ಭಾರತ ಪ್ರವಾಸದ ಸಂದರ್ಭದಲ್ಲೇ ಭಾರತಕ್ಕೆ 1,855 ಕೋಟಿ ರೂ.ತೆರಿಗೆ ವಿಧಿಸಿದ ಟ್ರಂಪ್ : ಶಿವಸೇನೆ ಟೀಕೆ

Update: 2020-02-17 14:50 GMT

ಮುಂಬೈ, ಫೆ.17: ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರರಗಳ ಪಟ್ಟಿಯಿಂದ ಕೈಬಿಡುವ ಅಮೆರಿಕದ ನಿರ್ಧಾರವನ್ನು ಟೀಕಿಸಿರುವ ಶಿವಸೇನೆ, ಇದರಿಂದ ದೇಶದ ಅರ್ಥವ್ಯವಸ್ಥೆಯ ಮೇಲೆ ಮಾರಕ ಹೊಡೆತ ಬೀಳಲಿದೆ ಎಂದಿದೆ.

ಅತಿಥಿಗಳು ಬಂದಾಗಲೆಲ್ಲಾ ಪ್ರೀತಿ ವಿಶ್ವಾಸದ ಸೂಚಕವಾಗಿ ಏನಾದರೊಂದು ಉಡುಗೊರೆ ತರುತ್ತಾರೆ. ಆದರೆ ಅಧ್ಯಕ್ಷ ಟ್ರಂಪ್ ಈ ಸಂಪ್ರದಾಯವನ್ನು ಮುರಿದಿದ್ದಾರೆ. ಟ್ರಂಪ್‌ರನ್ನು ಅದ್ದೂರಿಯಾಗಿ ಸ್ವಾಗತಿಸಲು ಭಾರತ ಸಿದ್ಧತೆ ಮಾಡಿಕೊಳ್ಳುತ್ತಿರುವಂತೆಯೇ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರಗಳ ಪಟ್ಟಿಯಿಂದ ಅಮೆರಿಕ ಕೈಬಿಟ್ಟಿದೆ. ಇದರಿಂದ ಸಬ್ಸಿಡಿ ಮತ್ತು ತೆರಿಗೆ ವಿನಾಯಿತಿಯ ಸೌಲಭ್ಯ ತಪ್ಪಿ ಭಾರತದ ಮೇಲೆ 260 ಮಿಲಿಯನ್ ಡಾಲರ್(ಸುಮಾರು 1,855 ಕೋಟಿ ರೂ.) ಮೊತ್ತದ ತೆರಿಗೆಯ ಹೊರೆ ಬೀಳಲಿದೆ ಎಂದು ಪಕ್ಷದ ಮುಖವಾಣಿ ‘ಸಾಮ್ನ’ದ ಸಂಪಾದಕೀಯ ಲೇಖನದಲ್ಲಿ ತಿಳಿಸಲಾಗಿದೆ.

2020ರ ಫೆಬ್ರವರಿ 10ರಂದು ಅಮೆರಿಕ ತಾನೇ ಸಿದ್ಧಪಡಿಸಿದ ಅಭಿವೃದ್ಧಿ ಶೀಲ ರಾಷ್ಟ್ರಗಳ ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿತ್ತು. ಅಮೆರಿಕದ ಪ್ರಾಚೀನ ‘ಆದ್ಯತೆಯ ವ್ಯಾಪಾರ ಯೋಜನೆ’(ಜಿಎಸ್‌ಪಿ) ಯಿಂದ ಭಾರತದ ರಫ್ತುದಾರರಿಗೆ ಅಮೆರಿಕದ ಮಾರುಕಟ್ಟೆಯಲ್ಲಿ ತೆರಿಗೆ ರಹಿತ ವ್ಯವಹಾರಕ್ಕೆ ಅವಕಾಶ ದೊರಕಿತ್ತು. ಈಗ ಭಾರತವನ್ನು ಅಭಿವೃದ್ಧಿ ಶೀಲ ರಾಷಟ್ರೆಗಳ ಪಟ್ಟಿಯಿಂದ ಹೊರಗೆ ಇಟ್ಟಿರುವುದರಿಂದ ಭಾರತಕ್ಕೆ ಜಿಎಸ್‌ಪಿಯಡಿ ದೊರಕುತ್ತಿದ್ದ ಸೌಲಭ್ಯಗಳು ರದ್ದಾಗಲಿವೆ. ಭಾರತವು ಜಿಎಸ್‌ಪಿ ವ್ಯವಸ್ಥೆಯಡಿ ಅತ್ಯಧಿಕ ಪ್ರಯೋಜನ ಪಡೆಯುವ ರಾಷ್ಟ್ರವಾಗಿದ್ದು 2018ರಲ್ಲಿ 260 ಮಿಲಿಯನ್ ಡಾಲರ್ ಮೊತ್ತದ ತೆರಿಗೆ ವಿನಾಯಿತಿ ಪಡೆದಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಕಚೇರಿಯ ವರದಿಯಲ್ಲಿ ತಿಳಿಸಲಾಗಿದೆ.

 ಭಾರತ ಜಿ-20 ಗುಂಪಿನ ಸದಸ್ಯನಾಗಿರುವುದರಿಂದ ಆ ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರದ ಪಟ್ಟಿಯಿಂದ ಅಮೆರಿಕ ಹೊರಗಿಟ್ಟಿದೆ ಎಂದು ವಿಶ್ವಬ್ಯಾಂಕ್ ಮಾಹಿತಿ ನೀಡಿದೆ. ವಿಶ್ವದಲ್ಲಿ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿದ್ದರೂ ನರೇಂದ್ರ ಮೋದಿ ಸರಕಾರ ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಉನ್ನತ ದರ್ಜೆಯ ದೇಶವೆಂದು ಬಿಂಬಿಸಿದ್ದರು. ತಲಾ ಆದಾಯವನ್ನು ಪರಿಗಣಿಸಿದರೆ ಭಾರತಕ್ಕೆ ವಿಶ್ವದಲ್ಲಿ 146ನೇ ಸ್ಥಾನವಿದೆ. ಇನ್ನು ಮುಂದೆ ಭಾರತದ ಅಭಿವೃದ್ಧಿಗೆ ಜಿಎಸ್‌ಪಿಯಂತಹ ಸೌಲಭ್ಯದ ಅಗತ್ಯವಿಲ್ಲ. ಭಾರತ ಸ್ವಂತ ನೆಲೆಯಲ್ಲಿ ಯಾವುದೇ ದೇಶಕ್ಕೂ ಸ್ಪರ್ಧೆ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿಕೆ ನೀಡಿದ್ದರು.

 ಆದರೆ ಸರಕಾರದ ಈ ನಿಲುವಿಗೆ ದೇಶದ ರಫ್ತುದಾರರು ವಿರೋಧ ಸೂಚಿಸಿದ್ದಾರೆ. ಜಿಎಸ್‌ಪಿ ಸೌಲಭ್ಯ ನಿರಾಕರಿಸುವುದು ಅಮೆರಿಕದ ಮಾರುಕಟ್ಟೆಯಲ್ಲಿ ಭಾರತದ ಪಾಲಿನ ಗಣನೀಯ ಪ್ರಮಾಣವನ್ನು ಬಿಟ್ಟುಕೊಟ್ಟಂತಾಗುತ್ತದೆ. 2018-19ರಲ್ಲಿ ಭಾರತದಿಂದ ಅಮೆರಿಕಕ್ಕೆ 51.4 ಬಿಲಿಯನ್ ಡಾಲರ್ ಮೊತ್ತದ ವಸ್ತುಗಳು ರಫ್ತಾಗಿದ್ದು, ಇದರಲ್ಲಿ 6.35 ಬಿಲಿಯನ್ ಡಾಲರ್ ಮೊತ್ತ ಜಿಎಸ್‌ಪಿಯಡಿ ಬರುತ್ತದೆ. ಇದೀಗ ಈ ಪ್ರಮಾಣದ ರಪ್ತು ಕುಂಠಿತವಾದರೆ ಅದು ಭಾರತದ ಕೈಗಾರಿಕೆಗಳ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಉದ್ಯೋಗ ನಷ್ಟದಂತಹ ಪೂರಕ ಸಮಸ್ಯೆಗಳೂ ಉದ್ಭವವಾಗುತ್ತದೆ ಎಂದು ರಫ್ತುದಾರರು ಕಳವಳ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News