ಇ-ಕೆವೈಸಿ ದೃಢೀಕರಣ ಮಾಡಿಸಲು ಮಾರ್ಚ್ ಅಂತ್ಯದವರೆಗೆ ಅವಕಾಶ

Update: 2020-02-17 18:36 GMT

ಬೆಂಗಳೂರು, ಫೆ. 17: ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಜೋಡಿಸಲು (ಇ-ಕೆವೈಸಿ) ಈ ಹಿಂದೆ ನಿಗದಿ ಪಡಿಸಿದ್ದ ಅಂತಿಮ ಅವಧಿಯನ್ನು ವಿಸ್ತರಣೆ ಮಾಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಾರ್ಚ್ ಅಂತ್ಯದವರೆಗೆ ಹೊಸ ಗಡುವು ನೀಡಿ ಆದೇಶ ನೀಡಲಾಗಿದೆ.

ಪಡಿತರ ಚೀಟಿಗೆ ಇದುವರೆಗೂ ಆಧಾರ್ ಸಂಖ್ಯೆ ಜೋಡಣೆ ಮಾಡದಿರುವ ಎಲ್ಲ ನ್ಯಾಯಬೆಲೆ ಅಂಗಡಿ ವರ್ತಕರು ಅಂಗಡಿಗಳನ್ನು ತೆರೆದು ಇ-ಕೆವೈಸಿಯನ್ನು ಕಡ್ಡಾಯವಾಗಿ ಜ.1 ರಿಂದ 31ರವರೆಗೂ ನಿರ್ವಹಿಸುವಂತೆ ಸೂಚನೆ ನೀಡಲಾಗಿತ್ತು. ಇ-ಕೆವೈಸಿ ನಿರ್ವಹಿಸಲು ಹೆಚ್ಚುವರಿ ಸರ್ವರ್ ಅವಶ್ಯಕತೆ ಇರುವುದರಿಂದ ತಾತ್ಕಾಲಿಕವಾಗಿ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಇದೀಗ ಮರು ಆರಂಭವಾಗಿದ್ದು, ಮಾರ್ಚ್ ತಿಂಗಳ ಅಂತ್ಯದವರೆಗೂ ಇ-ಕೆವೈಸಿ ಮಾಡಲು ಅವಕಾಶ ನೀಡಲಾಗಿದೆ.

ಕಳೆದ 4 ವರ್ಷಗಳ ಹಿಂದೆ ಬೋಗಸ್ ಪಡಿತರ ಚೀಟಿ ತಡೆಯುವ ಸಲುವಾಗಿ ಪರಿಶೀಲನಾ ಕಾರ್ಯವನ್ನು ಸರಕಾರ ನಡೆಸಿತ್ತು. ಆದರೆ, ಆಧಾರ್ ಜೋಡಣೆ ನಿಯಮ ಜಾರಿಗೊಂಡ ಬಳಿಕ ಪಡಿತರ ಚೀಟಿ ಪರಿಶೀಲನೆ ಕಾರ್ಯ ಕೈಗೊಂಡಿರಲಿಲ್ಲ. ಸದ್ಯ ಮೃತರ ಹೆಸರಿನಲ್ಲೇ ಇರುವ ಪಡಿತರ ಚೀಟಿಯನ್ನು ಮುಂದುವರಿಸುತ್ತಿರುವ ಆರೋಪಗಳಿರುವ ಹಿನ್ನೆಲೆಯಲ್ಲಿ ಇ-ಕೆವೈಸಿ ನಿಯಮ ಜಾರಿ ಮಾಡಲಾಗಿದೆ.

ಪ್ರಕ್ರಿಯೆ ಹೇಗೆ?: ಇ-ಕೆವೈಸಿ ದೃಢೀಕರಣ ವೇಳೆ ಎಸ್ಸಿ ಮತ್ತು ಎಸ್ಟಿ ಫಲಾನುಭವಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕಿದೆ. ಎಲ್ಲ ಫಲಾನುಭವಿಗಳು ಗ್ಯಾಸ್ ಸಂಪರ್ಕದ ಕುರಿತು ಮಾಹಿತಿ ನೀಡಬೇಕು. ಪಡಿತರ ಚೀಟಿಯಲ್ಲಿರುವ ಎಲ್ಲ ಸದಸ್ಯರು ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ದೃಢೀಕರಣ ಮಾಡಿಸಬೇಕು. ಸರಕಾರ ಪ್ರತಿ ಫಲಾನುಭವಿ ದೃಢೀಕರಣಕ್ಕೆ 5 ರೂ.ನಂತೆ, ನೋಂದಣಿಗೆ ಗರಿಷ್ಠ 20 ರೂ.ನಂತೆ ನ್ಯಾಯಬೆಲೆ ಅಂಗಡಿಗಳಿಗೆ ಪಾವತಿಸಲಿದೆ. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್ ಐಡಿಯಲ್ಲೇ ಇ-ಕೆವೈಸಿ ಮಾಡಿಸಬೇಕು. ಕಾರ್ಡ್ ಸಂಖ್ಯೆ ನಮೂದಿಸಿದರೆ ಎಷ್ಟು ಸದಸ್ಯರಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ. ಬಳಿಕ ಎಲ್ಲರೂ ಆಧಾರ್ ದೃಢೀಕರಣ ಮಾಡಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News