗಿದೆ. ಮಹಿಳಾ ಅಧಿಕಾರಿಗಳು ತಮ್ಮ ಪುರುಷ ಸಹೋದ್ಯೋಗಿಗಳಿಗೆ ಸರಿಸಮನಾಗಿ ನಿಲ್ಲುವ ಕಾಲವೀಗ ಬಂದಿದೆ ಎಂದಿರುವ ನ್ಯಾಯಾಲಯವು,ಮಹಿಳಾ ಅಧಿಕಾರಿಗೆ ಪರ್ಮನೆಂಟ್ ಕಮಿಷನ್ ಅನ್ನು ನಿರಾಕರಿಸಲು ಸರಕಾರವು ಮುಂದಿರಿಸಿದ್ದ ದೈಹಿಕ ಇತಿಮಿತಿಗಳು ಮತು ಸಾಮಾಜಿಕ ಕಟ್ಟುಪಾಡುಗಳ ವಾದವನ್ನು ತಿರಸ್ಕರಿಸಿದೆ. ಇವೆಲ್ಲ ಗೊಂದಲಕಾರಿಯಾಗಿವೆ ಎಂದು ಅದು ತೀರ್ಪಿನಲ್ಲಿ ಬಣ್ಣಿಸಿದೆ. ಮಹಿಳೆಯರ ದೈಹಿಕ ಲಕ್ಷಣಗಳಿಗೂ ಅವರ ಹಕ್ಕುಗಳಿಗೂ ಸಂಬಂಧವಿಲ್ಲ. ಸರಕಾರದ ಮನಃಸ್ಥಿತಿ ಬದಲಾಗಬೇಕಾದ ಅಗತ್ಯವಿದೆ ಎಂದು ತನ್ನ ಐತಿಹಾಸಿಕ ತೀರ್ಪಿನಲ್ಲಿ ಹೇಳಿರುವ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಅಜಯ ರಸ್ತೋಗಿ ಅವರ ಪೀಠವು,ಮಹಿಳೆಯರು ಪುರುಷರಿಗೆ ಸಮನಾಗಿ ದುಡಿಯುತ್ತಾರೆ. ಕಮಾಂಡ್ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು ಒಪ್ಪಿಕೊಳ್ಳಲು ಗ್ರಾಮೀಣ ಹಿನ್ನೆಲೆಯವರೇ ಹೆಚ್ಚಿರುವ ಯೋಧರು ಇನ್ನೂ ಮಾನಸಿಕವಾಗಿ ಸಿದ್ಧರಾಗಿಲ್ಲ ಎಂಬ ಕೇಂದ್ರದ ವಾದವು ಲಿಂಗ ತಾರತಮ್ಯ ಮತ್ತು ರೂಢಮಾದರಿಯನ್ನು ಆಧರಿಸಿದೆ. ಮಹಿಳಾ ಸೇನಾಧಿಕಾರಿಗಳು ದೇಶಕ್ಕೆ ಗೌರವ,ಹೆಮ್ಮೆಯನ್ನು ತಂದಿದ್ದಾರೆ ಎಂದು ತಿಳಿಸಿದೆ.

ಹಾಲಿ ಸೇನೆಯಲ್ಲಿ ಮಹಿಳಾ ಅಧಿಕಾರಿಗಳು ಎಸ್‌ಎಸ್‌ಸಿಯಲ್ಲಿ 10ರಿಂದ 14 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಬಹುದು. ಯುದ್ಧರಂಗಕ್ಕೆ ಹೊರತಾದ ಆರ್ಮಿ ಸರ್ವಿಸ್ ಕಾರ್ಪ್ಸ್,ಆರ್ಡ್ನನ್ಸ್,ಇಂಜಿನಿಯರಿಂಗ್,ಸಿಗ್ನಲ್ಸ್‌ನಂತಹ ವಿಭಾಗಗಳಲ್ಲಿ ಅವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಭಾರತೀಯ ವಾಯುಪಡೆ ಮತ್ತು ನೌಕಾಪಡೆ ಸಹ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ಒದಗಿಸುತ್ತಿದ್ದು,ಯುದ್ಧರಂಗಕ್ಕೆ ನೇರವಾಗಿ ಸಂಬಂಧಿಸಿದ ಕೆಲವು ಹುದ್ದೆಗಳಿಗೂ ಅವರನ್ನು ನೇಮಕಗೊಳಿಸಿವೆ. ಮಹಿಳಾ ಐಎಎಫ್ ಎಸ್‌ಎಸ್‌ಸಿ ಅಧಿಕಾರಿಗಳು ಹೆಲಿಕಾಪ್ಟರ್,ಸಾರಿಗೆ ವಿಮಾನ ಮತ್ತು ಈಗ ಯುದ್ಧವಿಮಾನಗಳನ್ನೂ ನಿರ್ವಹಿಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News