ಕಠಿಣ ವಿಷಯಗಳನ್ನು ಸುಲಭವಾಗಿಸುವ ಚಿರಯುವಕ ಶಿಕ್ಷಕ ಸೀತಾರಾಮ್ !

Update: 2020-02-18 05:57 GMT
ಫೋಟೊ ಕೃಪೆ : The new indian express 

ತುಮಕೂರು : ಪಿಯುಸಿ ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಹಲವು ವಿದ್ಯಾರ್ಥಿಗಳಿಗೆ ಭಯ ಕಾಡುತ್ತದೆ. ಆದರೆ ತುಮಕೂರಿನ ಬಹುತೇಕ ವಿದ್ಯಾರ್ಥಿಗಳು ನಿರಾಳ. ಏಕೆ ಗೊತ್ತೇ ? ವಿಶ್ವದಾದ್ಯಂತ ಹಲವಾರು ಸಂಶೋಧಕರಿಗೆ, ಶಾಸಕ ಜ್ಯೋತಿ ಗಣೇಶ್, ಮಾಜಿ ಶಾಸಕ ರಫೀಕ್ ಅಹ್ಮದ್ ಹೀಗೆ ಖ್ಯಾತನಾಮರಿಗೆ ಬೋಧಿಸಿದ ಅನುಭವಿ ಶಿಕ್ಷಕರೊಬ್ಬರ ಮಾರ್ಗದರ್ಶನ ಇವರಿಗೆ ಲಭ್ಯ.

90 ವರ್ಷದ ಚಿರಯುವಕ ಗರಣಿ ಸೀತಾರಾಮ್ ಎಂಥ ಕ್ಲಿಷ್ಟ ವಿಷಯವನ್ನು ಕೂಡಾ ಸರಳವಾಗಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡುವ ಕೌಶಲ ಹೊಂದಿದ್ದಾರೆ.

1954ರಲ್ಲಿ ಇವರ ಅಣ್ಣ ಜಿಆರ್‌ಎಸ್ ರಾಘವಾಚಾರ್ ಬೆಂಗಳೈರಿನ ವಿಜಯಾ ಬಿಇಡಿ ಕಾಲೇಜು ಆರಂಭಿಸಿದಾಗ ಮಕ್ಕಳಿಗೆ ಹೇಗೆ ಬೋಧಿಸಬೇಕು ಎಂಬ ಕೌಶಲವನ್ನು ಇವರಿಗೆ ಹೇಳಿಕೊಟ್ಟರು. ಇದು ಇವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಿತು. ಇವರಿಗೆ ಬೋಧನೆ ರಕ್ತಗತವಾಗಿ ಬಂದ ಕಲೆ. ಇವರ ತಂದೆ ರಾಘವಾಚಾರ್ ಅವರು ಸಿದ್ಧಗಂಗೆಯ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಸಂಸ್ಕೃತ ಹೇಳಿಕೊಟ್ಟವರು.

"ಸ್ವಾಮೀಜಿಯವರು ಕುದುರೆ ಮೇಲೆ ಪಾಠ ಕೇಳಲು ಬರುತ್ತಿದ್ದರು. ನನ್ನ ಕಿವಿ ಹಿಂಡುತ್ತಿದ್ದರು. ಭೌತಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಬಳಿಕ ಸಿದ್ಧಗಂಗೆ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದೆ. ನನ್ನ ಬೋಧನೆಯನ್ನು ನೋಡಿದ ಸ್ವಾಮೀಜಿಯವರು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಬೋಧಿಸುವಂತೆ ಸೂಚಿಸಿದರು. ಒಂಬತ್ತು ವರ್ಷ ಈ ವೃತ್ತಿಯಲ್ಲಿ ಮುಂದುವರಿದೆ" ಎಂದು ಸೀತಾರಾಂ ನೆನಪಿಸಿಕೊಳ್ಳುತ್ತಾರೆ.

ನೊಬಲ್ ಪುರಸ್ಕೃತ ಸರ್ ಸಿ.ವಿ.ರಾಮನ್ ಅವರ ಮಾರ್ಗರ್ಶನಲ್ಲಿ 1967-70ರ ಅವಧಿಯಲ್ಲಿ ಪ್ರಾಜೆಕ್ಟ್ ಕೆಲಸ ಮಾಡುವ ಅವಕಾಶ ಇವರಿಗೆ ಲಭಿಸಿತ್ತು. 1974ರಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆ ಆರಂಭಿಸಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ, ಆಡಳಿತಾಧಿಕಾರಿಯಾಗಿದ್ದರೂ ಬೋಧನೆ ಬಿಟ್ಟಿಲ್ಲ. ಎನ್‌ಸಿಇಆರ್‌ಟಿ ಇವರ ವಿನೂತನ ಬೋಧನಾ ಕೌಶಲ ಗುರುತಿಸಿ ಎರಡು ಬಾರಿ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಿದೆ.

ಇವರ 17 ವಿದ್ಯಾರ್ಥಿಗಳು ಜರ್ಮನಿಯ ಮ್ಯೂನಿಚ್ ವಿವಿಯಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಅಪ್ಪಟ ಕ್ರಿಕೆಟ್ ಪ್ರೇಮಿಯೂ ಆಗಿರುವ ಇವರು 20 ವರ್ಷ ಕಾಲ ಕ್ಲಬ್ ಕ್ರಿಕೆಟ್ ಆಡಿದ್ದಾರೆ.

ಕೃಪೆ : The new indian express

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News